ನಿಮ್ಮ ಧ್ವನಿ

ಕಸ ಎಸೆಯುವವರಿಗೆ ದಂಡ ವಿಧಿಸಿ, ಎಸೆಯದವರನ್ನು ಪುರಸ್ಕರಿಸಿ

  • ನಿಯಮ ಪಾಲಕರನ್ನು ಗೌರವಿಸದಿದ್ದರೆ, ಉಲ್ಲಂಘಿಸುವವರಿಗೆ ಧೈರ್ಯ ಹೆಚ್ಚಾಗುತ್ತದೆ

ಅಕ್ಟೋಬರ್ 2ಕ್ಕೆ ಪೂರ್ವಭಾವಿಯಾಗಿ ಇಡೀ ಬಿ.ಸಿ.ರೋಡಿನಲ್ಲಿ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮಾಡಲಾಗಿತ್ತು, ಅದಾದ ಬಳಿಕ ಅ.2ರಂದು ಸ್ವಚ್ಛ ಭಾರತ ಹಿನ್ನೆಲೆಯಲ್ಲಿ ಮೆರವಣಿಗೆ ನಡೆದಿತ್ತು. ಕಸದ ರಾಶಿಗೂ ಬಂಟ್ವಾಳಕ್ಕೂ ಬಹಳ ನಂಟಿದೆ. ಸ್ವಚ್ಛತಾ ಆಂದೋಲನ ಕೇವಲ ಘೋಷಣೆ ಮಾಡಿದರಷ್ಟೇ ಸಾಲದು, ಆಡಳಿತ ಮತ್ತು ಜನತೆ ಸಮನ್ವಯತೆ ಇದಕ್ಕೆ ಬೇಕು ಎಂಬುದು ಸರ್ವವಿದಿತ. ಬಂಟ್ವಾಳದ ಮಟ್ಟಿಗೆ ಇದು ಕಡಿಮೆ. ಕಸದ ಬುಟ್ಟಿ ಇದ್ದರೂ ಅಲ್ಲಿಗೆ ಹಾಕದೆ ಕಂಡಕಂಡಲ್ಲಿ ಕಸವನ್ನು ರಾಶಿ ಹಾಕಿ, ಕಂಡಕಂಡಲ್ಲಿ ಎಸೆದು ಆಡಳಿತ, ಜನಪ್ರತಿನಿಧಿಗಳತ್ತ ಬೆರಳು ತೋರಿಸಿದರೆ, ಇಂದು ಕಸ ಕಂಡರೆ ಮರುದಿನವಾದರೂ ಅದನ್ನು ವಿಲೇವಾರಿ ಮಾಡದೆ ಕೇವಲ ಬಾಯ್ಮಾತಿಗೆ ಕಸ ಎಸೀಬೇಡಿ ಎಂದು ಘೋಷಣೆ ಮಾಡಿ ಕೈತೊಳೆದುಕೊಳ್ಳುವ ಪರಿಪಾಠ ಆಡಳಿತಕ್ಕುಂಟು ಎಂಬ ಸಾರ್ವಜನಿಕರ ದೂರು ಇಂದು ನಿನ್ನೆಯದಲ್ಲ. ಇದಕ್ಕೆ ತಾಜಾ ಉದಾಹರಣೆ ಭಾನುವಾರ ಸಂಜೆ ಬಿ.ಸಿ.ರೋಡಿನ ಫ್ಲೈಓವರ್ ನಡಿ ಕಂಡ ಕಸದ ರಾಶಿ. ಓದುಗ ರಾಜೇಶ್ ರೈ ಇದನ್ನು ಕಂಡು ಫೊಟೋ ತೆಗೆದು ಬಂಟ್ವಾಳನ್ಯೂಸ್ ಗೆ ನೀಡಿ ಗಮನ ಸೆಳೆದಿದ್ದಾರೆ.

ಅವರು ಹೀಗೆ ಕೇಳುತ್ತಾರೆ.

ಇದೇನು ಬಿ.ಸಿ.ರೋಡಿನ ಪೇಟೆಯ ಹ್ರದಯಭಾಗದಲ್ಲಿ ಕೊಳೆತು ನಾರುವ ಗಬ್ಬು ವಾಸನೆ.. ಇಲ್ಲಿಯೇ ತ್ಯಾಜ್ಯ ಸಂಗ್ರಹಣಾ ಸ್ಥಳವಾ? ಪುರಸಭೆಯ ಎಚ್ಚರಿಕೆ ಫಲಕ ಇದ್ದರೂ ಗಮನಿಸದ ಅಲ್ಲಿಯೇ ತ್ಯಾಜ್ಯ ಹಾಕುವ ಜನರಿಗೇನು ಮಾಡಬೇಕುಸ್ವಚ್ಚ ಪರಿಸರ ಹೇಗೆ ನಿರ್ಮಾಣವಾಗಬೇಕುದಯಮಾಡಿ ಇದಕ್ಕೆ ಸೂಕ್ತ ಕ್ರಮ ಪುರಸಭೆಯವರೇ ಕೈಗೊಳ್ಳಬೇಕು.ದಯಮಾಡಿ ಅಲ್ಲಿ ಸಿ.ಸಿ.ಕ್ಯಾಮರ ವನ್ನು ಅಳವಡಿಸಿ ತ್ಯಾಜ್ಯ ಹಾಕುವವರ ವಿರುದ್ದ ಕ್ರಮ ಕೈಗೊಳ್ಳಿ.

ಹೀಗೆಂದು ಅವರು ಬರೆದಿದ್ದಾರೆ.

ಇಲ್ಲಿ ಸಿಸಿ ಕ್ಯಾಮರಾ ಹಾಕಿ, ಕಸ ಎಸೆಯುವವರನ್ನು ಶಿಕ್ಷಿಸಿ ಎಂಬುದು ಅವರ ಒತ್ತಾಯ. ಕಸ ಎಸೆಯುವವರಿಗೂ, ಎಸೆಯದವರಿಗೂ ಒಂದೇ ಮಾನದಂಡ, ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಫ್ಲೈಓವರ್ ನಡಿ, ಇಂದಿರಾ ಕ್ಯಾಂಟೀನ್ ಎದುರು ತರಕಾರಿ, ಹಣ್ಣು ವ್ಯಾಪಾರ ಮಾಡುವವರು ಹಾಗೂ ಪ್ಲಾಸ್ಟಿಕ್ ಬಳಸದೇ ಅಂಗಡಿಯಲ್ಲಿ ವ್ಯವಹಾರ ಮಾಡುವವರನ್ನು ಸಮಾನವಾಗಿ ನೋಡುವುದಲ್ಲ. ಯಾರು ನಿಯಮ ಉಲ್ಲಂಘಿಸುತ್ತಾರೋ ಅವರನ್ನು ಮೊದಲು ಹುಡುಕಿ ದಂಡ ವಿಧಿಸಿ, ಯಾರು ಎಸೆಯುತ್ತಾರೋ ಅವರಿಗೆ ದಂಡ ವಿಧಿಸಿ, ಯಾರು ಸರಿಯಾಗಿ ನಿಯಮವನ್ನು ಪಾಲಿಸುತ್ತಾರೋ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಶ್ಲಾಘಿಸಿ, ಮಾದರಿಯಾಗುವವರನ್ನು ಗುರುತಿಸಿದರೆ ಇಂಥದ್ದನ್ನು ಜನರೂ ಮಾಡಲಿಕ್ಕಿಲ್ಲ. ತರಕಾರಿ ವ್ಯಾಪಾರ ಮುಗಿದ ಬಳಿಕ ಪ್ಲಾಸ್ಟಿಕ್ ರಾಶಿ ಕಂಡುಬರಲಿಕ್ಕಿಲ್ಲ  ಇದನ್ನು ಪುರಸಭೆ ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಾರೆ ಎಂಬುದು ನಂಬಿಕೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ