www.bantwalnews.com
ಹರಪ್ಪ ಮೊಹೆಂಜೊದಾರೊ ಕಾಲದಲ್ಲೇ ತುಳುನಾಡಲ್ಲಿ ಜನಜೀವನ ಇತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ರಕ್ಕಸರು, ದೇವತೆಗಳು ಸಮುದ್ರವನ್ನು ಮಥಿಸಲು ಪರ್ವತವನ್ನು ಕಡೆಗೋಲಾಗಿ ಅದಕ್ಕೆ ಸರ್ಪರಾಜ ವಾಸುಕಿಯನ್ನು ಸುತ್ತಿದ ಪುರಾಣ ಕೇಳಿದ್ದೇವೆ. ಎಲ್ಲ ಸುವಸ್ತುಗಳು ಬಂದ ಮೇಲೆ ಕೊನೆಗೆ ಅಮೃತ ಸಿಗುತ್ತದೆ. ಅದನ್ನು ಪಡೆಯಲು ಸುರರು, ದಾನವರು ಕಾದಾಡುತ್ತಾರೆ. ಕೊನೆಗೆ ಮೋಹಿನಿ ರೂಪದಲ್ಲಿ ಬಂದ ವಿಷ್ಣು, ಅದನ್ನು ಹೇಗೆ ಹಂಚಿದ ಎಂದು ಪುರಾಣ ವಿವರಿಸುತ್ತದೆ. ಕಡೆಗೋಲಿಗೆ ಹಗ್ಗವಾಗಿ ಬಳಸಿದ ವಾಸುಕಿ ಮೈಯೆಲ್ಲ ಗಾಯವಾಗಿ ಬಳಲಿ ಸಮುದ್ರದ ಬದಿಯಲ್ಲಿ ನರಳುತ್ತಾ ಬೀಳುತ್ತಾನೆ. ವಾಸುಕಿಗೆ ನಾಗಿಣಿಯರು ಮತ್ತು ಆತನ ತಾಯಿ ಲೆಕ್ಕೆಸಿರಿ ಆರೈಕೆ ಮಾಡುತ್ತಾರೆ. ಅವರ ಆರೈಕೆಯಿಂದ ಗುಣ ಹೊಂದಿದ ವಾಸುಕಿ, ತನ್ನ ಸಹೋದರಿಗೆ ಈ ಭೂಭಾಗದಲ್ಲಿ ಎಲ್ಲ ಜನರೂ ನಿಮ್ಮನ್ನು ಆರಾಧಿಸಲೆಂದು ಹರಸುತ್ತಾನೆ. ಹೀಗೆ ಹರಸಲ್ಪಟ್ಟ ನಾಗಿಣಿಯರನ್ನು ನಾಗದೇವರೆಂದು ತುಳುನಾಡಿನ ಜನರು ಪೂಜಿಸುತ್ತಾರೆ ಎಂಬ ನಂಬಿಕೆ.
ಜನರು ಪ್ರಾರಂಭದಲ್ಲಿ ನಾಗಗಳನ್ನು ಪೂಜಿಸುವ ಮೂಲಕ ಪ್ರಕೃತಿಯನ್ನು ಪೂಜಿಸಲು ತೊಡಗುತ್ತಾರೆ. ಆದುದರಿಂದ ತುಳುನಾಡಿನಲ್ಲಿ ವನಭೂಜನ, ಹೊಳೆ ಬದಿ ಭೋಜನ, ಅನೇಕ ಮರಗಳನ್ನು ಪೂಜಿಸುವ ಮೂಲಕ ಪ್ರಕೃತಿಮಾತೆಯನ್ನು ಪೂಜಿಸುತ್ತಾರೆ. ತುಳುನಾಡಿನಲ್ಲಿ ಸೂರ್ಯ ದೇವರನ್ನು ಪೂಜಿಸುತ್ತಾರೆ. ಬೆಳಗ್ಗೆ ಸೂರ್ಯ ದೇವರಿಗೆ ಕೈಮುಗಿಯದೆ ಆಹಾರ ತೆಗೆದುಕೊಳ್ಳುವ ಪದ್ಧತಿ ತುಳುನಾಡಿನಲ್ಲಿಲ್ಲ. ಪ್ರಕೃತಿಯನ್ನು ತಾಯಿ ಎಂದು ನಂಬಿದಂತೆ ಸೂರ್ಯನನ್ನು ತಂದೆ ಎಂದು ನಂಬುತ್ತಾರೆ.
ಪ್ರಾರ್ಥನೆ ಮಾಡುವಾಗ ಎಂಕ್ಲೆ ಅಪ್ಪೆ ಭೂದೇವಿಗ್ ಎಂಗ್ಲೆ ಅಮ್ಮೆ ಸೂರ್ಯದೇವೆರ್ ಗ್ ಎಂದು ಹೇಳುವ ವಾಡಕೆ ಇದೆ. ಅದೇ ಕಾರಣಕ್ಕಾಗಿ ಕೆಡ್ಡೆಸ ಎಂಬ ಮೂರು ದಿನದ ಆಚರಣೆ ಮಾಡುತ್ತಾರೆ. ಅದರ ಅರ್ಥ, ಭೂದೇವಿ ಋತುಮತಿ ಆದ ಮೂರು ದಿನ ಅವಳನ್ನು ಅಗೆಯುವುದಾಗಲೀ, ಉಳುವುದಾಗಲೀ ಮಾಡುವುದಿಲ್ಲ. ಕೆಡ್ಡೆಸ ಸುರು, ನಡು, ಕೊನೆಯಲ್ಲಿ ಆಕೆ ಶುದ್ಧ ಾಗಿ, ತಲೆಬಾಚಿ, ಸಿಂಗಾರ ಾಗುವ ಕ್ರಮವನ್ನು ತುಳಸಿಕಟ್ಟೆ ಮೂಲಕ ಮಾಡುತ್ತಾರೆ. ಕುಡು ಅರಿ (ನನ್ನರಿ) ಮಾಡಿ ಹಂಚುವುದು ಆ ಮೂಲಕ ಶರೀರಕ್ಕೆ ಕ್ಯಾಲ್ಸಿಯಂ ದೊರೆತು ಶಕ್ತಿ ವೃದ್ಧಿಯಾಗುತ್ತದೆ. ಭೂಮಿತಾಯಿ ಋತುಮತಿಯಾದ ಮೇಲೆ ಕೃಷಿ ಕಾರ್ಯ ತೊಡಗಿ ಬೆಳೆ ಬೆಳೆಸುವುದು ವಾಡಿಕೆ. ಯಾವುದೇ ಬೆಳೆ ಚೆನ್ನಾಗಿ ಬೆಳೆಯಬೇಕಾದರೆ ಭೂಮಿಯ ಮಣ್ಣಿನಷ್ಟೇ ಮುಖ್ಯ ಸೂರ್ಯನ ಬಿಸಿಲು. ಸೂರ್ಯಕಿರಣ ಬಿದ್ದ ಮೇಲೆಯೇ ಬೆಳೆ ಬೆಳೆಯುವುದು. ಅದಕ್ಕಾಗಿ ಸೂರ್ಯದೇವನನ್ನು ತಂದೆ ಎನ್ನುತ್ತಾರೆ ತುಳುವರು.