ಬಂಟ್ವಾಳ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ದಿನನಿತ್ಯ ಮಂಗಳೂರಿಗೆ ತೆರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಪ್ರತಿನಿತ್ಯ ಬೆಳಗ್ಗೆ ಸಾವಿರಾರು ಮಂದಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಸಂಕಷ್ಟು ಅನುಭವಿಸುತ್ತಿದ್ದಾರೆ. ಇದೀಗ ಬಿ.ಸಿ.ರೋಡು-ಮಂಗಳೂರು ಮಧ್ಯೆ ಸಿಟಿ ಬಸ್ಸು ಆರಂಭಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವೂ ಆರಂಭವಾಗಿದೆ.
‘’ಬಿ.ಸಿ.ರೋಡಿನಿಂದ ಮಂಗಳೂರಿಗೆ ಸಿಟಿ ಬಸ್ ಆರಂಭಿಸಿ, ಪುಣ್ಯ ಕಟ್ಟಿಕೊಳ್ಳಿ’’ ಎಂಬುದೇ ಅಭಿಯಾನದ ಟ್ಯಾಗ್ ಲೈನ್..ಬಂಟ್ವಾಳ ತಾಲೂಕಿನ ಹತ್ತಾರು ಗ್ರಾಮೀಣ ಭಾಗದಿಂದ ಶಿಕ್ಷಣ, ಉದ್ಯೋಗಕ್ಕಾಗಿ ಹೆಚ್ಚಿನ ಮಂದಿ ಮಂಗಳೂರಿಗೆ ತೆರಳುತ್ತಿದ್ದು, ಅವರು ಬೆಳಗ್ಗಿನ ಹೊತ್ತು ಬಿ.ಸಿ.ರೋಡಿಗೆ ಬಂದು ಬಳಿಕ ಬಸ್ಸಿನ ಮೂಲಕ ಮಂಗಳೂರಿಗೆ ತೆರಳುತ್ತಾರೆ. ಬೆಳಗ್ಗೆ ಸುಮಾರು ೬.೩೦ರಿಂದ ೯ ಗಂಟೆಯವರೆಗೆ ಸಾವಿರಾರು ಮಂದಿ ಬಸ್ಸಿಗೆ ಕಾಯುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ಸು ಸಿಗದೆ ಶಾಲಾ-ಕಾಲೇಜು, ಉದ್ಯೋಗ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಇದರ ಹಿಂದಿನ ಉದ್ದೇಶ.
ಬೆಳಗ್ಗಿನ ಹೊತ್ತು ಹೆಚ್ಚಿನ ಬಸ್ಸು ಸಂಚಾರವಿದ್ದರೂ, ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಧರ್ಮಸ್ಥಳ ಮೊದಲಾದ ಭಾಗದಿಂದ ಆಗಮಿಸುವ ಸರಕಾರಿ, ಖಾಸಗಿ ಬಸ್ಸುಗಳು ಬಿ.ಸಿ.ರೋಡಿಗೆ ಬರುವ ಮೊದಲೇ ತುಂಬಿರುವುದರಿಂದ ಬಿ.ಸಿ.ರೋಡಿನಲ್ಲಿ ಕಾಯುತ್ತಿರುವವರಿಗೆ ತೆರಳುವುದು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಕೆಎಸ್‌ಆರ್‌ಟಿಸಿಯು ಒಂದಷ್ಟು ಬಸ್ಸುಗಳನ್ನು ಬಿ.ಸಿ.ರೋಡಿನಿಂದ ಮಂಗಳೂರಿಗೆ ಕಳುಹಿಸುತ್ತಿದ್ದು, ಏಕಕಾಲದಲ್ಲೇ ಪ್ರಯಾಣಿಕರು ಹೆಚ್ಚಿರುವುದರಿಂದ ಈ ಬಸ್ಸುಗಳು ಕೂಡ ಸಾಲದ ಪರಿಸ್ಥಿತಿ ಇದೆ. ಒಂದು ಬಸ್ಸು ಬಂದು ನಿಂತರೆ ಸುಮಾರು ೨೦೦ಕ್ಕೂ ಅಽಕ ಮಂದಿಗೆ ಆ ಬಸ್ಸಿಗೆ ನುಗ್ಗಲು ಯತ್ನಿಸಿ ವಿಫಲರಾಗಿ ಮತ್ತೊಂದು ಬಸ್ಸಿಗೆ ಕಾಯಬೇಕಾದ ಸ್ಥಿತಿ ಇದೆ. ಹೀಗಾಗಿ ಪ್ರತಿ ಬಸ್ಸುಗಳು ಕೂಡ ಇದೇ ರೀತಿ ತುಂಬುವುದರಿಂದ ಸಾಕಷ್ಟು ಮಂದಿಗೆ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ತಲುಪುವುದು ಅಸಾಧ್ಯವಾಗುತ್ತಿದೆ.
ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಬಸ್ಸನ್ನು ಹೆಚ್ಚಿಸುವಂತೆ ಬೇಡಿಕೆಗಳು ಬರುತ್ತಲೇ ಇದೆ. ಆದರೆ ಒಂದೇ ಸಮಯದಲ್ಲಿ ಈ ರೀತಿಯ ರಶ್ ಇರುವುದರಿಂದ ಕೆಎಸ್‌ಆರ್‌ಟಿಸಿಗೂ ಇನ್ನಷ್ಟು ಬಸ್ಸುಗಳನ್ನು ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡು-ಮಂಗಳೂರು ಮಧ್ಯೆ ಸಿಟಿ ಬಸ್ಸು ಆರಂಭಿಸಿ ಪುಣ್ಯ ಕಟ್ಟಿಕೊಳ್ಳಿ ಎಂಬ ಬರಹವುಳ್ಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆದರೆ ಬರೀ ಬೆಳಗ್ಗಿನ ಹೊತ್ತು ಇನ್ನೂ ಹೆಚ್ಚಿನ ಬಸ್ಸು ಹಾಕುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ.