ಬಂಟ್ವಾಳ: ಜನವರಿ 22ರಿಂದ 29ರವರೆಗೆ ಬಂಟ್ವಾಳದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಗೋವಿಂದಸ್ವಾಮಿ ಮಂದಿರ ಟ್ರಸ್ಟ್ ವತಿಯಿಂದ ಸುವರ್ಣ ವರ್ಷಾಚರಣೆ ಪ್ರಯುಕ್ತ ಶ್ರೀಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠಾ ಮಹೋತ್ಸವ, ಉಚಿತ ಸಾಮೂಹಿಕ ವಿವಾಹ ಮತ್ತು ನೂತನ ಮಂದಿರದ ಲೋಕಾರ್ಪಣೆ ನಡೆಯಲಿದೆ ಎಂದು ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಮಂಗಳವಾರ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ಶಿವಕ್ಷೇತ್ರ ಇಜ್ಜದ ಸತ್ಯನಾರಾಯಣ ಭಟ್ ನೇತೃತ್ವದಲ್ಲಿ ತಂತ್ರಿಗಳಾದ ವೇ.ಮೂ.ನಾರಾಯಣ ಭಟ್ ಕೊರೆಕ್ಕಾನ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
22ರಂದು ಮಧ್ಯಾಹ್ನ ಶ್ರೀ ಗುರುದ್ವಯರ ವಿಗ್ರಹ ಮತ್ತು ಹಸಿರುವಾಣಿ ಮೆರವಣಿಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನ ದಿಂದ ಹೊರಡಲಿದ್ದು, ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಲಿದ್ದಾರೆ. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿರುವರು ಎಂದರು.
ಜ.26 ರಂದು ಗುರುದ್ವಯರ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸ್ವಾಮೀಜಿಗಳ ಜೊತೆ ಜನಪ್ರತಿನಿಧಿಗಳು ಗಣ್ಯರು ಪಾಲ್ಗೊಳ್ಳುತ್ತಾರೆ. ಜ.27 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯ ನಡೆಯಲಿದ್ದು, ಅಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಇಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು,ಇನ್ನು ಮುಂದೆ ಸಾಮಾಜಿಕ ಪರಿವರ್ತನೆಯ ಕಾರ್ಯಕ್ರಮಗಳು ನಡೆಯಲಿದೆ. ಸಭಾಂಗಣ ನಿರ್ಮಾಣದ ಯೋಜನೆ, ಯೋಚನೆ ಮಾಡಿದ್ದು, ಸರಕಾರ ಸಹಾಯಧನದ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ರಾಮದಾಸ ಬಂಟ್ವಾಳ ಮಾತನಾಡಿ, ಮಂದಿರ ಬಡವ, ಶ್ರೀಮಂತ, ಜಾತಿ, ಮತ ಬೇಧವಿಲ್ಲದೆ ಎಲ್ಲರಿಗೂ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಹರೀಶ್ ಶೆಟ್ಟಿ, ಮಂದಿರ ಆಡಳಿತ ಸಮಿತಿ ಗೌರವಾಧ್ಯಕ್ಷ ಸುರೇಶ್ ಕುಲಾಲ್, ಕಾರ್ಯದರ್ಶಿ ಹರೀಶ್ ಎಂ, ಪ್ರಮುಖರಾದ ಸೋಮಪ್ಪ ಪೂಜಾರಿ, ದೇವಕಿ, ನಾಗೇಶ್ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.