(ತೆಂಕುತಿಟ್ಟು ಯಕ್ಷಗಾನಕ್ಕೆ ಸಾವಿರಾರು ಕಲಾವಿದರ ಕೊಡುಗೆ ಅಪಾರ. ಇವರ ಪೈಕಿ ಮಾಂಬಾಡಿ ಮನೆತನ ಯಕ್ಷಗಾನದ ಅಧ್ಯಾಪನ ಕ್ಷೇತ್ರದಲ್ಲಿ ಸುಮಾರು ನೂರು ವರ್ಷಗಳಿಂದ ತೊಡಗಿಸಿಕೊಂಡು ಬಂದಿರುವುದು ಇಲ್ಲಿ ಉಲ್ಲೇಖನೀಯ. ಈ ಹಿನ್ನೆಲೆಯಲ್ಲಿ ಈ ಪರಂಪರೆಯ ಬದುಕು, ಸಾಧನೆಯ ಕುರಿತು ಲೇಖನಮಾಲೆ ಇದು. )

16-12-1900

ನೂರ ಹದಿನೇಳು ವರ್ಷಗಳ ಹಿಂದೆ.

ಪಟ್ಟಣದ ಗಾಳಿ ಲವಲೇಶವೂ ತಾಕದ ಕರೋಪಾಡಿ ಎಂಬ ಪುಟ್ಟ ಹಳ್ಳಿಯಲ್ಲಿರುವ ಪ್ರದೇಶ ಮಾಂಬಾಡಿ ಎಂಬಲ್ಲಿ ಪದ್ಯಾಣ ಕುಟುಂಬದ ನಾರಾಯಣ ಭಟ್ಟ ಮತ್ತು ಗೌರಮ್ಮ ಎಂಬ ಹವ್ಯಕ ಬ್ರಾಹ್ಮಣ ದಂಪತಿಯ ಪುತ್ರನಾಗಿ ನಾರಾಯಣ ಭಟ್ಟ ಜನನವಾದ ದಿನವದು. ಹಿಂದೆಲ್ಲ ಬ್ರಾಹ್ಮಣ ಕುಟುಂಬಗಳಲ್ಲಿ ತಂದೆಯ ಹೆಸರು, ಅಜ್ಜನ ಹೆಸರು ಮಗನಿಗೆ ಇಡುವುದು ಮಾಮೂಲಿಯಾಗಿತ್ತು. ಅಂತೆಯೇ ನಾರಾಯಣ ಭಟ್ಟರ ಮಗನ ಹೆಸರೂ ನಾರಾಯಣ ಭಟ್ಟ ಎಂದಾಯಿತು. ಮಿತ್ತನಡ್ಕದಲ್ಲೇ ಇರುವ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ. ಅಲ್ಲಿ ಎರಡು ವರ್ಷಗಳ ಅಭ್ಯಾಸ ಮಾಡಿದ ನಾರಾಯಣ ಭಟ್ಟರ ತಂದೆಗೆ ಒಟ್ಟು ಏಳು ಮಕ್ಕಳು.

ಹಾಗೆ ನೋಡಿದರೆ ಅಂದಿನ ಇಡೀ ಪದ್ಯಾಣ ಕುಟುಂಬದ ಸದಸ್ಯರು ಯಕ್ಷಗಾನಪ್ರಿಯರು. ಅವರಲ್ಲಿ ಹಲವರು ಯಕ್ಷಗಾನ ಕಲಾವಿದರೂ ಆಗಿದ್ದರು. ಕರೋಪಾಡಿ ಗ್ರಾಮವೂ ಯಕ್ಷಗಾನ ಚಟುವಟಿಕೆಗಳಲ್ಲಿ ಪ್ರಸಿದ್ಧಿಯನ್ನು ಆ ಕಾಲದಲ್ಲೇ ಪಡೆದಿತ್ತು. ಪದ್ಯಾಣದ ಕುಟುಂಬವೇ ಗಜಗಾತ್ರದ್ದು. ಒಂದೇ ಜಾಗದಲ್ಲಿ ಎಲ್ಲರಿಗೂ ನೆಲಸಲು ಸಾಧ್ಯವೂ ಇಲ್ಲ. ಹೀಗಾಗಿ ಅಂದೇ ಬೇರೆ ಬೇರೆ ಉದ್ದೇಶದೊಂದಿಗೆ ವಿವಿಧೆಡೆ ಜೀವನ ನಡೆಸಿದ ಕಾರಣ ಇಂದು ಪದ್ಯಾಣ ಕುಟುಂಬದ ಕವಲುಗಳು ಜಗತ್ತಿನಾದ್ಯಂತ ಇವೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಅಂಥ ಕುಟುಂಬದಲ್ಲಿ ರೆಂಜೆಡಿ ಕವಲಿನ ಶಾಖೆಯೊಂದು ಮಾಂಬಾಡಿಬೈಲು ಎಂಬಲ್ಲಿ ನೆಲೆಸಿತು. ಬೈಲು ಶಂಭಟ್ಟರು ಎಂದು ಅವರ ಹೆಸರು. ಅವರ ಮಗ ನಾರಾಯಣ ಭಟ್ಟರು. ನಾರಾಯಣ ಭಟ್ಟರ ಪತ್ನಿ ತೊಟ್ಟೆತ್ತೋಡಿ ಮನೆತನದಲ್ಲಿ ಹುಟ್ಟಿದ ಗೌರಮ್ಮ. ಈ ದಂಪತಿಯ ಏಳು ಮಕ್ಕಳಲ್ಲಿ ಒಬ್ಬರು ನಾರಾಯಣ ಭಾಗವತರು.

ಮಾಂಬಾಡಿಯಲ್ಲಿದ್ದ ಭಾಗವತರ ಅಣ್ಣತಮ್ಮಂದಿರೆಲ್ಲರೂ ಸಾಧಕರು. ಕೃಷಿಯಲ್ಲಿ ಸ್ವತ: ದುಡಿಮೆ ಮಾಡುವ ತಾಕತ್ತುಳ್ಳವರು. ಅಕ್ಕ ಹೊನ್ನಮ್ಮ.  ಒಬ್ಬರೇ ಅಕ್ಕ, ಚಿಪ್ಪಾರುಕಜೆ ಗೆ ವಿವಾಹವಾದರು. ನಾರಾಯಣ ಭಾಗವತರ ಅಣ್ಣ ಶಂಭಟ್ಟರು ಕೃಷಿಕ. ಮತ್ತೋರ್ವ ಅಣ್ಣ ಈಶ್ವರ ಭಟ್ಟರು ತಿರುವಾಂಕೂರಿಗೆ ತೆರಳಿ ಅಲ್ಲಿ ಸಂಸ್ಕೃತ ಹಾಗೂ ಜ್ಯೋತಿಷ್ಯವನ್ನು ಕಲಿತವರು. ಬಳಿಕ ಕನ್ಯಾನದ ಕಮ್ಮಜೆ ಎಂಬಲ್ಲಿ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದವರು. ಊರಲ್ಲಿ ಈಶ್ವರ ಜೋಯಿಸರು ಎಂದೇ ಪ್ರಸಿದ್ಧರು. ಅವರನ್ನು ಈಶ್ವರ ಮಾಸ್ತರು ಎಂದೂ ಕರೆಯುತ್ತಿದ್ದುದುಂಟು. ಮತ್ತೋರ್ವ ಸಹೋದರ ಕೇಶವ ಭಟ್ಟರು ಇಂಗ್ಲೀಷ್ ಪಂಡಿತರು. ಕೇಶವ ಮಾಸ್ತರು ಎಂದೇ ಪ್ರಸಿದ್ಧ. ಇವರು ಬರೆದ ಇಂಗ್ಲೀಷ್ ಗ್ರಾಮರ್ ಪುಸ್ತಕ ಆ ಕಾಲದಲ್ಲಿ ಎಲ್ಲ ಶಾಲೆಗಳ ಇಂಗ್ಲೀಷ್ ಅಭ್ಯಾಸಿಗಳಿಗೆ ಸಹಕಾರಿಯಾಗಿತ್ತು. ಮಾಂಬಾಡಿ ಕೇಶವ ಭಟ್ಟರು (ಮಾಸ್ತರು) ಇಂಗ್ಲೀಷ್ ಮೂಲಕ ಆಗಿನ ಕಲಿಕಾಸಕ್ತರಿಗೆ ಮಾರ್ಗದರ್ಶಿಯಾಗಿದ್ದಷ್ಟೇ ಅಲ್ಲ, ವಿಟ್ಲ ಸಹಿತ ಸುತ್ತಮುತ್ತಲಿನ ಹಲವಾರು ಮಂದಿ ಮುಂದೆ ದೇಶ, ವಿದೇಶಗಳಲ್ಲಿ ನೆಲಸಲು ಬೇಕಾದ ವಿದ್ಯಾಭ್ಯಾಸಕ್ಕೆ ತಳಹದಿಯಾದ ಇಂಗ್ಲೀಷ್ ಪಾಠವನ್ನು ಧಾರೆ ಎರೆದು ಸಹಕಾರಿಯಾದರು. ಇನ್ನೋರ್ವ ಸಹೋದರ ಸುಬ್ಬಣ್ಣ ಭಟ್ಟರು ಕರ್ನಾಟಕ ವ್ಯವಸಾಯ ವರ್ತಕರ ಸಂಘದ ಉದ್ಯೋಗಿಯಾಗಿದ್ದವರು. ತಮ್ಮ ಕೃಷ್ಣ ಭಟ್ಟರು ಕೃಷಿಕರು. ಮತ್ತೋರ್ವ ಸಹೋದರ ರಾಮ ಭಟ್ಟರು ಎಳೆವೆಯಲ್ಲೇ ನಿಧನಹೊಂದಿದ್ದರು. ಇವಿಷ್ಟು ಮಾಂಬಾಡಿ ಭಾಗವತರ ಒಡಹುಟ್ಟಿದವರ ಕಿರುಪರಿಚಯ.

ಇಲ್ಲಿ ಉಲ್ಲೇಖಿಸಬಹುದಾದ ಒಂದು ವಿಚಾರವೆಂದರೆ ಮಾಂಬಾಡಿ ಭಾಗವತರ ಸಹೋದರರ ಮಕ್ಕಳ ಪೈಕಿ ಕೇಶವ ಭಟ್ಟರ ಪುತ್ರ ಶಾಮ ಭಟ್ ಆ ಕಾಲದಲ್ಲೇ ಕೇಂದ್ರ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮಾಂಬಾಡಿ ಈಶ್ವರ ಭಟ್ಟರ (ಜೋಯಿಸರು) ಪುತ್ರ ವೆಂಕಟರಮಣ ಭಟ್ ಪತ್ರಿಕೋದ್ಯಮಿಯಾಗಿದ್ದರು. ಪುತ್ತೂರಿನಲ್ಲಿ ಭಾರತ ಎಂಬ ಪತ್ರಿಕೆ ಸಂಸ್ಥಾಪನೆ ಮಾಡಿದ್ದ ವೆಂಕಟರಮಣ ಭಟ್ಟರು ಆರ್ಯಚಾಣಕ್ಯ ಸಹಿತ ಹಲವು ಪುಸ್ತಕಗಳನ್ನು ಬರೆದಿದ್ದರು. ಆ ಕಾಲದಲ್ಲಿ ಹಲವು ಉದಯೋನ್ಮುಖ ಲೇಖಕರಿಗೆ ಬರೆಯಲು ತಮ್ಮ ಭಾರತ ಪತ್ರಿಕೆಯಲ್ಲಿ ಅವಕಾಶ ನೀಡಿದ್ದರು ವೆಂಕಟರಮಣ ಭಟ್ಟರು ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಪ್ರೊ. ವಿ.ಬಿ.ಅರ್ತಿಕಜೆ ನೆನಪಿಸಿಕೊಳ್ಳುತ್ತಾರೆ. ಆರ್.ಎಸ್.ಎಸ್. ನ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದರು ವೆಂಕಟರಮಣ ಭಟ್ಟರು.  ಭಾಗವತರ ಸಹೋದರ ಕೃಷ್ಣಭಟ್ಟರ ಪುತ್ರಿ ಕೃಷ್ಣವೇಣಿ ಕಿದೂರು ಲೇಖಕಿ, ಕಥೆಗಾರ್ತಿಯಾಗಿ ಹೆಸರು ಮಾಡಿದ್ದಾರೆ.

ಇಲ್ಲಿ ಉಲ್ಲೇಖನೀಯ ಅಂಶವೇನೆಂದರೆ ಮಾಂಬಾಡಿ ಭಾಗವತರ ಓರ್ವ ಸಹೋದರ ಲೇಖಕರಾಗಿದ್ದರೆ, ಮತ್ತೋರ್ವ ಸಹೋದರನ ಪುತ್ರ ಪತ್ರಿಕೋದ್ಯಮಿಯಾಗಿ ಹಲವು ಉದಯೋನ್ಮುಖರಿಗೆ ಅವಕಾಶ ನೀಡಿದ್ದರು. ಇನ್ನೋರ್ವ ಸಹೋದರನ ಪುತ್ರಿ ಕಥೆಗಾರ್ತಿ, ಲೇಖಕಿ. ಹೀಗೆ ಆರ್ಥಿಕವಾಗಿ ಬಲಾಢ್ಯರಾಗದಿದ್ದರೂ ಬೌದ್ಧಿಕ ಶ್ರೀಮಂತಿಕೆ ಮಾಂಬಾಡಿ ಮನೆತನಕ್ಕಿತ್ತು ಎಂಬುದು ಗಮನಾರ್ಹ.

(ಮಾಂಬಾಡಿ ಭಾಗವತರು ಮತ್ತು ಅವರ ತಂದೆ ನಾರಾಯಣ ಭಟ್ಟರ ಮಕ್ಕಳು, ಮೊಮ್ಮಕ್ಕಳ ಕುರಿತು ಇಲ್ಲಿ ಪ್ರಕಟವಾಗಿರುವ ಅಂಶಗಳಿಗಿಂದ ಹೆಚ್ಚಿನ ಮಾಹಿತಿ ನಿಮಗಿದ್ದರೆ ಈ ಮೈಲ್ ಮಾಡಿರಿ…bantwalnews@gmail.com)

ಮುಂದಿನ ಭಾಗಕ್ಕೆ…

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts