ಆರಾಧನೆ

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ

ಲೇಖನ: ಪ್ರೊ. ರಾಜಮಣಿ ರಾಮಕುಂಜ

ಜಾಹೀರಾತು

ಪೂರ್ವದಲ್ಲಿ ಸುಳ್ಳಮಲೆ ಬಳ್ಳಮಲೆಗಳು ಆವರಿಸಿಕೊಂಡು; ಗದ್ದೆ, ತೋಟ, ತೊರೆಗಳನ್ನು ತನ್ನ ಸುತ್ತಲೂ ಹಾಸಿಕೊಂಡು ಅತ್ಯಂತ ಸುಂದರ ಹಾಗೂ ಭವ್ಯ ತಾಣವಾಗಿ, ಯಾವತ್ತೂ ಮಂಗಳಕ್ಕೇ ಇಂಬುಕೊಡುತ್ತಿರುವ ಪ್ರಸಿದ್ಧ ಕ್ಷೇತ್ರವೇ ಮೊಗರನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಾಲಯ. ’ಮದ್ಯಾನೊ ಮುಟ್ಟ ನೆಟ್ಲ ಮದ್ಯಾನೊಡ್ದ್ ಬುಕ್ಕ ನಟ್ಲ’ ಎಂಬ ತುಳುವಿನ ಆಡು ನುಡಿಯಂತೆ, ಅನ್ಯಾಯದ ಚಿಂತನೆಗಳನ್ನು ಯಾವನೇ ಮಾಡಿದರೂ ಕೂಡಾ ನಿಟಿಲಾಪುರಕೆ ಸಂಬಂಧಪಟ್ಟಂತೆ ಸೂರ್ಯೋದಯದಿಂದ ಅಸ್ತಂಗತನಾಗುವುದರ ಒಳಗೆ ಆತ ಅದರ ಪ್ರತಿಫಲ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಲೇ ಬೇಕಾಗುತ್ತದೆ ಎಂದು ಊರಿನ ಜನ ಇಂದಿಗೂ ಹೇಳುತ್ತಿದ್ದಾರೆ.

ಮಂಗಳೂರಿನಿಂದ 23 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ಮಂಗಳೂರು-ಬೆಂಗಳೂರು ರಾ ಷ್ಟ್ರೀಯ ಹೆದ್ದಾರಿಯಲ್ಲಿಯ ಕಲ್ಲಡ್ಕ ಎಂಬಲ್ಲಿಂದ ವಿಟ್ಲ ರಸ್ತೆಯಲ್ಲಿ ಎರಡು ಕಿ.ಮೀ. ಕ್ರಮಿಸಿದರೆ, ಬಲಬದಿಯಲ್ಲಿರುವ ರಸ್ತೆಯಲ್ಲಿ ಮುಂಬರಿದು ರೈಲ್ವೇ ಗೇಟಿನ ನಂತರ ಬಲಕ್ಕೆ ಕವಲೊಡೆಯುವ ಮಂಚಿ ರಸ್ತೆಯ ಮೂಲಕ ತಲುಪಬಹುದು. ಜನರ ಆಡು ನುಡಿ ತುಳುವಿನಲ್ಲಿ ’ನೆಟ್ಲ’ ಎಂದು ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ಸರಕಾರದ ವತಿಯಿಂದ ನಿಗದಿತವಾದ ತಸ್ತೀಕು 147.80 ಪೈಸೆ ಮಾತ್ರ. ದ.ಕ. ಜಿಲ್ಲೆಯ ಅಪೂರ್ವವಾದ ಉದ್ಭವ ಲಿಂಗಗಳಲ್ಲಿ ಇಲ್ಲಿನ ಶಿವಲಿಂಗವೂ ಒಂದು. ಸರಿಯಾದ ಐತಿಹಾಸಿಕ ಲಭ್ಯ ಮಾಹಿಗಳಿಲ್ಲವಾದ ಕಾರಣ ದೇವಾಲಯದ ಕಾಲ ನಿರ್ಣಯ ಅಸಾಧ್ಯವಾಗಿದೆ. ಆದರೂ, ಸುಮಾರು ಒಂದು ಸಾವಿರ ವರ್ಷಕ್ಕೂ ಹಿಂದಕ್ಕೆ ಇದರ ಪ್ರತಿಷ್ಠಾಪನಾ ಕಾರ್ಯ ನೆರವೇರಿರಬಹುದೆಂದು ಆರೂಢ ಪ್ರಶ್ನೆಯಲ್ಲಿ ಹೇಳಲಾಗಿದೆಯೆಂದು ಭಕ್ತ ಜನರ ಮಾತು. ದೇವಾಲಯದ ಈ ಹಿಂದಿನ ಜೀರ್ಣೋದ್ಧಾರದ ಸಂದರ್ಭದಲ್ಲಿ ಗರ್ಭಗುಡಿಯ ಪಂಚಾಂಗವನ್ನು ಅಗೆಯುವಾಗ ಬೆಳ್ಳಿಯ ತಗಡುಗಳು ದೊರಕಿದ್ದು, ಅದರಲ್ಲಿ ಉಕ್ತವಾಗಿರುವಂತೆ ಸುಮಾರು ೫೦೦ ವರ್ಷಗಳ ಹಿಂದೆ ಅಕ್ಕಮ್ಮದೇವಿ ಎಂಬ ಜೈನ ಮಹಿಳೆ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಳು ಎಂಬುದು ತಿಳಿದು ಬರುತ್ತದೆ. ಈ ಹಿಂದೆ ಈಗಿನ ಕಲ್ಲಡ್ಕದ ಬಳಿಯ ಕಾಂಪ್ರಬೈಲು ಎಂಬಲ್ಲಿ ನೆಲೆನಿಂತು ಪೂಜೆಗೊಳ್ಳುತ್ತಿರುವ ಅಜ್ಜೇರ ದೈವಗಳು ಘಟ್ಟದಿಂದ ಕೆಳಗಿಳಿದು ಬರುವಾಗ ಸುಬ್ರಹ್ಮಣ್ಯ ದೇವಾಲಯದ ಧ್ವಜಸ್ತಂಭವನ್ನು ಮೂರು ತುಂಡುಗಳನ್ನಾಗಿ ಮಾಡಿ ತಂದು ಬುಡದ ತುಂಡನ್ನು ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿಯೂ, ಮಧ್ಯದ ತುಂಡನ್ನು ಕಾಂಪ್ರಬೈಲು ಉಳ್ಳಾಳ್ತಿ ದೈವಸ್ಥಾನದಲ್ಲಿಯೂ ತುದಿಯ ತುಂಡನ್ನು ನಿಟಿಲಾಕ್ಷ ಸದಾಶಿವ ದೇವಾಲಯದಲ್ಲಿಯೂ ಪ್ರತಿಷ್ಠೆ ಮಾಡಿದುದಾಗಿ ಸ್ಥಳ ಪುರಾಣವಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸುಬ್ರಹ್ಮಣ್ಯದಲ್ಲಿ ಇಂದಿಗೂ ಧ್ವಜಸ್ಥಂಭವಿಲ್ಲ, ಬರೆಯ ದಂಡೆಮರ ಮಾತ್ರವಿದೆ. ಇದಲ್ಲದೆ ನಿಟಿಲಾಪುರದಲ್ಲಿ ಮೊದಲು ಧ್ವಜಾರೋಹಣವಾಗಿ ಅಲ್ಲಿನ ಧ್ವಜ ಇಳಿಸಿದ ನಂತರ ಕಾಂಪ್ರಬೈಲಿನಲ್ಲಿ ಧ್ವಜಾರೋಹಣ ಮಾಡಿ, ಅವರೋಹಣದ ನಂತರ ಕಡೇಶ್ವಾಲ್ಯ ದೇವಸ್ಥಾನದಲ್ಲಿ ಧ್ವಜ ಏರುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. (ಇನ್ನೊಂದು ಮೂಲದ ಪ್ರಕಾರ, ಕಾಂಪ್ರಬೈಲು ಉಳ್ಳಾಳ್ತಿಯ ಕಿರುವಾಳು ನೆಟ್ಲಕ್ಕೆ ಬಂದು ಧ್ವಜಾರೋಹಣದ ನಂತರ ಕಾಂಪ್ರಬೈಲಿನಿಂದ ಕಡೇಶ್ವಾಲ್ಯಕ್ಕೆ ಹೋಗಿ ಅಲ್ಲಿ ಕೊಡಿಯೇರುವುದು ರೂಢಿಯಲ್ಲಿತ್ತು. ನೆಟ್ಲಕ್ಕೆ ಸಂಬಂಧಿಸಿದಂತೆ ಈ ಕ್ರಮವು ನಿಂತು ಹೋಗಿ ಸುಮಾರು 106 ವರ್ಷಗಳು ಸಂದುವು ಎಂಬುದಾಗಿ ಅಧಿಕೃತ ಮೂಲಗಳಿಂದ ತಿಳಿದುಬರುತ್ತದೆ.

ಪೌರಾಣಿಕ ಹಿನ್ನೆಲೆ: ದಕ್ಷಯಜ್ಞದಲ್ಲಿ ದಾಕ್ಷಾಯಣಿಯ ವಿಯೋಗದ ಬಳಿಕ ಶಿವನು ತಪೋನಿರತನಾಗುತ್ತಾನೆ. ಚಾಕ್ಷಾಯಣಿಯಾದರೋ ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಬಂದು ಶಿವನನ್ನೇ ವರಿಸಲು ವ್ರತಧಾರಿಯಾಗಿದ್ದಾಳೆ. ಇನ್ನೊಂದು ಕಾಡೆ ತಾರಕಾಸುರನ ಉಪಟಳದಿಂದ ಕಂಗೆಟ್ಟ ಇಂದ್ರಾದಿ ದೇವತೆಗಳು ಅಸುರನನ್ನು ಕೊಲ್ಲುವ ಶಿವಕುಮಾರನ ಜನನವನ್ನು ನಿರೀಕ್ಷಿಸುತ್ತಾರೆ. ಶಿವನ ತಪೋಭಂಗಕ್ಕಾಗಿ ಇಂದ್ರನು ಮನ್ಮಥನನ್ನು ಕಳುಹಿಸುತ್ತಾನೆ. ತನ್ನ ಬಾಣ ಪ್ರಯೋಗದಿಂದ ಶಿವನನ್ನು ತಪಸ್ಸಿನಿಂದ ಎಚ್ಚರಗೊಳಿಸುವಲ್ಲಿ ಮನ್ಮಥನು ಯಶಸ್ವಿಯಾಗುತ್ತಾನೆ. ಆದರೆ, ತನ್ನ ತಪೋಭಂಗಗೊಳಿಸಿದ ಮನ್ಮಥನನ್ನು ತನ್ನ ಹಣೆಗಣ್ಣಿನಿಂದ ಭಸ್ಮಗೊಳಿಸುತ್ತಾನೆ ಶಿವ. ಇನ್ನೊಂದು ಕಡೆಯಲ್ಲಿ ತನ್ನ ಸೇವೆಯಿಂದಲೇ ಮನಸ್ಸನ್ನು ಪ್ರಸನ್ನಗೊಳಿಸಿದ ಪಾರ್ವತಿಯನ್ನು ವರಿಸಿ, ಕುಮಾರನನ್ನು ಪಡೆಯುತ್ತಾನೆ. ಮುಂದಕ್ಕೆ ಆತನಿಂದ ತಾರಕಾಸುರನ ವಧೆಯಾಗುತ್ತದೆ. ನಿಟಿಲ ಎಂದರೆ ಹಣೆ ಎಂದರ್ಥ. ಹೀಗೆ ನಿಟಿಲಾಕ್ಷನು ಲಿಂಗರೂಪಿಯಾಗಿ ಉದ್ಭವಿಸಿದ ಕ್ಷೇತ್ರ ನಿಟಿಲಾಪುರವೆಂದೂ ಸದಾ ಮಂಗಳ ಸ್ವರೂಪಿಯಾದ ಕಾರಣ ಸದಾಶಿವನೆಂಬ ಹೆಸರಿನೊಂದಿಗೆ ಆರಾಧಿಸಲ್ಪಡುತ್ತಿದ್ದಾನೆ.

ಜಾಹೀರಾತು

ಇನ್ನೊಂದು ಐತಿಹ್ಯದ ಪ್ರಕಾರ, ದೇವಾಲಯದ ನೈಋತ್ಯ ದಿಕ್ಕಿನ ಗುಡ್ಡದ ಮೇಲಿರುವ ಬಿತ್ತ್‌ಪಾಡಿ ಪಾದೆ, (ದೇವರಿಗೆ ಸಂಬಂಧಿಸಿದಂತೆ ’ಬೀಜಾವಾಪನವಾದ ಸ್ಥಳ’ ಅರ್ಥಾತ್ ’ಬೀಜ ಹಾಕಿದ ಬಂಡೆ’ ಅಂದರೆ, ದೇವರು ಮೊದಲು ’ಮೈದೋರಿದ ಬಂಡೆ. ಈ ಬಂಡೆಯ ಮೇಲೆ ಸುಮಾರು ಎರಡೂವರೆ ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲದ ನೀರಿನ ಕುಂಡಿಕೆಯೊಂದಿದೆ). ಪಿಲಿಂಜ ಎಂಬಲ್ಲಿನ ಏತದ ಗುಂಡಿ, ಬಯಲು ಮಧ್ಯದ ’ದೇವೆರೆ ಮಾರು’ ಇತ್ಯಾದಿ ಕಡೆಗಳಲ್ಲಿ ದೇವರು ತಮ್ಮ ಗುರುತನ್ನು ತೋರಿಸಿ, ಕೊನೆಯಲ್ಲಿ ದೇವರ ಗದ್ದೆಯಲ್ಲಿ ಶಿವಲಿಂಗವು ಆವಿರ್ಭವಿಸಿದಾಗ, ಭಕ್ತ ವೃಂದವು ತಮಗೆ ಅನುಕೂಲವಾದ ಸ್ಥಳದಲ್ಲಿ ಮೈದೋರಲು ಪ್ರಾರ್ಥಿಸಿದಾಗ, ಪ್ರಾರ್ಥನೆಯನ್ನು ಮನ್ನಿಸಿದ ಶಿವ, ಸನಿಹದ ಮುಂಡೇವಿನ (ಚಾಪೆ ಹೆಣೆಯುವ ಕೇತಕೀ ಜಾತಿಯ ಗಿಡ) ಪೊದರಿನಲ್ಲಿ ಅವತರಿಸಿದ ವಿಚಾರವು ಊರಿನ ಪ್ರಮುಖರಿಗೆ ಕನಸಿನಲ್ಲಿ ಗೋಚರಿಸಲು ಮರು ದಿವಸ ಊರವರು ಸೇರಿ ಈ ಗಿಡಗಳನ್ನು ಸವರಿದಾಗ ಅದರ ಬುಡ(ನೆಟ್ಟಿ) ದಲ್ಲಿ ಲಿಂಗ ಗೋಚರವಾಯಿತು. ಹೀಗೆ ನೆಟ್ಟಿಯಲ್ಲಿ ಲಿಂಗ ಉದ್ಭವಿಸಿದ ಊರು ನೆಟ್ಟಿಲ(ನೆಟ್ಲ) ಎಂಬ ಹೆಸರು ಪಡೆಯಿತು. ಇನ್ನೊಂದು ವಾದದ ಪ್ರಕಾರ ’ನೆಡಿಲ್’ ಗಿಡಗಳು ಇರುವ ಜಾಗ ನೆಡಿಲ್, ನೆಟಿಲ್, ನೆಟ್ಲ ಆಯಿತು ಎಂಬ ಮಾತೂ ಇದೆ.

ಈ ದೇವಸ್ಥಾನದ ಸೀಮೆಯಲ್ಲಿ ನರಿಕೊಂಬು ಮಾಗಣೆ ಮತ್ತು ಇಡ್ಕಿದು ಕಸಬಾ ಮಾಗಣೆ ಎಂಬ ಎರಡು ಮಾಗಣೆಗಳು ಸೇರಿವೆ. ಈ ದೇವಾಲಯ ಮೊಗರ್ನಾಡು ಸೀಮೆ ದೇವಸ್ಥಾನವಾಗಿದೆ. ಕೆಳದಿ ಅರಸ ಕಾಲದಲ್ಲಿ ಮೊಗರ್ನಾಡು ಸೀಮೆಯೆಂದರೆ ವಿಶಾಲವಾದ ಕಾಸರಗೋಡು ಗಡಿಯಿಂದ ವಿಟ್ಲ ಸೀಮೆ ಸಹಿತ ಶಂಭೂರು ನೇತ್ರಾವತಿ ನದಿ ತೀರದವರೆಗಿನ ಭೂಮಿಯನ್ನು ಹೊಂದಿತ್ತು.

ನೇತ್ರಾವತಿ ನದಿಯಲ್ಲಿ ಪಾಣೆಮಂಗಳೂರು ಸುಂಕದಕಟ್ಟೆಯಿಂದ ಆಹಾರ ಸಾಮಗ್ರಿಗಳು ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದ ಕಾಲದಲ್ಲಿ ಶಂಭೂರಿನಿಂದ ವಿಟ್ಲಕ್ಕೆ ನೇರ ದಾರಿಯು ನೆಟ್ಲದ ಮೂಲಕ ಹಾದು ಹೋಗುತ್ತಿದ್ದು ಮುಂದಕ್ಕೆ ನೆಟ್ಲದ ದಕ್ಷಿಣಕ್ಕೆ ’ವಿಟ್ಲ’ ಹೆಸರಿನಲ್ಲಿ ಊರು ಬೆಳೆಯಿತು ಎಂಬುದನ್ನು ಹಿರಿಯರು ಊಹಿಸುತ್ತಾರೆ.

ಜಾಹೀರಾತು

ಚಾರಿತ್ರಿಕ ಹಿನ್ನೆಲೆ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸೇತುವೆಯಿಂದ ಪೂರ್ವಕ್ಕೆ ಅಮೈ ಸಂಕದವರೆಗೆ ಹಾಗೂ ದಕ್ಷಿಣದ ಕೆಲಿಂಜ ಮಂಗಿಲಪದವಿನಿಂದ ಉತ್ತರದಲ್ಲಿ ನೇತ್ರಾವತಿ ನದಿಯ ’ಕೆಮ್ಮಣ್ಣಗುಂಡಿ’ವರೆಗಿನ ಪ್ರದೇಶ ಮೊಗರ್ನಾಡು ಸಾವಿರ ಸೀಮೆ ಎಂದು ಹೆಸರಾಗಿದೆ. ಪ್ರಾಚೀನ ತುಳು ನಾಡಿನ ಅಳುಪ’ ದೊರೆಗಳ ಸಾಮ್ರಾಜ್ಯಕ್ಕೆ ಈ ಪ್ರದೇಶ ಸೇರಿತ್ತು ಎಂಬುದರ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ಈ ಸೀಮೆಯಲ್ಲಿ ನರಿಕೊಂಬು ಮಾಗಣೆಯ ಕಡೇಶ್ವಾಲ್ಯ , ಬರಿಮಾರು, ಬಾಳ್ತಿಲ, ಕಾಂದಿಲ, ಕಲ್ಲಪಾಪಿ, ಕಶೆಕೋಡಿ, ಬೋರ್ಯ, ಬೊಂಡಾಲ, ಅಮ್ಟೂರು, ಪಾಣೆಮಂಗಳೂರು, ನರಿಕೊಂಬು, ಶಂಭೂರು, ಅರಿಗಲ್ಲು ಎಂಬ ೧೩ ಗ್ರಾಮಗಳು ಮತ್ತು ಇಡ್ಕಿದು ಕಸಬಾ ಮಾಗಣೆಯ ನೆಟ್ಲ, ಕೊಳ್ಕೀರೆ, ವೀರಕಂಭ, ಗೋಳ್ತಮಜಲು, ಅನಂತಾಡಿ, ಪೆರಾಜೆ, ಕೆದಿಲ, ಇಡ್ಕಿದು, ನೆಟ್ಲಮೂಡ್ನೂರು ಎಂಬ 9 ಗ್ರಾಮಗಳು ಸೇರಿ 22 ಗ್ರಾಮಗಳಿವೆ. ಈ ಮೊಗರ್ನಾಡು ಸೀಮೆಯಲ್ಲಿ ಈಗ ಅನೇಕ ದೇವಸ್ಥಾನಗಳಿದ್ದರೂ ಮೂಡುದಿಕ್ಕಿನ ಕಡೇಶಿವಾಲಯದ ಶ್ರೀ ಚಿಂತಾಮಣಿ ನರಸಿಂಹ ದೇವಸ್ಥಾನ ಮತ್ತು ಪಶ್ಚಿಮದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಇವೆರಡು ಸೀಮೆಯ ದೇವಸ್ಥಾನಗಳು ಎಂದು ಪ್ರಸಿದ್ಧ. ನಿಟಿಲಾಪುರ, ಪಿಲಿಂಜ, ಕಾರಂತಕೋಡಿ, ಮಠ, ಚಣಿಲ, ಮುಂಡಾಜೆ, ಕುಡುಬೆಟ್ಟು, ಪಡ್ಡಾಯಿ ಬೈಲು, ಅಮಾಸೆಮೂಲೆ, ಅಯ್ಯಕಟ್ಟೆ, ಕೇನ್ಯ, ಮಕ್ಕಾರು ಪಾದೆ ಹಾಗೂ ದುಗ್ಗತೋಟ ಎಂಬ 14 ವರ್ಗಗಳ ಜನರು ದೇವಸ್ಥಾನದ ವಿವಿಧ ಕೈಂಕರ್ಯ ನಡೆಸುವ ಕ್ರಮವಿದೆ.

ದೇವಸ್ಥಾನದಲ್ಲಿ ಗಣಪತಿಗುಡಿ, ಶಾಸ್ತಾವು ಗುಡಿ ಮತ್ತು ಕುಮಾರಿದೇವಿಯ ಗುಡಿಗಳಿವೆ. ಹಿಂಬದಿಯಲ್ಲಿ ದುರ್ಗಾಲಯ (ದುಗಲಾಯ) ಪಂಜುರ್ಲಿ ಮತ್ತು ಪಿಲಿಚಾಮುಂಡಿ ದೈವಗಳ ಸಾನ್ನಿಧ್ಯವಿದೆ; ಇದಲ್ಲದೆ ನಾಗನಕಟ್ಟೆಯೂ ಇದೆ.

ಕಾರ್ತಿಕ ಶುದ್ಧ 23 ರಂದು ಇಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಅಂದು ನಡೆಯುವ ದೇವರ ಊರು ಸವಾರಿ ನೋಡಲು ಅತ್ಯಂತ ಮನಮೋಹಕ ದೃಶ್ಯ.

ಜಾಹೀರಾತು

ಸಿಂಹ ಸಂಕ್ರಮಣದಂದು ಕೊಪ್ಪರಿಗೆ ಏರಿ ಅಂದಿನಿಂದ ಅನ್ನ ದಾನ ಆರಂಭವಾಗುವುದು ಇಲ್ಲಿನ ರೂಢಿ.

ತ್ರಿಕಾಲ ಪೂಜೆ, ಪ್ರಧಾನ ಹಾಗೂ ಉಪದೇವರುಗಳಿಗೂ ಒಟ್ಟಾಗಿ ದಿನಕ್ಕೆ ಆರು ಸೇರು ಅಕ್ಕಿ ನೈವೇದ್ಯ ಸಮರ್ಪಣೆಯಾಗುತ್ತಿದೆ.

ವಿನಾಯಕನ ಚೌತಿ, ದೀಪಾವಳಿ ಹಾಗೂ ರಥೋತ್ಸವದ ಸಂದರ್ಭ ಹೀಗೆ ವರ್ಷದಲ್ಲಿ ಮೂರು ಸಲ ’ವೆಚ್ಚ ಅಳೆ’ (ಪಲ್ಲಪೂಜೆ) ಯುವ ವಿಶೇಷ ಕಾರ್ಯಕ್ರಮ ನಡೆಯುತ್ತದೆ.

ಜಾಹೀರಾತು

ವೈವಾಹಿಕ ಸಂಬಂಧ, ಸಂತಾನ ಪ್ರಾಪ್ತಿ, ದೈಹಿಕ ಅನಾರೋಗ್ಯದ ನಿವಾರಣೆ ಇಲ್ಲಿನ ಸಾನ್ನಿಧ್ಯ ವಿಶೇಷ. ಸಂತಾನ ಭಾಗ್ಯಕ್ಕಾಗಿ ಕರ್ಪೂರ ಸುತ್ತಿನ ವಿಶೇಷ ಸೇವೆ ಇಲ್ಲಿ ನಡೆಯುತ್ತದೆ.

ಚತುರಸ್ರ ಗರ್ಭಗುಡಿ, ದ.ಕ. ಜಿಲ್ಲೆಯಲ್ಲೇ ಅತ್ಯಂತ ವಿಸ್ತಾರವಾದ ವಿಶೇಷತಃ ಗರ್ಭಗುಡಿಯಷ್ಟೇ ವಿಸ್ತಾರವಾಗಿರುವ ತೀರ್ಥ ಮಂಟಪವಿರುವುದು ಇಲ್ಲಿನ ವಿಶೇಷ. ಇದನ್ನು ಯಾಗ ಶಾಲೆಯೆಂತಲೂ ಕರೆಯಲಾಗುತ್ತಿದೆ. ಆದರೆ ಹೋಮಕುಂಡವಿಲ್ಲ. ತೀರ್ಥಮಂಟಪದ ಎದುರು ಭಾಗದಲ್ಲಿ ಶಿವನಿಗೆದುರಾಗಿ ಪುಟ್ಟ ನಂದಿವಿಗ್ರಹವಿದೆ.

1998 ರಲ್ಲಿ ಇಲ್ಲಿನ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರಗಿತ್ತು. ಪ್ರಕೃತ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ.

ಜಾಹೀರಾತು

ಇದೀಗ ಇಲ್ಲಿ ದಿನಾಂಕ 14 ರಿಂದ 19 ರ ತನಕ ಜಾತ್ರಾ ಸಂಭ್ರಮ; ಮಾ. 6ರಂದು ಗೊನೆಮುಹೂರ್ತ ನಡೆದಿದ್ದು ಮಾ. 14 ರಂದು ದೈವಗಳ ಭಂಡಾರ ಆಗಮನ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ-ಧ್ವಜಾರೋಹಣ, ರಾತ್ರಿ ೮ಗಂಟೆಗೆ ಕಟ್ಟೆ ಸವಾರಿ, ಮಾ. 15 ರಂದು ದೀಪದ ಬಲಿ ಉತ್ಸವ, ಕಟ್ಟೆಸವಾರಿ, ಮಾ. 16 ರಂದು ದೀಪದ ಬಲಿ ಉತ್ಸವ, ಮಹಾಪೂಜೆ, ಸಂಗೀತ ಕಾರ್ಯಕ್ರಮ, ನಡುಬಲಿ ಉತ್ಸವ, ಚಂದ್ರ ಮಂಡಲ, ಬಟ್ಟಲುಕಾಣಿಕೆ, ಪಿಲಿಂಜ ಕಟ್ಟೆಗೆ ಸವಾರಿ, ಉಯ್ಯಾಲೋತ್ಸವ, ದುರ್ಗಾಲಯ ದೈವಗಳಿಗೆ ನೇಮೋತ್ಸವ, ಮಾ. 17 ರಂದು ದೀಪದ ಬಲಿ ಉತ್ಸವ, ಬಟ್ಟಲು ಕಾಣಿಕೆ, ತೆಪ್ಪಂಗಾಯಿ, ಮಹಾಪೂಜೆ, ಶ್ರೀದೇವರ ರಥಾರೋಹಣ, ಮಹಾಪ್ರಸಾದ, ಶ್ರೀ ಮನ್ಮಹಾರಥೋತ್ಸವ, ಬೆಡಿ ಸೇವೆ, ಬಟ್ಟಲು ಕಾಣಿಕೆ, ಬಲಿ ಉತ್ಸವ, ಶಯನೋತ್ಸವ ಜರಗಲಿದೆ.

ಮಾ, 18 ರಂದು ದೇವರ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ ಅವಭೃತ ಬಲಿ, ವಸಂತ ಕಟ್ಟೆಯಲ್ಲಿ ಪೂಜೆ, ಓಕುಳಿ ಪ್ರಸಾದ, ಅವಭೃತ ಸವಾರಿ, ಮಾ. 19 ರಂದು ಮಹಾಪೂಜೆ, ಶ್ರೀ ಧೂಮಾವತಿ-ಬಂಟ ದೈವಗಳಿಗೆ ಶ್ರೀ ದೇವರ ಸನ್ನಿಧಿಯಲ್ಲಿ ನೇಮೋತ್ಸವ, ಬಳಿಕ ಪಿಲಿಚಾಮುಂಡಿ ಮತ್ತು ಪಂಜುರ್ಲಿ ದೈವಗಳ ನೇಮದೊಂದಿಗೆ ಜಾತ್ರಾ ವೈಭವ ಕೊನೆಗೊಳ್ಳುತ್ತದೆ.

(ಲೇಖಕರು ದೇವಸ್ಥಾನಗಳ ಅಧ್ಯಯನಕಾರರು.. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9449894812)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ