ಸೌತಡ್ಕ ದೇವಸ್ಥಾನದಲ್ಲಿ ಗೋಕಳವು ನಡೆಯುತ್ತಿರುವುದು ಇದೇ ಮೊದಲಲ್ಲ.
ಹೀಗಾಗಿ ಇಲ್ಲಿ ಬಿಗು ಭದ್ರತೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಮಂಗಳವಾರ ರಾತ್ರಿ ಮತ್ತೆ ದನಗಳನ್ನು ಕದ್ದೊಯ್ಯಲಾಗಿದೆ. ಇದಕ್ಕೇನು ಕಾರಣ?
ಇಂಥದ್ದೊಂದು ಪ್ರಶ್ನೆ ಈಗ ಮೂಡಿರುವುದು ಸೌತಡ್ಕದವರಿಗಷ್ಟೇ ಅಲ್ಲ, ಹೊರಗಿನವರಿಗೂ. ಏಕೆಂದರೆ ಸೌತಡ್ಕದಲ್ಲಿ ಗೋಶಾಲೆಗಾಗಿಯೇ ಒಂದೂ ಕಾಲು ಎಕ್ರೆ ವಿಸ್ತೀರ್ಣದ ಜಾಗವಿದೆ.
www.bantwalnews.com report
ಏನೆಲ್ಲ ವ್ಯವಸ್ಥೆ ಇಲ್ಲಿದೆ ನೋಡಿ.
ಕಬ್ಬಿಣದ ಗೇಟು. ಕಣ್ಗಾವಲು ಇರಿಸಲು ಸಿಸಿ ಕ್ಯಾಮರಾ. ಅದೂ ಸಾಲದು ಎಂಬಂತೆ ಬಂದೂಕು ಹಿಡಿದ ಮನುಷ್ಯ. ಹೀಗೆಲ್ಲ ಇದ್ದಾಗ ಸೌತಡ್ಕದಲ್ಲಿ ದನಕಳವು ನಡೆಯಲೇ ಬಾರದಿತ್ತು. ಆದರೆ 17ರಂದು ರಾತ್ರಿ ಕಳೆದು 18ರ ಬೆಳಕು ಹರಿದಾಗ ನಾಲ್ಕು ದನಗಳು ಇಲ್ಲದೇ ಇರುವುದು ಗೊತ್ತಾಗಿದೆ. ಖುದ್ದು ಗನ್ ಮ್ಯಾನ್ ಗೂ ಹೇಗೆ ಕಳವಾಯಿತು ಎಂಬುದೇ ಅರಿವಾಗಲಿಲ್ಲ.
ಕಾಮಧೇನು ಎಂಬ ಹೆಸರಿನ ಈ ಗೋಶಾಲೆಯಲ್ಲಿ ಆಗಾಗ್ಗೆ ದನಕಳವು ಮಾಡಲಾಗುತ್ತಿದೆ ಎಂಬ ಕಾರಣಕ್ಕೇ ಇಲ್ಲಿ ಸಿಸಿ ಕ್ಯಾಮರಾ ಹಾಕಲಾಗಿತ್ತು. ಅದೂ ಸರಿಯಿಲ್ಲ.
2006 ಜನವರಿ 5ರಂದು ಇಲ್ಲಿದ್ದ ನಾಲ್ಕು ಕೋಣಗಳನ್ನು ಕದ್ದೊಯ್ಯಲಾಗಿತ್ತು. ಮಂಗಳವಾರ ರಾತ್ರಿ ಕಬ್ಬಿಣದ ಗೇಟು ಮುರಿದೇ ಮತ್ತೆ ನಾಲ್ಕು ಗೋವುಗಳನ್ನು ಯಾವುದೇ ಹೆದರಿಕೆ ಇಲ್ಲದೆ ಕದ್ದೊಯ್ಯಲಾಗಿದೆ. ಮೂರು ಹಾಲು ಕರೆಯುವ ಹಸುಗಳು ಮತ್ತು ಒಂದು ಹೋರಿಯನ್ನು ಕಳ್ಳರು ಏನು ಮಾಡಿದರೋ ಗೊತ್ತಿಲ್ಲ.
ಆದರೆ ಇಷ್ಟೆಲ್ಲ ಬಂದೋಬಸ್ತ್ ಏರ್ಪಡಿಸಿದರೂ ಯಾಕೆ ಇಲ್ಲಿ ಕಳವು ನಡೆಯುತ್ತೆ ಎಂಬುದು ನಿಗೂಢ.
ಸಾಮಾನ್ಯವಾಗಿ ಸಮೀಪದ ಪೊಲೀಸ್ ಠಾಣಾ ವ್ಯಾಪ್ತಿಗೆ ಒಪ್ಪಿಸಲಾಗುವ ಜಾನುವಾರುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತದೆ. ಆದರೆ ಇಲ್ಲೂ ಜಾನುವಾರುಗಳಿಗೆ ಭದ್ರತೆ ಇಲ್ಲ.
ಈ ವರೆಗೆ ನಡೆದ ಗೋಕಳ್ಳತನ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಪೋಲೀಸ್ ತನಿಖೆ ನಡೆಸಲೇಬೇಕು. ಈ ಕೃತ್ಯದಲ್ಲಿ ಯಾರು ಭಾಗಿಗಳಾಗಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಪೋಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ಕೊಕ್ಕಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಸಂಚಾಲಕ ರವಿಪ್ರಸಾದ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.