ನಿಮ್ಮ ಧ್ವನಿ

ಕಲೆಯೆಂಬ ಐಡಿಯಾ ಮತ್ತು ಐಡಿಯಾಲಜಿ

“ಗಿರಿಲಹರಿ” ಅಂಕಣ ಬರಹ “ಸಂಗೀತ-ಕಲೆ ಎಲ್ಲರಿಗಾಗಿ” https://bantwalnews.com/2017/05/14/girilahari-2/ ಲೇಖನಕ್ಕೆ ಅನಿಸಿಕೆ:
-ಶ್ರೇಯಾಂಕ ಎಸ್ ರಾನಡೆ.
ಕಲೆಗಳಿಗೆ ಮನ ಅರಳಿಸುವ ಶಕ್ತಿಯ ಜೊತೆಗೆ ವ್ಯಕ್ತಿತ್ವ ವಿಕಸಿಸುವ ಯುಕ್ತಿಯಿರುತ್ತದೆ. ಹಾಗಾಗಿ ಕಲಾಸೇವೆ ಮತ್ತು ಕಲೆಯ ಮೂಲಕ ಮಾಡುವ ಸೇವೆಗಳು ಸಂಕೀರ್ಣತೆಯ ಆಯಾಮವಿರುವ ಬದುಕು, ಸಮಾಜ, ಸುತ್ತಲಿನ ಪರಿಸರವನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಬದಲಾಯಿಸಬಲ್ಲದು. ಇದು ಕಲೆಯಲ್ಲಿ ಸುಳ್ಳನ್ನು ಕಂಡ ಪ್ಲೇಟೋಗೆ ಅರಿವಾಗಲಿಲ್ಲ. ಅನುಕರಣೆಯ ಸಾಧ್ಯತೆಯನ್ನೂ ಗುರುತಿಸಿದ ಅರಿಸ್ಟಾಟಲ್ ವಾಸ್ತವ ಸತ್ಯಗಳನ್ನು ಮುಂದಿಟ್ಟು ಆಧುನಿಕ ರಾಜ್ಯ-ದೇಶಗಳ ಚಿತ್ರಣವನ್ನು ಸಾದೃಶ್ಯವಾಗಿಸಿದ.
ಸಂಗೀತ, ಭರತನಾಟ್ಯದಂತಹ ಕಲೆಗಳ ಲಭ್ಯತೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಪ್ರಜ್ಞಾಪೂರ್ವಕವಾಗಿ ಕೆಲವರನ್ನು ಬಿಟ್ಟು ಎಲ್ಲರನ್ನೂ ಹೊರಗಿಡಲಾಗಿದೆ ಎಂಬುದು ಹೇಗೆ ತಪ್ಪೋ, ಕೆಲವೆಡೆಗಳಲ್ಲಿ ತಮ್ಮ ಶ್ರೇಷ್ಟತೆ ಹಾಗೂ ಸಂಕೀರ್ಣತೆಗಳನ್ನು ಕಾಪಿಡಲು “ಕೆಲವರು” ಕೆಲವು ಜನಾಂಗ, ಸಮುದಾಯ, ಪ್ರದೇಶದವರನ್ನು ಇಂತಹ “ಅಭಿಜಾತ” ಕಲೆಗಳಿಂದ ದೂರವಿಡುವ ಪ್ರಯತ್ನ ನಡೆದೇ ಇಲ್ಲ ಎಂಬುದೂ ಸರಿಯಲ್ಲ. ಆಧುನಿಕ ಪರಿಸ್ಥಿತಿ ಬದಲಾಗಿದೆ ನಿಜ.
ಆದರೆ ತಮಿಳುನಾಡಿನ ಪರಿಸ್ಥಿತಿಯೇ ಭಿನ್ನ, ದಕ್ಷಿಣ ಕನ್ನಡದ ಪರಿಸ್ಥಿತಿಯೇ ಭಿನ್ನ. ಅಲ್ಲಿ ದ್ರಾವಿಡ ರಾಜಕಾರಣ ಇಷ್ಟು ಗಟ್ಟಿಯಾಗಿ ಬೇರೂರುವುದಕ್ಕೆ ಮತ್ತು ಜನರ ಮನಸ್ಸಿನಲ್ಲಿ ಬೇರೆ ಆಯ್ಕೆಯೇ ಉಳಿಯದಂತೆ ತಮ್ಮ ದ್ರಾವಿಡ ವಾದ, ಪ್ರಾದೇಶಿಕ ಸಂಕುಚಿತತೆ ನೆಲೆನಿಲ್ಲುವುದಕ್ಕೆ ತಮ್ಮದೇ ಕಟ್ಟುಪಾಡುಗಳನ್ನು ವಿಧಿಸಿಕೊಂಡು ತೀರಾ ಒಳಗೊಳ್ಳುವಿಕೆಯಿಲ್ಲದ ಚೌಕಟ್ಟುಗಳನ್ನು ಹಾಕಿಕೊಂಡ ಇಂತಹ ಸಮಸ್ತ ಸಂಗತಿಗಳೂ ಕಾರಣ. ಹಾಗೆಂದು ಕಲೆಗಳನ್ನು ತಮ್ಮದಾಗಿಸಿಕೊಂಡಿದ್ದವರೆಲ್ಲರೂ ಹಾಗಿರಲಿಲ್ಲ. ಅದಕ್ಕೇ ತಮಿಳುನಾಡು ಶ್ರೀಲಂಕದಂತೆ “ನಾಗರಿಕ ಯುದ್ಧಕ್ಕೆ” ಜಾರಲಿಲ್ಲ. ಹಾಗೇ ನೋಡಿದರೆ ಟಿ.ಎಂ.ಕೃಷ್ಣ ಕೂಡ ಜಾತಿಯಲ್ಲಿ ಬ್ರಾಹ್ಮಣ ಆದರೂ ಅವರು ತಮ್ಮ ಕಲೆಯನ್ನು (ಮತ್ತು ಅದರ ಕಲಿಕೆಯನ್ನೂ) ತಮ್ಮ ಜಾತಿಯವರಿಗಷ್ಟೇ “ಮೀಸಲಿಟ್ಟಿಲ್ಲ”. ಟಿ.ಎಂ.ಕೃಷ್ಣ ಮಾಡುತ್ತಿರುವ ಪ್ರಯತ್ನಗಳು ಈ ಕಂದಕ, ಗೋಡೆಗಳನ್ನು ಒಡೆಯುವ ವಾಸ್ತವಿಕ ಸವಾಲುಗಳು. ಅಂತಹ ಕ್ರಮಗಳನ್ನು ಅನೇಕರು ಪ್ರಾಯೋಗಿಕವಾಗಿ ಮಾಡಿದ ಉದಾಹರಣೆಗಳಿವೆ.
ಆದರೆ ಭರತ ನಾಟ್ಯಶಾಸ್ತ್ರದಲ್ಲಿ ಗುರುತಿಸಿರುವ ಕನಿ‍ಷ್ಟ ೬೪ ಕಲೆಗಳ ಶಾಸ್ತ್ರೀಯ ಮಟ್ಟಿನ ಕಲೆಗಳಿಗೆ ಸಂಕುಚಿತ, ಸಾಮುದಾಯಿಕ ರಾಜಕಾರಣವನ್ನು ಮೀರುವ ಗುಣವಿದೆ. ಕಲೆಯನ್ನು ಕಲಾರಾಧಕರಿಂದ, ಕಲಾಸ್ವಾಧಕರಿಂದ ಬೇರ್ಪಡಿಸಲು ಅಸಾಧ್ಯ. ಮೇಲಾಗಿ ಈ ಬಗೆಯ ಕಲೆಗಳು ಭಾವಸಾದೃಶ್ಯನೆಲೆಯಲ್ಲಿ ರೂಪುಗೊಂಡು ಮಹೋನ್ನತ ನೆಲೆಗೆ ವಿಸ್ತೃತಗೊಳ್ಳುವ ಕೌಶಲ್ಯಗಳು. ಸಾಮಾಜಿಕ, ಆರ್ಥಿಕ, ಸಾಮಯಿಕ ಇತ್ಯಾದಿ ಪರಿಸ್ಥಿತಿಗಳ ವಾಸ್ತವ ಸವಾಲುಗಳ ಜೊತೆ ಈ ಕಲೆಗಳನ್ನು ಕಲಿಯುವುದಕ್ಕೆ ಸಹಜ ತತ್ಪರತೆಯ ಆಂತರಿಕ ತುಡಿತ ಮುಖ್ಯ. ಅವಕಾಶವೆಂಬ ಕಿರು ಪದರಕ್ಕೆ ಸೀಮಿತಗೊಳಿಸಿ ನೋಡುವುದಕ್ಕಿಂತ, ಈ ಕಲೆಗಳ ಸಾಕ್ಷಾತ್ಕಾರಕ್ಕೆ ಮೂಲಭೂತವಾಗಿ ಬೇಕಿರುವುದು ಪ್ರಜ್ಞಾಪ್ರವಾಹದಂತೆ ಸದಾ ಉಕ್ಕಿಹರಿಯಬೇಕಾದ ವೈಯಕ್ತಿಕ ತಪಸ್ಸು. ಉಳಿದದ್ದೆಲ್ಲವೂ ಸಾಧನೆಯ ಹಾದಿಯಲ್ಲಿ ಮುಖ್ಯವೆಂದು ತೋರಿದರೂ ಕಲಿಕೆಯ ಹಾದಿಯಲ್ಲಿ ನಗಣ್ಯ. ನಮ್ಮಲ್ಲನೇಕರು ಕಲೆ ನಮಗೊಲಿದಿಲ್ಲ ಎನ್ನುವ ಭರಾಟೆಯಲ್ಲಿ ಒಲಿಸಿಕೊಳ್ಳುವ ಪ್ರಯತ್ನಮಾಡಲಿಲ್ಲ ಎಂದೋ ಅಥವಾ ಆಸಕ್ತಿಯೇ ಇರಲಿಲ್ಲ ಎಂಬ ಮೂಲಭೂತ ವಿನಮ್ರತೆಯನ್ನು ಮರೆಯುತ್ತಾರೆ.
ಟಿ.ಎಂ. ಕೃಷ್ಣರ ತಿಳಿಯುವಿಕೆ ಹಾಗೂ ಸ್ವರಾಂಜಲಿಯ ಅರಿಯುವಿಕೆ ಎರಡೂ ಭಿನ್ನ. ಆಯಾ ಪರಿಸರಕ್ಕೆ ಅನುಗುಣವಾದ, ತಮ್ಮ ಆಸಕ್ತಿಗನುಗುಣವಾದ ಮಾರ್ಗಗಳು ಮತ್ತು ವಿಧಾನಗಳಿವು. ಕಲೆಯನ್ನು ಬೆಳೆಸುವ, ಬೆಳಗಿಸುವ ಕಾರ್ಯ ಐಡಿಯಾಲಜಿಯನ್ನು ಮೀರಿದ್ದು. ಯಾಕೆಂದರೆ ಅನೇಕ ಐಡಿಯಾಲಜಿಗಳಲ್ಲಿ ಕಲೆ, ಸಂಸ್ಕೃತಿಗಳಿಗೆ ಸ್ಥಾನವಿಲ್ಲ. ಅವುಗಳ ಪ್ರಕಾರ ಇವೆಲ್ಲವೂ ರಾಜಕಾರಣದ ಭಾಗ. ಕೃಷ್ಣರವರು ಎತ್ತುತ್ತಿರುವ ಪ್ರಶ್ನೆಗಳು ಇದೇ ತೆರನಾಗಿದ್ದು. ಆದರೆ ಈ ಐಡಿಯಾಲಜಿಗಳ ಸಂಕೋಲೆ ಕಲೆಗಳ ಅಸಾದೃಶ್ಯ ಅಭಿವ್ಯಕ್ತಿ ಮತ್ತು ಅನಂತ ಸಾಧ್ಯತೆಗಳೆದುರು ಶೂನ್ಯತೆಯ ಸ್ತರವನ್ನು ತಲುಪಲಿದೆ. I think there is no intent harm unless art is treated and used as art not as ideological malware.
ಹದಿನೇಳು ವರ್ಷಗಳ ಸ್ವರಾಂಜಲಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕೈಂಕರ್ಯವನ್ನು ಗುರುತಿಸಿ ಬರೆದಿರುವುದು ಒಳಿತಾಯಿತು. ತಮ್ಮ ಸೇವೆಯ ಮಜಲುಗಳನ್ನು ಸಕ್ಷಮವಾಗಿ ನಿರ್ವಹಿಸಲು ಅಗತ್ಯ ಸಹಾಯ ಸಮಾಜದಿಂದ ಹರಿದುಬರಲಿ ಎಂದು ಆಶಿಸುತ್ತೇನೆ. ಈಗೀಗ ಸೇವೆಯೆಂಬುದಕ್ಕೆ ಎರಡು ಮುಖ್ಯ ಆಯಾಮಗಳನ್ನು ಗುರುತಿಸಲು ಸಾಧ್ಯವಿದೆ. ಒಂದು ಸ್ವಾರ್ಥ ಮತ್ತೊಂದು ನಿಸ್ವಾರ್ಥ. ಎರಡಕ್ಕೂ ಐಡಿಯಾ ಮತ್ತು ಐಡಿಯಾಲಜಿಗಳಿರುತ್ತವೆ. ಆದರೆ ಸಮಾಜ ಮತ್ತು ಸೇವೆಯನ್ನು ನೋಡುವಲ್ಲಿ, ಅರಿಯುವಲ್ಲಿ ಭಿನ್ನತೆಗಳಿರುತ್ತವೆ. ಸೇವೆ ಮಾಡಬೇಕೆಂಬ, ಸೇವೆ ಮಾಡುವ ಸ್ವಾರ್ಥ ಬೇರೆ, ಸೇವೆಯಿಂದ ಬಯಸುವ ಸ್ವಾರ್ಥ ಬೇರೆ. ಇವನ್ನೂ ಅರಿಯುವುದು ಬಹುಮುಖ್ಯ.
ಕೊನೆಯಲ್ಲಿ, ನಿಮಗೆ ಹಳ್ಳಿಯಿಂದ ತಾಲೂಕಿಗೆ ಪ್ರಯಾಣ ದೂರವಾಗಿತು. ನಾನೂ ಮನೆಯವರೊಂದಿಗೆ ವರ್ಷಕ್ಕೋ- ಎರಡು ವರ್ಷಕ್ಕೋ ಊರಿನಿಂದ ಊರಿಗೆ ವರ್ಗಾವಣೆಯಾಗುತ್ತಿದ್ದ ಕಾರಣ ನನಗೂ ಅಭಿಜಾತ ಕಲೆಯೊಂದನ್ನು ಕಲಿಯುವುದಕ್ಕೆ ಸಾಧ್ಯವಾಗಲಿಲ್ಲ. ಇದಕ್ಕೆ ಸರಕಾರವೇ ನೇರ ಕಾರಣ ಅಥವಾ ಸರಕಾರದ ನಿಯಮಗಳೇ ನಿರಂತರ ವರ್ಗಾವಣೆಯಾಗುವ ಸರಕಾರಿ ಉದ್ಯೋಗಿಗಳ ಮಕ್ಕಳನ್ನು ಕಲೆಗಳ ನಿಲುಕುವಿಕೆಯಿಂದ ದೂರಂಆಡುತ್ತಿರುವುದು ಎಂದರೆ ಹೇಗಾದಿತು! 🙂 ಈತನ್ಮಧ್ಯೆ ಅಲ್ಪಸ್ವಲ್ಪ ಸಮಯದಲ್ಲಿಯೇ ರಾಯಚೂರಿನಲ್ಲಿ ನರಸಿಂಹರಾಜಲು ವಡವಟಿಯವರ ಬಳಿ ಅಣ್ಣ ತಬಲ ಕಲಿತರೆ, ಅಕ್ಕ ಸಂಗೀತ ಕಲಿತರು. ನಾನು ಅವರ ಕಛೇರಿಗಳಿಗೆ ಹೋಗಿ ಗಾಢವಾದ ಏರು-ಇಳಿ ಸ್ವರಗಳಿಗೆ (ಆಳವಾದ ನಿದ್ದೆಯಲ್ಲಿ) ತಲೆದೂಗಿದ್ದು ಮಾತ್ರ ನೆನಪು!.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ