ಈ ವಾರವಿಡೀ ಮಧ್ಯಾಹ್ನದ ಬಳಿಕ ಸರಿಯಾಗಿ 3 ಗಂಟೆ ವೇಳೆಯಾಗುವ ಹೊತ್ತಿಗೆ ಮಿಂಚು ಸೆಳೆಯುತ್ತದೆ. ಜೊತೆಗೆ ದೊಡ್ಡದಾದ ಗುಡುಗು, ಕೆಲವೆಡೆ ಸಿಡಿಲಿನ ಧ್ವನಿ. ಈಗಾಗಲೇ ಕಳೆದ ಎರಡು ದಿನಗಳಲ್ಲಿ ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಸಿಡಿಲಿನಾಘಾತಕ್ಕೆ ಮನೆಗಳಿಗೆ ಹಾನಿ ಉಂಟಾಗಿದೆ. ಮಂಗಳವಾರ, ಬುಧವಾರ ಒಮ್ಮೆ ಮಳೆ ಸುರಿದು ಒಂದು ಗಂಟೆಯಲ್ಲಿ ಮೊದಲಿನಂತಾದರೆ, ಗುರುವಾರ ಮುಸ್ಸಂಜೆಯಾದರೂ ನಿಲ್ಲುವ ಮನಸ್ಸು ಮಾಡಿಲ್ಲ. ಅಲ್ಲಲ್ಲಿ ಹೂಳೆತ್ತದ ಚರಂಡಿ, ರಸ್ತೆ ಬದಿಯಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೇ ಇರುವ ನಮ್ಮ ಆಡಳಿತಗಳೇ ನಿರ್ಮಿಸಿರುವ ಅವ್ಯವಸ್ಥೆಗಳಿಂದ ಜನಸಾಮಾನ್ಯರು ತೊಂದರೆಗೊಳಗಾಗಬೇಕಾಯಿತು.
ಶಾಲೆ, ಕಾಲೇಜುಗಳನ್ನು ಮುಗಿಸಿ ಮನೆಗೆ ತೆರಳುವ ವಿದ್ಯಾರ್ಥಿ ಸಮೂಹ ಮಳೆಯಿಂದ ತೊಂದರೆಗೊಳಪಟ್ಟರೆ, ಕಚೇರಿ ಮುಗಿಸಿ ಮನೆಗೆ ತೆರಳುವವರಿಗೂ ನಿಲ್ಲದ ಮಳೆ ಕಿರಿಕಿರಿ ಉಂಟುಮಾಡಿತು. ಸರಿಯಾದ ಶೆಲ್ಟರ್ ಇಲ್ಲದ ಬಸ್ ನಿಲ್ದಾಣ, ನಿಲ್ಲಲೂ ಕೂರಲೂ ಆಗದಂಥ ಬಿ.ಸಿ.ರೋಡ್ ನ ಅಲ್ಲಲ್ಲಿ ನಿರ್ಮಿಸಿದ ಖಾಸಗಿ ಸಹಭಾಗಿತ್ವದ ಬಸ್ ಶೆಲ್ಟರ್ ಎಂಬ ಜಾಗ ಸಮಸ್ಯೆಗೆ ಕಾರಣವಾದರೆ, ಸರ್ವೀಸ್ ರಸ್ತೆ ಸಹಿತ ಬಂಟ್ವಾಳ, ಬಿ.ಸಿ.ರೋಡಿನ ವಸತಿ ಬಡಾವಣೆ, ಮುಖ್ಯ ರಸ್ತೆ ಸಹಿತ ಎಲ್ಲೆಲ್ಲಿ ಚರಂಡಿ ಹೂಳೆತ್ತಲಿಲ್ಲವೋ, ಎಲ್ಲೆಲ್ಲಿ ಚರಂಡಿಗಳಿಲ್ಲವೋ ಅಲ್ಲೆಲ್ಲಾ ಕೃತಕ ನೆರೆ ಕಂಡುಬಂತು. ನೇತ್ರಾವತಿ ನದಿ ಉಕ್ಕಿ ಹರಿಯದೇ ಇದ್ದರೂ, ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲದ ಕಾರಣ ಸಣ್ಣ ಮಳೆಯೂ ವ್ಯವಸ್ಥೆಯನ್ನೇ ಏರುಪೇರು ಮಾಡುತ್ತಿದೆ.
www.bantwalnews.com Editor: Harish Mambady For Advertisements Contact: 9448548127