ಬಂಟ್ವಾಳ ತಾಲೂಕಿನ ಕೆಲ ಗ್ರಾಮ ಪಂಚಾಯತ್ ಗಳಿಂದ ಮೆಸ್ಕಾಂಗೆ ದೊಡ್ಡ ಮೊತ್ತದ ಬಿಲ್ ಕೊಡಲು ಬಾಕಿ ಇದೆ ಎಂಬ ವಿಚಾರ ಸೋಮವಾರ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡಿತು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಇಒ ರಾಜಣ್ಣ ಉಪಸ್ಥಿತರಿದ್ದರು. ಈ ಸಂದರ್ಭ ಪ್ರಸ್ತಾಪಿಸಿದ ಇಒ, ಗ್ರಾಪಂಗಳಿಗೆ ಮೆಸ್ಕಾಂ ಬಿಲ್ ವಿಷಯದಲ್ಲಿ ಏನು ತಕರಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಎಇಇ ನಾರಾಯಣ ಭಟ್, ಅಮ್ಟಾಡಿ ಪಂಚಾಯತ್ ನಿಂದ ಬಿಲ್ ಬರಲು ಬಾಕಿ ಇದೆ ಎಂದರು. ನೀರಿನ ಪಂಪ್ ಸಹಿತ ಹಲವು ವಿಚಾರದಲ್ಲಿ ಅಧಿಕಾರಿಗಳು ಮತ್ತು ಗ್ರಾಪಂ ಸಮನ್ವಯ ಸಭೆಯೊಂದನ್ನು ಕರೆದು ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳಬೇಕು ಎಂದು ಇಒ ತಿಳಿಸಿದರು.
ಎಚ್1ಎನ್1 ಜಾಗೃತಿ ಅಗತ್ಯ:
ತಾಲೂಕಿನಲ್ಲಿ ಎಚ್1ಎನ್1 ಕುರಿತು ಹೆದರುವ ಅಗತ್ಯ ವಿಲ್ಲ. ಬದಲಾಗಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದ ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸಜೀಪನಡು ಮತ್ತು ಕನ್ಯಾನ ಗ್ರಾಮದ ಒಟ್ಟು ಮೂವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಮೃತಪಟ್ಟಿದ್ದು, ಆ ಬಳಿಕ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅರಣ್ಯ ಇಲಾಖೆಯ ಯೋಜನೆಯಾದ ಆಲಂಪುರಿ ಟ್ರೀ ಪಾರ್ಕ್ ಗೆ 60 ಲಕ್ಷ ಕೋರಲಾಗಿದ್ದು, 20 ಲಕ್ಷವಷ್ಟೇ ದೊರಕಿದೆ ಎಂದು ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ತಿಳಿಸಿದರು. ನರಹರಿ ಪರ್ವತದಲ್ಲಿ ದೈವೀವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು. ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ನಮಗೂ ಸಂಬಳ ಬಂದಿಲ್ಲ:
ಅಂಗನವಾಡಿ ಕಾರ್ಯಕರ್ತೆಯರಿಗೆ ಸೆಪ್ಟೆಂಬರ್ ವರೆಗೆ ಗೌರವಧನ ಪಾವತಿಯಾಗಿದೆ. ನಮ್ಮ ಸ್ಟಾಫ್ ಗಳಿಗೆ ವೇತನ ಇನ್ನೂ ದೊರಕಿಲ್ಲ ಎಂದು ಸಿಡಿಪಿಒ ಹೇಳಿದರು. ಹೆಚ್ಚುವರಿ ಅಂಗನವಾಡಿ ಕೇಂದ್ರಗಳು ಬೇಕಾದರೆ ಪಟ್ಟಿಯನ್ನು ನೀಡಲು ಇಒ ತಿಳಿಸಿದರು.
ಅರಣ್ಯ, ತೋಟಗಾರಿಕೆ ಮತ್ತು ಸಾಮಾಜಿಕ ತೋಟಗಾರಿಕೆ ಇಲಾಖೆಯ ವರು ಎನ್. ಆರ್.ಇ.ಜಿ. ಯೋಜನೆ ಯನ್ನು ಹೆಚ್ಚು ಕಾರ್ಯಗತಗೊಳಿಸಲು ಇ.ಒ. ತಿಳಿಸಿದರುಎಲ್ಲಾ ಸ್ಮಶಾನ ಅಭಿವೃದ್ಧಿ ಜಾಗದಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಸಮಸ್ಯೆ:
ಬೇಸಿಗೆ ಕಾಲದಲ್ಲಿ ನರಿಂಗಾನ ಗ್ರಾಮ.ಪಂಚಾಯತ್ ವ್ಯಾಪ್ತಿಯ ಲ್ಲಿ ಸುಮಾರು 20 ಮನೆಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ, ಈ ಸಮಸ್ಯೆ ಯನ್ನು ಶೀಘ್ರವಾಗಿ ಪರಿಹರಿಸಲು ಇಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ಇಒ ಸೂಚಿಸಿದರು.
ಗ್ರಾಮಸ್ಥರ ವಿರೋಧ ಯಾಕೆ:
ಇರಾ ಕೈಗಾರಿಕಾ ಪ್ರದೇಶಕ್ಕೆ ಮಂಚಿ ಮತ್ತು ಕುಕ್ಕಾಜೆ ರಸ್ತೆ ಬದಿಯಲ್ಲಿ ಮೆಸ್ಕಾಂ ಕೇಬಲ್ ಹಾಕಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಲ್ಲಿ ಬದಲಿ ವ್ಯವಸ್ಥೆ ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಉತ್ತರಿಸಿದ ಮೆಸ್ಕಾಂ ಎಇಇ ಪ್ರವೀಣ್ ಜೋಷಿ, ಜನರ ತಪ್ಪುಕಲ್ಪನೆಯಿಂದ ಹೀಗಾಗಿದೆ. ಅಧಿಕಾರಿಗಳು ಹೇಳಿದರೆ ಕೇಳುವುದಿಲ್ಲ, ಹೀಗಾಗಿ ಜನಪ್ರತಿನಿಧಿಗಳು ಈ ವಿಚಾರದ ಕುರಿತು ಅಧಿಕಾರಿಗಳ ಸಭೆ ಕರೆದರೆ, ವಿಚಾರವನ್ನು ಜನರಿಗೆ ಮನದಟ್ಟು ಮಾಡಲು ಸುಲಭವಾಗುತ್ತದೆ ಎಂದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…