ಬಂಟ್ವಾಳ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ತಂತಿಗಳು ಕಡಿದುಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಇವನ್ನು ಬದಲಾಯಿಸದೇ ಇದ್ದಲ್ಲಿ ವಾಮದಪದವಿನ ಪಿಲಿಮೊಗರುವಿನಲ್ಲಿ ತಂದೆ, ಮಗಳು ಸಾವನ್ನಪ್ಪಿದಂತೆ ಮತ್ತಷ್ಟು ಅನಾಹುತಗಳು ಸಂಭವಿಸಬಹುದು ಎಂದು ವಿದ್ಯುತ್ ಬಳಕೆದಾರರು ಅಧಿಕಾರಿಗಳ ಬಳಿ ಒತ್ತಾಯಿಸಿದ್ದಾರೆ.
ಬಿ.ಸಿ.ರೋಡ್ ಕೈಕುಂಜೆಯಲ್ಲಿರುವ ಬಂಟ್ವಾಳ ದ ಮೆಸ್ಕಾಂ ಭವನದಲ್ಲಿ ಶನಿವಾರ ಅಧೀಕ್ಷಕ ಇಂಜಿನಿಯರ್ ಮಂಜಪ್ಪ ನೇತೃತ್ವದಲ್ಲಿ ನಡೆದ ಮೆಸ್ಕಾಂ ಬಂಟ್ವಾಳ ನಂ.1 ಹಾಗೂ ನಂ.2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಬಳಕೆದಾರರು, ಆಗಾಗ್ಗೆ ಸಂಭವಿಸುವ ವಿದ್ಯುತ್ ಕಡಿತ, ಮೀಟರ್ ರೀಡಿಂಗ್ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಎ.ತುಂಗಪ್ಪ ಬಂಗೇರ, ಮೆಸ್ಕಾಂ ನಿರ್ಲಕ್ಷ್ಯ ದಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರವಷ್ಟೇ ಅಲ್ಲ, ಕುಟುಂಬದ ಸದಸ್ಯನಿಗೆ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಅಜ್ಜಿಬೆಟ್ಟು, ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಹಳೆಯದಾದ ವಿದ್ಯುತ್ ತಂತಿಗಳಿದ್ದು, ಇವನ್ನು ಬದಲಾಯಿಸದೇ ಇದ್ದ ಪರಿಣಾಮ ಇತ್ತೀಚಿನ ಅನೇಕ ವರ್ಷಗಳಲ್ಲಿ ರೈತರು, ದನ ಕರು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಳೆಯ ವಯರ್ ಕಡಿದು ಸ್ಪರ್ಶಿಸಿ ಮೃತಪಟ್ಟ ಘಟನೆಯೂ ನಡೆದಿದೆ. ಕೂಡಲೇ ತಂತಿ ಬದಲಾಯಿಸಿ, ಈ ಕುರಿತು ಸರಕಾರಕ್ಕೂ ನಾವು ಒತ್ತಾಯ ಮಾಡುತ್ತೇವೆ ಎಂದರು. ನಂದಾವರದ ಭಾಗದಲ್ಲಿ ನನಗೆ ತಿಳಿದಂತೆ 55 ವರ್ಷಗಳಿಂದ ತಂತಿ ಬದಲಾಯಿಸಿಲ್ಲ ಎಂದು ಕೃಷಿಕ ಇದಿನಬ್ಬ ದೂರಿದರು.
ಒಂದು ವಾರದಲ್ಲಿ ಮೆಸ್ಕಾಂ ಬಿಲ್ ಗಳ ಪ್ರಿಂಟ್ ಮಾಸಿ ಹೋಗುತ್ತದೆ ಎಂದು ವಾಸು ಮಾಸ್ಟರ್, ನರೇಶ್ ಹೇಳಿದಾಗ, ಗುಣಮಟ್ಟದ ಪೇಪರ್ ತರಿಸಿ ಬಿಲ್ ನೀಡಬೇಕು ಎಂದುಎಸ್.ಇ. ಸೂಚನೆ ನೀಡಿದರು. ಮೆಸ್ಕಾಂ ಮೀಟರ್ ರೀಡಿಂಗ್ ನಿಗದಿತ ದಿನದಂದು ಮಾಡುವುದಿಲ್ಲ ಎಂಬ ದೂರುಗಳು ಬಂದವು.
ಗುತ್ತಿಗೆದಾರರ ಸಮಸ್ಯೆಗೆ ಪ್ರತ್ಯೇಕ ಸಭೆ:
ಗುತ್ತಿಗೆದಾರರ ಸಮಸ್ಯೆ ಇದ್ದರೆ ಅದಕ್ಕೆ ಪ್ರತ್ಯೇಕ ಸಭೆ ಕರೆಯುತ್ತೇನೆ. 1019 ಕಾಮಗಾರಿಗಳು ಬಾಕಿ ಇದ್ದು, ಇದನ್ನು ಕೂಡಲೇ ನಿರ್ವಹಿಸಿ ಎಂದು ಹೇಳಿದ ಮಂಜಪ್ಪ, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ, ಕಳಪೆ ತಂತಿಗಳಿದ್ದರೆ ಕೂಡಲೇ ಬದಲಾಯಿಸಿ, ಈ ತಿಂಗಳಾಂತ್ಯಕ್ಕೆ ಕೆಲಸ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಎಕ್ಸಿಕ್ಯುಟಿವ್ ಇಂಜಿನಿಯರ್ ರಾಮಚಂದ್ರ, ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ಪ್ರಶಾಂತ ಪೈ ಸ್ವಾಗತಿಸಿದರು. ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್ ನಾರಾಯಣ ಭಟ್ ವಂದಿಸಿದರು.