ಶಿಕ್ಷಣ ಇಲಾಖೆ ಸಿಬ್ಬಂದಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಇಂಗ್ಲೀಷ್ ಪಠ್ಯಪುಸ್ತಕ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸೋಮವಾರ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದನೆ ತರಗತಿಯಿಂದ ಐದನೇ ತರಗತಿವರೆಗೆ ಆಂಗ್ಲ ಭಾಷೆ ಕಲಿಕೆಯನ್ನು ಕಳೆದ ವರ್ಷದಂತೆ ಮುಂದುವರಸಿಕೊಂಡು ಹೋಗಲು ಹೈಕೋರ್ಟ್ ಆದೇಶ ನೀಡಿದೆ, ಆದರೆ ಆಂಗ್ಲ ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ನಿರಾಕರಿಸಿದ್ದಾಗಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಆರೋಪಿಸಿದರು.
ಮಧ್ಯಾಹ್ನ 12 ಗಂಟೆಯ ವೇಳೆಗೆ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು ಸಂಜೆ 4 ಗಂಟೆಯವರೆಗೂ ಮುಂದುವರೆಯಿತು. ಆಂಗ್ಲ ಮಾಧ್ಯಮದಲ್ಲಿ ಪಠ್ಯ ಪುಸ್ತಕ ನೀಡಿ, ನೀಡುವುದಿಲ್ಲವೆಂದಾದರೆ ಲಿಖಿತವಾಗಿ ಕೊಡಿ ಎನ್ನುವ ಬೇಡಿಕೆಗಳನ್ನು ಪ್ರತಿಭಟನಕಾರರು ಮುಂದಿಟ್ಟಿದ್ದರು. ಬೇಡಿಕೆಗೆ ಸ್ಪಂದಿಸದಿದ್ದರೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಎಸೈ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಕಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ದಡ್ಡಲಕಾಡು ಶಾಲೆಗೆ ಕಳೆದ ಬಾರಿ ನಾವು ಆಂಗ್ಲ ಮಾಧ್ಯದ ಪುಸ್ತಕಗಳನ್ನು ಅಧಿಕೃತವಾಗಿ ನೀಡಿಲ್ಲ. ಇದಕ್ಕೆ ಯಾವುದೇ ಇಂಡೆಂಟ್ ಇಲ್ಲ. ಖಾಸಗಿ ಶಾಲೆಗಳಿಗೆ ನೀಡಲು ಬಂದಿದ್ದ ಹೆಚ್ಚುವರಿ ಪುಸ್ತಕಗಳನ್ನೇ ದಡ್ಡಲಕಾಡು ಶಾಲೆಗಳಿಗೆ ನೀಡಲಾಗಿದೆ ಎಂದು ಇಲಾಖಾಧಿಕಾರಿ ಮಾಹಿತಿ ನೀಡಿದರು. ಪುಸ್ತಕವೇನೋ ಕೊಟ್ಟಿಲ್ಲ, ಆದರೆ ಆಂಗ್ಲ ಮಾಧ್ಯಮದಲ್ಲೇ ಪರೀಕ್ಷೆ ಬರೆಯಲು ಪಶ್ನೆಪತ್ರಿಕೆಯನ್ನು ಶಿಕ್ಷಣ ಇಲಾಖೆ ಯಾಕೆ ಕೊಟ್ಟಿತ್ತು ಎಂದು ಫ್ರೆಂಡ್ಸ್ ಕ್ಲಬ್ ಸದಸ್ಯರು ಪ್ರಶ್ನಿಸಿದರು. ಮಾತುಕತೆಯಲ್ಲಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಮತ್ತೆ ನ್ಯಾಯಾಲಯದ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಸದಸ್ಯರು ಬಂದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ನಗರ ಠಾಣಾ ಎಸೈ ರಕ್ಷಿತ್ ಎ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ರಾಮಚಂದ್ರ ಕರೆಂಕಿ, ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್, ನಂದರಾಮ್ ರೈ, ರಮನಾಥ ರಾಯಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.