ಕಲ್ಲಡ್ಕ

ಕಲ್ಲಡ್ಕ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಕಿರಣ್ ಬೇಡಿ ಸಹಿತ ಗಣ್ಯರ ದಂಡು

  • ಡಿ.15ರಂದು ಕಾರ್ಯಕ್ರಮ, 3399 ಪ್ರತಿಭೆಗಳ ಬೃಹತ್ ಸಂಗಮ

 ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 15ರಂದು ಸಂಜೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಲಿದ್ದು, ಪುದುಚೇರಿ ಲೆ.ಗವರ್ನರ್ ಡಾ. ಕಿರಣ್ ಬೇಡಿ ಸಹಿತ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗುರುವಾರ ಸಂಜೆ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ರಾಷ್ಟ್ರೀಯ ವಿಚಾರಧಾರೆಗಳನ್ನು ಬೋಧಿಸುತ್ತಿರುವ ಸಂಸ್ಥೆಯ ಶಿಶುಮಂದಿರದಿಂದ ಪದವಿ ವಿದ್ಯಾರ್ಥಿಗಳವರೆಗೆ 3399 ಪ್ರತಿಭೆಗಳ ಬೃಹತ್ ಸಂಗಮ ಇಲ್ಲಿ ನಡೆಯಲಿದ್ದು, ಇವರಲ್ಲಿ ಸುಮಾರು 40ರಷ್ಟು ಮಂದಿ ವಿಶೇಷಚೇತನ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಚಂದ್ರಯಾನ ಉಡಾವಣೆ, ರಥಯಾತ್ರೆ, ಅಯೋಧ್ಯೆ ಹೋರಾಟ ಮತ್ತು ರಾಮಮಂದಿರ ಚಿತ್ರಣಗಳು, ಬೆಂಕಿ ಸಾಹಸ ಹಾಗೂ ಹಲವು ಸಾಹಸಪ್ರದರ್ಶನಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 3 ಸಾವಿರ ಮಂದಿ ನೋಡಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ ಎಂದರು.

ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ,  ಸುರೇಶ್ ಅಂಗಡಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ನಾಗೇಶ್ , ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್, ಕರಡಿಸಂಗಣ್ಣ, ಸಹಿತ ಸಂಸದರು, ರಾಜ್ಯದ ಅನೇಕ ಶಾಸಕರು ಮಾಜಿ ಶಾಸಕರು ಮತ್ತು ಐ.ಪಿ.ಎಸ್. ಅಧಿಕಾರಿಗಳಾದ ಆಶಿತ್ ಮೋಹನ್ ಪ್ರಸಾದ್, ಸೀಮಂತ್ ಕುಮಾರ್ ಸಿಂಗ್, ಚಂದ್ರಶೇಖರ್ , ಪಿ.ಎಸ್. ಹರ್ಷ, ಚಲನಚಿತ್ರನಟಿ ಪ್ರಣೀತಾ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

73 ಮಕ್ಕಳಿಂದ 1980 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಪ್ರಸ್ತುತ ಸುಮಾರು 15 ಎಕ್ರೆ ಪ್ರದೇಶದಲ್ಲಿ ಮುನ್ನಡೆದಿದ್ದು, ಪದವಿ ಕಾಲೇಜು ದಶಮಾನೋತ್ಸವ ಸಂಭ್ರಮದಲ್ಲಿದೆ. ಮಾತೃಭಾಷೆ ಶಿಕ್ಷಣವನ್ನು ಶುಲ್ಕರಹಿತವಾಗಿ ನೀಡುತ್ತಿರುವ ಹಾಗೂ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಇದು ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ಪದವಿ ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಮಾತೃಭಾಷೆ ಶಿಕ್ಷಣ ನೀಡುವ ಮೂಲಕ ಶಾಲೆ ಉಳಿಸಿ:

ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲ ಭಾಷೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಅತ್ತ ಕನ್ನಡವೂ ಅಲ್ಲದ, ಇತ್ತ ಇಂಗ್ಲೀಷೂ ಅಲ್ಲದ ಸ್ಥಿತಿಗೆ ಕೊಂಡೊಯ್ಯುವ ಬದಲು ಮಾತೃಭಾಷೆ ಶಿಕ್ಷಣ ನೀಡುವ ಮೂಲಕ ಸರಕಾರಿ ಶಾಲೆ ಉಳಿಸುವ ಕಾರ್ಯ ನಡೆಸಬೇಕು ಎಂದು ಡಾ. ಪ್ರಭಾಕರ ಭಟ್ ಹೇಳಿದರು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕೊನೇ ಮೊಳೆಯನ್ನು ಸಮ್ಮಿಶ್ರ ಸರಕಾರ ಇದ್ದಾಗ ಹೊಡೆಯಲಾಗಿತ್ತು ಎಂದ ಭಟ್, ಸರಕಾರಿ ಶಾಲೆಗಳಲ್ಲಿ ಡೊನೇಶನ್ ಸಂಸ್ಕೃತಿಯನ್ನು ಆಂಗ್ಲ ಭಾಷಾ ವ್ಯಾಮೋಹ ಮಾಡುತ್ತಿದೆ. ಆಂಗ್ಲ ಮಾಧ್ಯಮ ಬಂದರೆ ನಮ್ಮತನ ಹೊರಟುಹೋಗುತ್ತದೆ. ಶಾಲೆ ಕಮರ್ಷಿಯಲ್ ಆಗುತ್ತದೆ. ನಮಗೆ ಇಂಟರ್ ನ್ಯಾಶನಲ್ ಸ್ಕೂಲ್ ಬೇಡ, ನ್ಯಾಶನಲ್ ಸ್ಕೂಲ್ ಮಾತೃಭಾಷಾ ಶಿಕ್ಷಣ ನೀಡುವಂತಾಗಬೇಕು ಎಂದ ಭಟ್, ಜೀವನ ಮೌಲ್ಯಗಳನ್ನು ರಾಷ್ಟ್ರೀಯತೆಯನ್ನು ಬೋಧಿಸುವ ಕನ್ನಡ ಶಾಲೆ ನಮ್ಮದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳಲ್ಲಿ 4750 ಮಂದಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಆಂಗ್ಲ ಭಾಷಣ ಸ್ಪರ್ಧೆಗಳಲ್ಲೂ ಅವರು ಪ್ರಥಮ ಬಹುಮಾನ ಪಡೆಯಲು ಶಕ್ತರಾಗಿದ್ದಾರೆ ಎಂದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts