ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಶಿಬಿರಾರ್ಥಿಗಳಿಂದ ನಡೆದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.
ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜ ಮತ್ತು ವಿದ್ಯಾರ್ಥಿಗಳನ್ನು ಎಚ್ಚರಿಸುವ ಬೀದಿ ನಾಟಕ ವ್ಯಸನಮುಕ್ತ ವಿದ್ಯಾರ್ಥಿ ಶಕ್ತಿ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳು ಬೀಡಿ, ಸಿಗರೇಟು, ಗಾಂಜಾಗಳನ್ನು ಸೇವಿಸುವ ಮತ್ತು ಓದಿಗಿಂತ ಮೋಜು ಲೇಸು ಎನ್ನುತ್ತ ಮಜಾ ಮಾಡಬೇಕೆನ್ನುವ ದೃಶ್ಯದಲ್ಲಿ ಕಾಣುತ್ತಾರೆ. ಆಗ ಓರ್ವ ಗೆಳೆಯ ಅವರಿಗೆ ಬದುಕು ಇಷ್ಟೇ ಅಲ್ಲವೆಂದು ಬೋಽಸುತ್ತಾನೆ. ಬದುಕೆಂದರೆ ಬರಿ ಮೋಜಲ್ಲ.. ಗೆಳೆಯರ ಸಂಗದಿ ದುಶ್ಚಟ ಕಲಿತು ವ್ಯರ್ಥಗೊಳಿಸುವ ಹೊತ್ತಲ್ಲ.. ಎಂಬ ಕನ್ನಡ ಉಪನ್ಯಾಸಕಿ ಬರೆದ ಹಾಡಿನ ಮೂಲಕ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ತಲುಪಿಸುತ್ತಾರೆ.
ತಂದೆ, ತಾಯಿಯರಿಂದ ಹಣ ಕಸಿದು, ದುಶ್ಚಟಗಳ ದಾಸನಾದ ವ್ಯಕ್ತಿ, ಕ್ಯಾನ್ಸರ್ ಇನ್ನಿತರ ಮಾರಕ ರೋಗಗಳಿಗೆ ಬಲಿಯಾಗುವುದು, ಆಗ ಅವನ ತಂದೆ ತಾಯಿ ವೈದ್ಯರ ಬಳಿಗೆ ತೆರಳಿ ಮಗನನ್ನು ಬದುಕುಳಿಸಲು ಬೇಡುವುದು, ವೈದ್ಯರು ಕೈಮೀರಿದ ಸನ್ನಿವೇಶ ಉಂಟಾಗುವುದು, ವೈದ್ಯರು ಹೆತ್ತವರಿಗೆ ಮಕ್ಕಳನ್ನು ದಾರಿ ತಪ್ಪದಂತೆ ಎಚ್ಚರಿಸುವುದು, ಕೇಳಿದಾಗಲೆಲ್ಲ ಹಣ ನೀಡುವುದು ತಪ್ಪು ಎನ್ನುವ ಸಂದೇಶವನ್ನು ನೀಡುವುದು ಸುಂದರವಾಗಿ ಮೂಡಿಬಂದಿದೆ. ಧೂಮಪಾನ ಕ್ಯಾನ್ಸರ್‌ಕಾರಕ, ವ್ಯಸನಗಳಿಗೆ ದಾಸ, ಮನೆಮಂದಿಗೆ ಮೋಸ, ಕುಡಿತದ ಫಲ ಕೈತುಂಬಾ ಸಾಲ, ಮದ್ಯಪಾನ ಬಿಡಿಸಿರಿ ಜೀವನವನ್ನು ಉಳಿಸಿರಿ, ಗಾಂಜಾ ಗಮ್ಮತ್ತು ಆರೋಗ್ಯಕ್ಕೆ ಆಪತ್ತು, ಕುಡಿತದ ಬಾಳು ನರಕದ ಗೋಳು, ವ್ಯಸನದ ಹಿಂದೆ ಹೋಗದಿರಿ ಮಸಣವ ಬೇಗ ಸೇರದಿರಿ, ಕೆಟ್ಟ ವ್ಯಸನಗಳಿಂದ ದೂರ ಬದುಕು ಮುತ್ತಿನ ಹಾರ ಎಂಬ ಘೋಷಣೆ ಮತ್ತು ದೇಹ ಹಿತ.. ದೇಶ ಹಿತ.. ದುಶ್ಚಟಮುಕ್ತ ಭಾರತ ಎಂಬ ಕರೆ ನೀಡುವುದರೊಂದಿಗೆ ನಾಟಕಕ್ಕೆ ತೆರೆ ಎಳೆಯಲಾಯಿತು.
ಹಾಸ್ಯಭರಿತ, ವ್ಯಂಗ್ಯ ಟಾಂಗ್‌ಗಳು, ದುಃಖಭರಿತ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೆಲ ದೃಶ್ಯಗಳು ಕೆಲವರ ಕಣ್ಣಲ್ಲಿ ನೀರು ಬರಿಸಿತು ಮತ್ತು ಕೆಲವರು ವಿದ್ಯಾರ್ಥಿಗಳ ಬಳಿ ತೆರಳಿ ಅಭಿನಂದಿಸಿದರು. ಅಮಲೇರಿದ ವ್ಯಕ್ತಿಯೊಬ್ಬರು ನಾಟಕವಾಡಿದ ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಸನ್ನಿವೇಶವೂ ಸೃಷ್ಟಿಯಾಯಿತು.
ಸಂತೋಷ್ ಮೂಡಬಿದಿರೆ ಮತ್ತು ಸಹಶಿಬಿರಾಽಕಾರಿ ಪ್ರವೀಣ್ ಪಿ. ನಿರ್ದೇಶಿಸಿದ್ದರು. ಗಂಗಾರತ್ನ ಮುಗುಳಿ ಅವರ ಸಾಹಿತ್ಯ, ಮುಖ್ಯ ಶಿಬಿರಾಧಿಕಾರಿ ಅಶೋಕ್ ಎಸ್. ಅವರ ಮಾರ್ಗದರ್ಶನವಿತ್ತು.
ವಿಟ್ಲ ಪ.ಪಂ.ಅಧ್ಯಕ್ಷ ಅರುಣ್ ಎಂ.ವಿಟ್ಲ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸಹಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.