ಪರಂಪರೆಯ ಹಿನ್ನೋಟ

1941ರ ಐದು ದಿನಗಳ ಕಿನ್ನಿಗೋಳಿಯ ದೇವಿ ಮಹಾತ್ಮೆ ಹೇಗಿತ್ತು?

www.bantwalnews.com

1941ರಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಐದು ದಿನಗಳ ಶ್ರೀದೇವಿ ಮಹಾತ್ಮೆಯಲ್ಲಿ ಶ್ರೀದೇವಿ ಪಾತ್ರಧಾರಿಯಾಗಿದ್ದವರು ಕಡಂದೇಲು ಪುರುಷೋತ್ತಮ ಭಟ್ಟರು. ಅಂದು ಭಾಗವತರಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. 1981ರಲ್ಲಿ ಮಾಂಬಾಡಿ ಭಾಗವತರರಿಗೆ ಸನ್ಮಾನ ಮತ್ತು ಅಭಿನಂದನಾ ಗ್ರಂಥ ‘ರಂಗವೈಖರಿ’ ಸಮರ್ಪಣೆಯಾಯಿತು. ಈ ಸಂದರ್ಭ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯ ಅನುಭವ ಮತ್ತು ಮಾಂಬಾಡಿಯವರ ಒಡನಾಟದ ಬಗ್ಗೆ ಬರೆದ ಸಾಲುಗಳ ಆಯ್ದ ಭಾಗವಿದು. (ಕೃಪೆ: ರಂಗವೈಖರಿ) ಬಂಟ್ವಾಳನ್ಯೂಸ್ ನಿಮಗಾಗಿ ಒದಗಿಸುತ್ತಿದೆ.

ವಾಟ್ಸಾಪುಗಳು ಬಂದ ಬಳಿಕ ಶ್ರೀದೇವಿಮಹಾತ್ಮೆ ಕುರಿತು ಬರೆಹಗಳು ಮರುಸೃಷ್ಟಿಯಾದವು. ಆದರೆ ಅದೇ ದೇವಿ ಮಹಾತ್ಮೆಯನ್ನು ಕಣ್ಣಾರೆ ಕಂಡವರು ಪುರುಷೋತ್ತಮ ಭಟ್ಟರು. ಸ್ವತ: ಶ್ರೀದೇವಿ ಪಾತ್ರಧಾರಿಯಾಗಿ ಅದನ್ನು ಅನುಭವಿಸಿದವರು.

ಹಿನ್ನೆಲೆ:

Mambady Narayana Bhagavataru

Kadandelu purushottama bhattaru

ಕಾಸರಗೋಡು ಸಮೀಪ ಕೊರಕ್ಕೋಡು ಎಂಬಲ್ಲಿ 1930ರ ಸಂದರ್ಭ ತಾವೇ ಪದ್ಯ ರಚಿಸಿ, ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಏಳು ದಿನಗಳ ಕಾಲ ಆಡಿಸಿದವರು ಮಾಂಬಾಡಿ ನಾರಾಯಣ ಭಾಗವತರು. ಅದಾದ ಬಳಿಕ ಹಿಮ್ಮೇಳ ತರಗತಿಯತ್ತ ಕೇಂದ್ರೀಕೃತವಾಗಿಸಿ ಯಕ್ಷಗಾನ ಚಟುವಟಿಕೆಗಳನ್ನು ನಡೆಸುತ್ತಿದ್ದ ಭಾಗವತರಿಗೆ ಮತ್ತೊಮ್ಮೆ ದೇವಿಮಹಾತ್ಮೆ ಐದು ದಿನಗಳ ಆಟದ ಕುರಿತು ಕರೆ ಹೋಯಿತು. ಇದು 1941ರ ಕತೆ.

ಅಲ್ಲಿ ನಡೆದ ಐದು ದಿನಗಳ ದೇವಿ ಮಹಾತ್ಮೆಯನ್ನೂ ಭಾಗವತರು ತಾವೇ ಆಶುಕವಿತೆಯಾಗಿ ಪದ್ಯಗಳನ್ನು ರಚಿಸಿಕೊಂಡು ಹಾಡಿದರು. ಮಾಂಬಾಡಿಯವರು ಆಡಿಸುತ್ತಿದ್ದಂತೆ ದೇವಿಮಹಾತ್ಮೆ ಕಥಾವಸ್ತು ಸುರಥನ ಒಡ್ಡೋಲಗದಿಂದ ಪ್ರಾರಂಭವಾಗುತ್ತಿತ್ತು. ಈ ಆಟದಲ್ಲಿ ಕಡಂದೇಲು ಪುರುಷೋತ್ತಮ ಭಟ್ಟರು ದೇವಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಅಭಿನಂದನಾ ಗ್ರಂಥದಲ್ಲಿ ಪುರುಷೋತ್ತಮ ಭಟ್ಟರು ಅಂದಿನ ದೇವಿ ಮಹಾತ್ಮೆ ಕುರಿತು ಹೀಗೆ ಬರೆಯುತ್ತಾರೆ.

ನನ್ನ ಮತ್ತು ಮಾಂಬಾಡಿಯವರ ಸಾಹಚರ್ಯದ ದಿನಗಳು ಬಹಳ ಕಡಿಮೆ. ಆದರೆ ನಮ್ಮ ಒಡನಾಟದ ಮುಖ್ಯ ದಿನಗಳಲ್ಲಿ ದೈವಾಯತ್ತವಾಗಿ ಶ್ರೀ ಮಾಂಬಾಡಿಯವರಿಂದ ನಡೆಸಲ್ಪಟ್ಟ ಕಿನ್ನಿಗೋಳಿಯ ಶ್ರೀ ದೇವಿ ಮಹಾತ್ಮೆಯ ಐದುದಿನಗಳ ಅಭೂತಪೂರ್ವ ಪ್ರದರ್ಶನದ ಸಾಹಸವು ಸ್ವರ್ಣಾಕ್ಷರಗಳಿಂದ ಬರೆದಿಡುವ ಪ್ರಕರಣವು. ಭಾಗವತರು ಶ್ರೀ ದೇವಿಯನ್ನು ಭಕ್ತಿಯಿಂದ ಮನಸಾ ಪ್ರಾರ್ಥಿಸಿದ ಅಂದಿನ ಚೌಕಿ ಇಂದು ಶ್ರೀರಾಮಮಂದಿರವಾಗಿ ರಾರಾಜಿಸುತ್ತಿದೆ.

1941ನೆಯ ಇಸವಿ. ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಶೆಟ್ಟಿಯವರೇ ಮುಂದಾಗಿ ಭಕ್ತಿಯಿಂದ ಆಡಿಸಿದ ಆಟವದು. ಕಲ್ಯಾಡಿ ಕೊರಗ ಶೆಟ್ಟರ ಹೊಸ ವ್ಯವಸ್ಥಾಪಕತ್ವದ ಹುಮ್ಮಸ್ಸಿನ ಕಾಲ-ಮೇಳದಲ್ಲಿ ಯಾರೋ ಒಬ್ಬ ಪುಸ್ತಕ ಭಾಗವತ ದೇವಿ ಮಹಾತ್ಮೆಯನ್ನಾಡಿಸಲು ಒಪ್ಪದ ಕಾರಣ, ಬೇರೆಯವರ ಸಲಹೆಯಂತೆ ಮಾಂಬಾಡಿ ನಾರಾಯಣ ಭಾಗವತರನ್ನು ಆರಿಸಿ, ಬರಮಾಡಿದ್ದಾಯಿತು.

ನಾನು ದೇವಸ್ಥಾನದ ಸಮೀಪದಲ್ಲೇ ವಸತಿ ಹೂಡಿ ಮೇಳಕ್ಕೆ ಸೇರಿದ್ದವನು. ಆದ್ದರಿಂದ ಭಾಗವತರು ಬಂದೊಡನೆಯೇ ಶ್ರೀ ಕ್ಷೇತ್ರದಲ್ಲೇ ನಮ್ಮೊಳಗೆ ಮುಂದಿನ ಕಾರ್ಯಕ್ರಮದ ಕುರಿತು ಮಾತುಕತೆಯಾಗಿ ಶ್ರೀ ಸಪ್ತಶತಿ ಗ್ರಂಥವನ್ನೇ ಆಧರಿಸಿ ಐದು ದಿನಗಳ ಕಥಾವಸ್ತುವನ್ನು ತೂಗಿ ಬೇರ್ಪಡಿಸಿದ್ದಾಯಿತು. ಪ್ರಾರ್ಥನೆಪೂರ್ವಕ ಪ್ರಸಾದವನ್ನು ಸ್ವೀಕರಿಸಿ, ಅಂದಿಗೆ ಬೇಕಾದ ಪದ್ಯಗಳನ್ನು ಪುಣ್ಯಕ್ಕೆ ಲೋಪವಾಗದಂತೆ ಬರೆದು, ತಾನನುಭವಿಸಿ, ಸಂಜೆಗೆ ಸ್ವಾನುಭವವನ್ನೆಲ್ಲರಿಗೂ ಹಂಚಿಕೊಟ್ಟು, ಐದು ದಿನಗಳ ಈ ಮಹಾಯಜ್ಞವನ್ನು ಕ್ರಮದಂತೆ ನಡೆಯಿಸಿ, ಕೊನೆಯ ಘಟ್ಟದಲ್ಲಿ ಅರುಣಾಸುರವಧೆ ಎಂಬ ಕ್ಷೇತ್ರಕ್ಕೆ ಸಂಬಂಧಿಸಿ ಕಥಾವಸ್ತುವಿನಿಂದ ಪೂರ್ಣಾಹುತಿಗೊಳಿಸಿದ ಮಹಾಯಜ್ಞಕೃತಿ ಶ್ರೀ ಮಾಂಬಾಡಿ ನಾರಾಯಣ ಭಾಗವತರು ಮಹಾವ್ರತಿಯಾಗಿ ಐದು ದಿನಗಳಲ್ಲೂ ಒಪ್ಪೊತ್ತು ಊಟ ಮಾಡುತ್ತಾ, ಶ್ರೀ ಸನ್ನಿಧಾನದಲ್ಲೇ ಏಕಾಂತವಾಸದಲ್ಲಿದ್ದು, ಪದ್ಯ ರಚಿಸಿ, ಭಕ್ತಿಯ ಪರಾಕಾಷ್ಠೆಯಿಂದಲೇ ದೇವಿಯು ಪ್ರತ್ಯಕ್ಷಳಾಗುವ ಸನ್ನಿವೇಶದಲ್ಲಿ ಹಾಡಿದ ಪದ್ಯಗಳೆಂದರೆ ವೇದಮಂತ್ರಗಳ ಶಕ್ತಿಯನ್ನೂ ಮಿಗಿಸಿದವುಗಳಿರಬಹುದು ಎಂದೇ ನನ್ನ ಊಹೆ.

ಸುತ್ತಲೂ ಕುಳಿತು ಶ್ರದ್ಧಾಭಕ್ತಿಗಳಿಂದ ನೋಡುತ್ತಾ, ಕೇಳುತ್ತಿದ್ದ ಘನ ವಿದ್ವಾಂಸರನೇಕರು ಧಿಗ್ಗನೆದ್ದು ಜಯಕಾರದೊಂದಿಗೆ ತಲೆಬಾಗಿ ನಮಸ್ಕರಿಸಿದ ಈ ದೃಶ್ಯವು ಮನ:ಫಲಕದಿಂದ ಎಂದೆಂದಿಗೂ ಮಾಸುವಂತಿಲ್ಲ. ಯಕ್ಷಗಾನರಂಗದಲ್ಲಿ ಇಂಥ ಸುರಸನ್ನಿವೇಶವು ಹಿಂದಾಗಿಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ.

ಯಕ್ಷಗಾನದ ಕುರಿತು ಪುರುಷೋತ್ತಮ ಭಟ್ಟರು:

ಇಂದಿನ (1981ರ ಕಾಲದ ಕುರಿತು ಪ್ರಸ್ತಾಪ) ಯಕ್ಷಗಾನ ಕ್ರಾಂತಿಯುಗದಲ್ಲಿ ಎಲ್ಲರೂ ಕಲಾವಿದರೇ ಆಗಿದ್ದಾರೆ. ಎಲ್ಲರೂ ವಿಮರ್ಶಕರೇ ಆದ ಕಾಲದಲ್ಲಿ ಕಲೆ ಎಂಬ ಪದದ ಅರ್ಥವೇನು, ವಿದ್ ಧಾನುವಿನ ವ್ಯಾಪ್ತಿ ಎಷ್ಟು ಎಂಬ ವಿಚಾರವೇ ಜನರಲ್ಲಿಲ್ಲ. ಮೈಕೈಗಳಲ್ಲಾದ ಸಣ್ಣಪುಟ್ಟ ಗಾಯ ಮಾಸಿದಾಗಿನ ಕಲೆಯೇ? ಶ್ರೀಸರಸ್ವತಿಯ ಹಲವಂಗಗಳಲ್ಲಿ ಒಂದಾದ ಈ ಲಲಿತಕಲೆಯು ಗೀತ, ನೃತ್ಯ, ಸಾಹಿತ್ಯಾತ್ಮಕವಾಗಿದ್ದು, ಅತ್ಯಮೋಘವೂ ಆಗಿದೆ. ಈ ಎಲ್ಲ ಅಂಗಗಳನ್ನು ಅಭ್ಯಸಿಸಿ ಅನುಭವಿಸಿದವನೆ ಕಲಾವಿದ. ಹಾಗಿಲ್ಲದೆ ಯಾವುದೋ ಒಂದರಲ್ಲಿ ನಿಪುಣನಾದರೆ ಅವನು ಕಲಾವಿದನೆನಿಸನು. ಹಾಡು ಚೆನ್ನಾಗಿದ್ದರೆ ಪ್ರಸಿದ್ಧ ಹಾಡುಗಾರ, ಚೆಂಡೆ ಮದ್ದಳೆಗಳಲ್ಲಿ ಚತುರನಾದರೆ ಹೆಸರಾಂತ ಮದ್ದಳೆಗಾರ, ವಿದೂಷಕ ಹಾಸ್ಯರತ್ನನಾದಾನು, ಸ್ತ್ರೀಪಾತ್ರರತ್ನನಾದಾನು, ಸುಪ್ರಸಿದ್ಧ ವೇಷಧಾರಿಯಾದಾನು ಆದರೆ ಕಲಾವಿದನೆಂಬ ಶಬ್ದಕ್ಕೆ ಎಂದೆಂದಿಗೂ ಅನರ್ಹ.

 

Old articles about mambady bhagavataru:

ಖ್ಯಾತ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ಟರ ಜನ್ಮಶತಮಾನೋತ್ಸವವನ್ನು ಅ.29ರಂದು ಯಕ್ಷಗಾನ ಕಲಾರಂಗ ಸಂಸ್ಥೆಯು ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ ಹಿನ್ನೆಲೆಯಲ್ಲಿ ಅಂಕಣದಲ್ಲಿ ಕಡಂದೇಲು ಪುರುಷೋತ್ತಮ ಭಟ್ಟರೇ ಬರೆದ ಮಾಂಬಾಡಿ ಭಾಗವತರ ಕುರಿತ ಬರೆಹರೂಪ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts