ಅನಿಕತೆ

ನಿಮಗೇನ್ ಬೇಕೋ, ಅದನ್ನೇ ಓದಿ, ಕಲಿಯೋದನ್ನ ಚೆನ್ನಾಗಿ ಕಲೀರಿ

  • ಅನಿತಾ ನರೇಶ್ ಮಂಚಿ.
  • ಅಂಕಣ: ಅನಿಕತೆ

ಸಾಂದರ್ಭಿಕ ಚಿತ್ರ…ಕೃಪೆ: ಇಂಟರ್ ನೆಟ್

‘ಏನು ಕನಕಾಂಗಿ ಕಾಣಿಸ್ತಾನೆ ಇಲ್ಲ ಇತ್ತೀಚೆಗೆ? ಏನಾದ್ರು ಆರೋಗ್ಯದ ತೊಂದ್ರೆಯಾಯ್ತೇನೋ ಅಂತ ಕೇಳೋಣಾ ಅಂತಲೇ ಇವತ್ತು ನಿಮ್ಮಲ್ಲಿಗೆ ಬಂದಿದ್ದು’
‘ಕೆಲಸಾ ಅಂತೇನಿಲ್ಲ ಸರೋಜಮ್ಮಾ.. ಮಕ್ಕಳಿಗೆ ಪರೀಕ್ಷೆ ಬಂತಲ್ಲಾ.. ದೊಡ್ಡವಳು ಈ ವರ್ಷ ಎಸ್ಸೆಸ್ಸೆಲ್ಸಿ. ಅವಳನ್ನು ಓದಲು ಕೂರಿಸುವುದೇ ದೊಡ್ಡ ಕೆಲಸ ಆಗ್ಬಿಟ್ಟಿದೆ ನಂಗೆ.’
‘ಹೋ.. ಪರೀಕ್ಷೆ ಜ್ವರ ಹಾಗಿದ್ರೆ ನಿಮ್ಗೆ. ಅವ್ಳು ಬುದ್ಧಿವಂತ ಹುಡುಗಿಯಲ್ವಾ.. ಮತ್ಯಾಕೆ ಅಷ್ಟೊಂದು ತಲೆಬಿಸಿ ಮಾಡ್ತೀರಾ?’
‘ಬುದ್ಧಿವಂತ ಹುಡುಗಿಯೇ ಆಗಿದ್ಲು.. ಆದ್ರೆ ಇತ್ತೀಚೆಗೆ ಯಾಕೋ ಅವಳ ಮಾರ್ಕೆಲ್ಲಾ ಕಡಿಮೆ ಆಗ್ತಾ ಇದೆ. ಅದೇ ನಂಗೂ ನಮ್ಮನೆಯವ್ರಿಗೂ ತುಂಬಾ ಚಿಂತೆಯಾಗ್ಬಿಟ್ಟಿದೆ. ‘
‘ಇದೇನ್ರೀ ಹೇಳೋದು ನೀವು? ಕ್ಲಾಸಲ್ಲಿ ಯಾವಾಗ್ಲೂ ಇವಳೇ ಅಲ್ವಾ ಫಸ್ಟ್ ಬರ್ತಾ ಇದ್ದಿದ್ದು.’
‘ಹುಂ.. ಮೊದ್ಲು ಬರ್ತಾ ಇದ್ಲು.. ಆದ್ರೆ ಈಗೊಂದೆರಡು ತಿಂಗಳಿಂದ ಹೀಗಾಗಿದೆ? ಯಾಕೆ ಕಡ್ಮೆ ಮಾರ್ಕು ಅಂದ್ರೆ ಪಾಸ್ ಆಗಿದ್ದೀನಲ್ಲಾ ಅಂತಾಳೆ.’
‘ಅಯ್ಯೋ.. ಅದೇನಾಯ್ತು? ಏನಾದ್ರು ಹೇಳಿದ್ರಾ ಅವ್ಳಿಗೆ ಬೇಸರ ಆಗೋ ರೀತಿಯಲ್ಲಿ.. ಅಥ್ವಾ ಏನಾದ್ರು ಒತ್ತಡ ಇದೆಯಾ?’
”ಪೇಟೆಯಿಂದ ನಮ್ಮ ಭಾವ ಬಂದಿದ್ರು. ಅವ್ರ ಮಗ ಈ ವರ್ಷ ಇಂಜಿನಿಯರಿಂಗ್ ಮಾಡ್ತಾನೆ. ತುಂಬಾ  ಫೇಮಸ್ ಕಾಲೇಜಲ್ಲಿ ಕಲ್ತಿದ್ದು ಅವನು. ಅಲ್ಲಿ ಕಲ್ತೋರೆಲ್ಲಾ ರ‍್ಯಾಂಕ್ ತೆಗೋಳ್ಳೋದು ಗ್ಯಾರಂಟಿ. ಮೆಡಿಕಲ್ ಮತ್ತು ಇಂಜಿನಿಯರಿಂಗುಗಳಿಗೆ ಸೆಲೆಕ್ಟ್ ಆಗಿಯೇ ಆಗ್ತಾರಂತೆ.”
‘ಓಹೋ..’
‘ಹುಂ ಕಣ್ರೀ.. ಅಷ್ಟೇ ಅಲ್ಲ. ನಮ್ಮ ಭಾವ ಅಲ್ಲೇ ಓದ್ತಾ ಕೂತಿದ್ದ ಇವಳನ್ನು ನಿಂಗೆಷ್ಟು ಮಾರ್ಕ್ಸ್ ಬರುತ್ತಮ್ಮಾ ಅಂತ ಕೇಳಿದ್ರು. ಇವಳ ಮಾರ್ಕ್ ನೋಡಿ ಅವ್ರಿಗೇ ಆಶ್ಚರ್ಯ ಆಗೋಯ್ತು.  ಹೊರಡುವಾಗ, ನೀನೇನಾದ್ರೂ ಇದೇ ಮಾರ್ಕು ಮೈಂಟೈನ್ ಮಾಡ್ಕೊಂಡು ಬಂದ್ರೆ ನಿನ್ನನ್ನು  ಸಂದೀಪಣ್ಣ ಓದಿದ ಕಾಲೇಜಲ್ಲಿ ಓದ್ಸೋಣ ಅಂದಿದ್ರು. ಅದಕ್ಕೆ ಇವಳು.  ಇಲ್ಲಾ ದೊಡ್ಡಪ್ಪ ನಾನಿಲ್ಲೇ ಓದೋದು, ನಂಗೆ ಸೈನ್ಸ್ ಇಷ್ಟ ಇಲ್ಲಾ ಅಂದಿದ್ಲು. ಅದಕ್ಕೆ ನಮ್ಮ ಭಾವ ಇವ್ರತ್ರ  ನೋಡಪ್ಪಾ, ಮಕ್ಳ ಮಾತು ಕೇಳಿದ್ರೆ ಅವರ ಭವಿಷ್ಯ ಉದ್ಧಾರ ಆಗಲ್ಲ. ಕೆಲವೊಂದು ನಿರ್ಧಾರ ನಾವೇ ತೆಗೊಳ್ಬೇಕು, ಇವ್ಳನ್ನು ಸಂದೀಪ್ ಓದಿದ ಕಾಲೇಜಿಗೇ ಹಾಕೋಣಾ, ಅಂತ ಒತ್ತಾಯ ಮಾಡಿದ್ರು. ಇವ್ರಿಗೂ ಅದು ಸರಿ ಅನ್ನಿಸಿ ಆಯ್ತು ಅಂತ ಹೇಳಿದ್ರು. ಆದ್ರೆ ಇವ್ಳದ್ದು ಒಂದೇ ಹಠ ನಾನು ಇದೇ ಊರಲ್ಲಿ ಓದೋದು. ನಂಗೆ ಸೈನ್ಸ್ ಬೇಡ ಅಂತ. ಸರಿ ಯಾವ್ದಕ್ಕೂ ಪರೀಕ್ಷೆ ಮುಗಿದು ರಿಸಲ್ಟ್ ಬರ್ಲಿ.. ಮಾರ್ಕ್ ನೋಡ್ಕೊಂಡು ಡಿಸೈಡ್ ಮಾಡೋಣಾ ಅಂತ ನಾನು ಮಾತುಕತೆಗೆ ಮಂಗಳ ಹಾಡಿದ್ದೆ. ಅದಾದ ಮರು ಪರೀಕ್ಷೆಯಲ್ಲಿಯೇ ಇವ್ಳಿಗೆ ಕಮ್ಮಿ ಮಾರ್ಕು ಬಂದಿತ್ತು. ಇವಳದ್ದು ಒಂದು ಅಭ್ಯಾಸ ಇದೆ. ಪರೀಕ್ಷೆ ಮುಗಿದ ಕೂಡ್ಲೇ ಮನೆಗೆ ಬಂದು ಆ ಕೊಶ್ಚನ್ ಪೇಪರಿನ ಎಲ್ಲಾ ಪ್ರಶ್ನೆಗಳಿಗೂ ಇನ್ನೊಮ್ಮೆ ಉತ್ತರ ಬರಿಯೋದು..  ರಿಸಲ್ಟ್ ಬರೋವರೆಗೂ ಅದನ್ನು ಇಟ್ಕೊಂಡಿರ್ತಾಳೆ. ನಾನು ಒಮ್ಮೊಮ್ಮೆ ಕೂತ್ಕೊಂಡು ಅದನ್ನು ನೋಡ್ತೀನಿ. ಹೆಚ್ಚಾಗಿ ಇದ್ರಲ್ಲಿ ಎಷ್ಟು ಸರಿ ಉತ್ತರಗಳಿರುತ್ತೋ ಅಷ್ಟು ಅವಳ ಶಾಲೆಯ ಪೇಪರಿನಲ್ಲೂ ಇರುತ್ತೆ. ಈ ಸಲಾನೂ ಇಲ್ಲಿರೋ ಪೇಪರಿನ ಸರಿ ಉತ್ತರ ನೋಡಿದ್ರೆ ಇವ್ಳಿಗೆ ಒಳ್ಳೇ ಮಾರ್ಕ್ಸ್ ಬರ್ಲೇಬೇಕಿತ್ತು. ಆದ್ರೆ ಶಾಲೆಯಲ್ಲಿ ತುಂಬಾ ಕಡಿಮೆ ಬಂದಿದೆ.’
‘ಕೇಳಿಲ್ವಾ ನೀವು ಏನಾಯ್ತು ಅಂತ..’
‘ಕೇಳದೇ ಇರ್ತೀವಾ.. ಕೇಳಿದ್ರೆ ನಂಗೆ ಉತ್ರ ಗೊತ್ತಿದೆ ಸಾಕು.. ಪಾಸ್ ಆಗಿದ್ದೀನಲ್ವಾ ಅಂತಾಳೆ. ಏನು ಮಾಡೋದಿವ್ಳಿಗೆ ಅಂತಾನೇ ಅರ್ಥ ಆಗ್ತಿಲ್ಲ.’
‘ಅವ್ಳಿಗೆ ಸೈನ್ಸ್ ಇಷ್ಟ ಇಲ್ಲ. ಹೆಚ್ಚು ಮಾರ್ಕ್ಸ್ ಬಂದ್ರೆ  ನೀವು ಅದ್ಕೇ ಕಳಿಸ್ತೀರಿ ಅಂತ ಹೀಗೆ  ಗೊತ್ತಿದ್ದನ್ನು ಬರಿಯದೇ ಬರ್ತಾ  ಇರ್ಬೇಕು ಅವ್ಳು. ಮೊದಲು ಅವಳ ಇಷ್ಟದ ಕಡೆಗೆ ಗಮನ ಕೊಡೋದು ಒಳ್ಳೇದು ಅನ್ಸುತ್ತೆ. ಬರೀ ಸೈನ್ಸ್ ತೆಗೊಂಡವ್ರು ಮಾತ್ರ ಜೀವನದಲ್ಲಿ ಸಫಲರಾಗ್ತಾರೆ ಅನ್ನೋ ಯೋಚ್ನೆ ತಪ್ಪು ಅಂತ ನಿಮ್ಗೂ ಅನ್ಸಲ್ವಾ..’
‘ಹಾಗಂತೀರಾ? ಹೌದೇನೋ..ಈಗೇನ್ರೀ ಮಾಡೋದು.’
‘ಏನು ಮಾಡೋಡ್ಬೇಡ. ಅವ್ಳಿಗೆ ನೀವ್ಯಾವ ಸಬ್ಕೆಕ್ಟ್ ಬೇಕಿದ್ರೂ ಓದಬಹುದು. ಅಂತ ಭರವಸೆ ಹುಟ್ಟುವಂತೆ ಮಾತನಾಡಿ. ಅವ್ಳ ಮಾರ್ಕು ಮೊದಲಿನಂತೆ ಖಂಡಿತಾ ಏರುತ್ತೆ. ಅವಳಿಷ್ಟದ ಓದಿಗೆ ಅವಕಾಶ ಮಾಡ್ಕೊಡಿ. ಖಂಡಿತಾ ಸಾಧನೆ ಮಾಡ್ತಾಳೆ. ‘
‘ಹುಂ.. ನಿಮ್ಮಾತು ಸತ್ಯ ಅನ್ಸುತ್ತೆ ಸರೋಜಮ್ಮಾ.. ಈಗಿನ ಮಕ್ಕಳ ಸೂಕ್ಷ್ಮತೆ ನಮಗರ್ಥ ಆಗೋದು ಸ್ವಲ್ಪ ಕಷ್ಟ..ಇವರಿಗೂ ಇವತ್ತೇ ಹೇಳ್ಬಿಡ್ತೀನಿ.. ‘
ಆಸಕ್ತಿಯ ವಿಷಯಗಳ ಓದು ಹೆಚ್ಚಿನ ಸಾಧನೆಗೆ ಪ್ರೇರೇಪಿಸುತ್ತದೆ.. ಹೌದು ಅನ್ಸುತ್ತಾ ನಿಮ್ಗೂ..
Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi