ವಾಸ್ತವ

ಅಮಲು ದಾರಿಗಳಿಂದ ಹೆಜ್ಜೆ ಬದಲಿಸೋಣ

ಡಿಸೆಂಬರ್ 31 ಆದೊಡನೆ ಅಮಲು ಸೇವಿಸಿ ಕುಣಿದು ಕುಪ್ಪಳಿಸುವ ಮಂದಿಯೇ ಹೊಸ ವರ್ಷಕ್ಕೆ ಮಾದಕವ್ಯಸನಿಗಳಾಗೋದಿಲ್ಲ ಎಂಬ ಪ್ರತಿಜ್ಞೆ ಮಾಡುವಿರಾ?

ಜಾಹೀರಾತು

ಹರೀಶ ಮಾಂಬಾಡಿ

www.bantwalnews.com ಅಂಕಣವಾಸ್ತವ

ಜಾಹೀರಾತು

ಈ ಘಟನೆ ನಡೆದು ಸುಮಾರು 15 ವರ್ಷಗಳಾದವು.

ದೊಡ್ಡ ಪ್ರದೇಶ. ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳದ್ದೇ ಪಾರಮ್ಯ. ಕೆಲವೊಮ್ಮೆ ಹಸಿವಾದಾಗ ರಾತ್ರಿ ಊಟಕ್ಕೂ ತೊಂದರೆಯಾದ ಸಂದರ್ಭ ಗೂಡಂಗಡಿಯಲ್ಲಿ ಎರಡು ಬಾಳೆಹಣ್ಣು ಕೊಡಿ ಎಂದು ಕೇಳಿದರೆ ನಮಗೆ ಕೊಡದೆ, ವಿದೇಶೀಯರಿಗೋ, ಹಿಂದಿ ಮಾತಾಡುವವರಿಗೋ ಕೊಡುವ ಅಂಗಡಿಯವರು ಇದ್ದಂಥ ಸ್ಥಳ. ರಾತ್ರಿ 12 ಗಂಟೆ ವೇಳೆಗೆ ತೆರೆದಿರುವ ಏಕೈಕ ಆಮ್ಲೆಟ್ ಅಂಗಡಿಯ ಬಳಿ ಹೆಗಲಿಗೆ ಹೆಗಲು ಕೊಟ್ಟು, ಅಸ್ತವ್ಯಸ್ತ ಉಡುಗೆಯೊಂದಿಗೆ ಮೈಮರೆತು ಬರುವ ಹುಡುಗ, ಹುಡುಗಿಯರು. ಇಂಥ ಜಾಗದಲ್ಲಿ ಆ ಘಟನೆ ನಡೆದಿತ್ತು.

ಕಚೇರಿ ಕೆಲಸ ಮುಗಿಸಿ, ಪೇಪರ್ ಪ್ರಿಂಟ್ ನೋಡಿ, ತಪ್ಪು, ಸರಿ ಇದೆಯೋ ಎಂಬುದನ್ನೂ ಪರಾಮರ್ಶೆ ಮಾಡಿ, ನಾಳೆ ಏನು ಎಂಬ ಕುರಿತು ಹರಟೆ ಹೊಡೆದು ಕಚೇರಿಯ ಹೊರಗೆ ಬಂದು ಒಂದು ರೌಂಡ್ ವಾಕಿಂಗ್ ಹೋಗುತ್ತಾ, ನಾನಿದ್ದ ಕೊಠಡಿ ಕಡೆಗೆ ಹೋಗೋದು ನನ್ನ ಅಭ್ಯಾಸ. ಹಾಗೆ ನಡೆದುಕೊಂಡು ಹೋಗುವ ದಾರಿಯಲ್ಲಿ ಗೂಡಂಗಡಿಯಲ್ಲಿ ವಿಧವಿಧದ ತಿಂಡಿ, ತಿನಸುಗಳನ್ನು ಮಾರುವ ಅಂಗಡಿ ಇತ್ತು. ನಾನು ಅಲ್ಲಿ ಒಂದು ಪ್ಯಾಕೆಟ್ ಹಾಲು ತೆಗೆದುಕೊಳ್ಳೋದು ವಾಡಿಕೆ. ಹಾಗೆಯೇ ತೆಗೆದುಕೊಳ್ಳುವಾಗ ಪಕ್ಕದಲ್ಲಿದ್ದ ಯುವಕನೊಬ್ಬ ದಢಾರನೆ ಬಿದ್ದ.

ಜಾಹೀರಾತು

ಏನಾಯಿತು ಇವನಿಗೆ ಎಂಬ ಗಾಬರಿ ನನಗಾಯಿತು. ಆದರೆ ಈ ಗಾಬರಿ ನನಗಷ್ಟೇ ಆಗಿದ್ದು, ಉಳಿದವರಿಗೆ ಏನೂ ಆಗಿಲ್ಲ ಎಂಬುದರ ಅರಿವೂ ಸುತ್ತಮುತ್ತ ನೋಡಿದಾಗ ಭಾಸವಾಯಿತು. ಕಾರಣ ಇಷ್ಟೇ. ಅಲ್ಲೇ ಬೆಂಚಿನಲ್ಲಿ ಕುಳಿತು, ಸುಮ್ಮನೆ ಕುಳಿತಿದ್ದ ಕನ್ನಡಕಧಾರಿ ಹುಡುಗನೊಬ್ಬ (ಆತ ಉತ್ತರ ಭಾರತದವನಿರಬೇಕು) ಇದ್ದಕ್ಕಿದ್ದಂತೆ ನೆಲಕ್ಕುರುಳುವ ಸಂದರ್ಭ ಪಕ್ಕದಲ್ಲಿದ್ದ ಯಾರೂ ಎತ್ತಿಕೊಳ್ಳಲೂ ಹೋಗಲಿಲ್ಲ. ನಾನು ಅಂಗಡಿಯವನ ಬಳಿ ಕೇಳಿದೆ. ಏನು ಮಾರಾಯರೇ, ಹೀಗೆ ಬಿದ್ದಿದ್ದಾನಲ್ಲ, ಇವನನ್ನು ಆಸ್ಪತ್ರೆಗೆ ಸೇರಿಸೋದು ಬೇಡ್ವೇ.

ಆಗ ಅಂಗಡಿಯಾತ ಕೊಟ್ಟ ಉತ್ತರ ನನ್ನನ್ನು ಬೆಚ್ಚಿ ಬೀಳಿಸಿತು. (ಆ ಊರಿಗೆ ಆಗ ಹೊಸದಾಗಿ ಎಂಟ್ರಿ ಕೊಟ್ಟ ಕಾರಣವಷ್ಟೆ) ನೋಡಿ ಮಾರಾಯರೇ, ಇದು  ಕಾಮನ್. ಇವತ್ತು ಹೀಗಿರುತ್ತಾರೆ, ನಾಳೆ ಸರಿಯಾಗುತ್ತಾರೆ, ಯಾವ ಶಿಕ್ಷೆಯೂ ಇವರಿಗೆ ನಾಟುವುದಿಲ್ಲ. ಇದು ಅಮಲು ತೆಗೆದುಕೊಳ್ಳುವ ಸಂತಾನ ಮಾರಾಯ್ರೇ, ಸಮಾ ಅಮಲು ಪದಾರ್ಥ ತೆಗೆದುಕೊಂಡಿದ್ದಾನೆ ಪಾರ್ಟಿ. ಈಗ ಅಮಲು ಜಾಸ್ತಿಯಾಗಿದೆ. ಬಿದ್ದುಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಏಳುತ್ತಾನೆ, ಇಲ್ಲದಿದ್ದರೆ ಬೆಳಗ್ಗೆ ಏಳಿದರೂ ಎದ್ದ. ನನಗೆ ಇಂಥದ್ದೆಲ್ಲ ನೋಡಿ ಅಭ್ಯಾಸವಾಗಿದೆ ಎಂದ ಅಂಗಡಿಯಾತ.

ನಾನು ಕೇಳಿದೆ.

ಜಾಹೀರಾತು

ಅಲ್ಲ ಮಾರಾಯ್ರೇ, ಪೊಲೀಸಿನವರು ಇವರನ್ನು ನೋಡುದಿಲ್ವಾ, ಏನೂ ಮಾಡುದಿಲ್ವಾ

ಅದಕ್ಕೆ ಅಂಗಡಿಯಾತ ಕೊಟ್ಟ ಉತ್ತರ ಮತ್ತಷ್ಟು ಆಲೋಚನೆ ಮಾಡುವಂತೆ ಪ್ರೇರೇಪಿಸಿತು.

ಪೊಲೀಸಿನವರು ಈ ಹುಡುಗನನ್ನು ಹಿಡಿದು ಕರೆದುಕೊಂಡು ಹೋದರು ಎಂದು ಇಟ್ಟುಕೊಳ್ಳಿ, ಏನು ಮಾಡುತ್ತಾರೆ. ಸ್ವಲ್ಪ ಜೋರು ಮಾಡಿ ಬಿಡುತ್ತಾರೆ. ಹಾಕಿದರೆ ಸಣ್ಣಪುಟ್ಟ ಕೇಸ್ ಹಾಕಿಯಾರು. ಆದರೆ ಇದರ ಮೂಲ ಹುಡುಕಿಕೊಂಡು ಹೋಗಿದ್ದಾರಾ, ಹೋಗಲಿ, ಈ ಹುಡುಗ ಏಕೆ ಮಾದಕ ವಸ್ತು ತೆಗೆದುಕೊಳ್ಳುತ್ತಾನೆ ಎಂಬ ಯೋಚನೆ ಯಾರಾದರೂ ಮಾಡಿದ್ದಾರಾ, ಅವನಿಗೆ ಡ್ರಗ್ಸ್ ತೆಗೆದುಕೊಳ್ಳುವಂತೆ ಮನಸ್ಸಾದರೂ ಹೇಗೆ ಬಂತು ಎಂಬುದನ್ನು ಯೋಚಿಸಿದ್ದಾರಾ, ಇವತ್ತು ಡ್ರಗ್ಸ್ ತೆಗೆದುಕೊಳ್ಳುವವರನ್ನು ಪತ್ತೆ ಹಚ್ಚುವುದು ಸುಲಭ. ಆದರೆ ಡ್ರಗ್ಸ್ ತೆಗೆದುಕೊಳ್ಳಲು ಬೇಕಾದ ಕಾರಣ ಹುಡುಕಲು ತುಂಬಾ ಕಷ್ಟ. ನೀವೇ ನೋಡಿಯಂತೆ. ನನಗೆ ಇಂಥವರನ್ನು ನೋಡಿ ಸಾಕಾಗಿ ಹೋಗಿದೆ. ಮೊದಮೊದಲು ಹೇಳುತ್ತಿದ್ದೆ, ಈಗ ಬಿಟ್ಟುಬಿಟ್ಟಿದ್ದೇನೆ, ಹೇಳಲು ಹೋದರೆ ನಮ್ಮನ್ನೇ ಜೋರು ಮಾಡುತ್ತಾರೆ, ನಾವು ಎಲ್ಲಿಗೆ ಹೋಗೋದು?

ಜಾಹೀರಾತು

ಅಂಗಡಿಯಾತನ ಈ ಚಿಂತನೆ ನಿಜಕ್ಕೂ ಬೆಚ್ಚಿಬೀಳಿಸಿತು. ಇಂದು ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದಾಸರಾಗಿರುವುದು ಗೊತ್ತೇ ಇದೆ. ಇದು ಈಗಿಂದೀಗಿನ ವಿಷಯವಲ್ಲ, ಬ್ರೇಕಿಂಗ್ ನ್ಯೂಸ್ ಕೂಡ ಅಲ್ಲ, ಏಕೆಂದರೆ ದಶಕಗಳಿಂದ ಡ್ರಗ್ಸ್ ಹಾಗೂ ಕುಡಿತ , ಒಟ್ಟಾರೆಯಾಗಿ ಅಮಲು ಪದಾರ್ಥ ಸೇವನೆ ನಮ್ಮ ಯುವಜನರ ದಿಕ್ಕು ತಪ್ಪಿಸುತ್ತಿದೆ. ಇದೇ ಮುಂದೆ ಅವರು ಸಮಾಜದ ಯಾವ ವಿಚಾರಗಳಿಗೂ ಸರಿಯಾದ ಸ್ಪಂದನೆ ತೋರಿಸದೆ, ನಿಷ್ಕ್ರಿಯರಾಗಿ ಕುಳಿತುಕೊಳ್ಳಲು ಪ್ರೇರೇಪಣೆ ನೀಡುತ್ತದೆ.

ಡಿಸೆಂಬರ್ 31 ತಾರೀಕು ಎಂಬ ದಿನ ವಿಪರೀತ ಮಾದಕ ದ್ರವ್ಯ ಹಾಗೂ ಅಮಲು ಪದಾರ್ಥ, ಮದ್ಯ ಸೇವನೆಯ ದಿನ ಎಂಬುದು ಕಂಡುಬರುತ್ತೆ. ನೀವು ಕುಡಿಯುವುದಿಲ್ಲ, ಹಾಗಾಗಿ ಬೇರೆಯವರನ್ನು ಕುಡಿಯಲು ಬಿಡುವುದಿಲ್ವೋ ಎಂದು ಕೇಳುವವರೂ ಇರಬಹುದು. ಆದರೆ ಡಿಸೆಂಬರ್ 31ರಂದು ಮಧ್ಯರಾತ್ರಿ ದೊಡ್ಡ ದೊಡ್ಡ ಪಟಾಕಿ ಸಿಡಿಸಿ, ಹ್ಯಾಪ್ಪಿ ನ್ಯೂ ಇಯರ್ ಎಂದು ಕಿರಿಚುತ್ತಾ ಕುಣಿಯಬೇಡಿ ಎಂದು ಹೇಳಲು ನಾನು ಹೊರಟದ್ದು ಅಲ್ಲವೇ ಅಲ್ಲ, ಅದು ನಿಮ್ಮ ಸ್ವಾತಂತ್ರ್ಯ. ನಾನು ಇಲ್ಲಿ ಪ್ರಸ್ತಾಪಿಸಿದ್ದು, ವಿಪರೀತ ಮದ್ಯಪಾನ ಮಾಡಬೇಡಿ, ಅಮಲು ಪದಾರ್ಥ ಸೇವಿಸಬೇಡಿ, ಡ್ರಗ್ಸ್ ಗೆ ಶರಣಾಗಬೇಡಿ ಎಂದು.

ಅದೂ ನಮ್ಮ ಸ್ವಾತಂತ್ರ್ಯವಲ್ಲವೇ, ಕೇಳಲು ನೀವಾರು ಎಂದು ಏನಾದರೂ ನೀವು ಕೇಳಿದರೆ ಅದಕ್ಕೆ ನನ್ನ ಉತ್ತರ ಇಷ್ಟೇ.

ಜಾಹೀರಾತು

ನೀವು ಮನೆಯಲ್ಲಿ ಕುಡಿದು ವಾಂತಿ ಮಾಡಿ, ನನಗೇನೂ ತೊಂದರೆ ಇಲ್ಲ. ಆದರೆ ಸಾರ್ವಜನಿಕರು ನಡೆದಾಡುವ ಜಾಗದಲ್ಲಿ ಡ್ರಗ್ಸ್ ಸೇವಿಸಿ, ಮದ್ಯಪಾನ ಮಾಡಿ ವಾಹನ ಚಲಾಯಿಸಿದಿರಿ ಎಂದಿಟ್ಟಕೊಳ್ಳಿ. ತೊಂದರೆ ಯಾರಿಗೆ, ನನ್ನಂಥ ಸಾರ್ವಜನಿಕರಿಗೆ. ವೇಗವಾಗಿ ಬೈಕಿನಲ್ಲಿ ಹೋಗುವುದು, ವೀಲಿಂಗ್ ಮಾಡುವುದು, ಕರುಣೆಯೇ ಇಲ್ಲದಂತೆ ಸಿಗ್ನಲ್ ಉಲ್ಲಂಘಿಸಿ, ಫುಟ್ ಪಾತ್ ನಲ್ಲೂ ಗಾಡಿ ಚಲಾಯಿಸುವುದು, ಕುಡಿದು ತೂರಾಡುತ್ತಾ, ಬಸ್ ನಿಲ್ದಾಣಗಳಲ್ಲಿ ನಿಲ್ಲುವುದು, ಹೊಟ್ಟೆ ತೊಳಸುವಂಥ ವಾಸನೆ ಹೊತ್ತುಕೊಂಡು ಬಸ್ಸಿನಲ್ಲಿ ಪಕ್ಕ ಕೂರುವುದು ಇವೆಲ್ಲಾ ಇನ್ನೊಬ್ಬರಿಗೆ ತೊಂದರೆ ಮಾಡುವ ಕೃತ್ಯಗಳು. ಇವನ್ನು ಮಾಡಬೇಡಿ ಎಂಬುದನ್ನೇ ನಾನು ಹೇಳಲು ಹೊರಟಿರುವುದು.

ಆದರೆ ಈಗ ಕುಡಿಯುವುದು ಫ್ಯಾಶನ್ ಆಗಿ ಹೋಗಿದೆ. ಡ್ರಗ್ಸ್, ಗಾಂಜಾ ಸೇವನೆಯೂ ಫ್ಯಾಶನ್ ಆಗುವ ಹಂತದಲ್ಲಿದೆ. ಇದು ಅಪಾಯಕಾರಿ.

ಪ್ರತಿ ವರ್ಷ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಮಾಸಾಚರಣೆಗಳು ನಡೆಯುತ್ತವೆ. ಆದರೆ ಒಂದೆಡೆ ಡ್ರಗ್ಸ್ ದಂಧೆ ವ್ಯಾಪಕವಾಗುತ್ತಾ ಹೋಗುತ್ತದೆ.

ಜಾಹೀರಾತು

ತಂದೆ, ತಾಯಿ ತಮ್ಮ ಮಕ್ಕಳ ಕಡೆಗೆ ಗಮನ ಹರಿಸದೇ ಇರುವುದು ಒಂದು ಕಾರಣವಾದರೆ, ಕೆಲವೆಡೆ ತಂದೆ ತಾಯಿಯೇ ಅಮಲು ಸೇವನೆ ದಾಸರಾಗಿರುವುದು ಇನ್ನೊಂದು ಕಾರಣ. ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕಾದ ಬೋಧಕ ಸಮುದಾಯದವರೂ ಕೆಲವೊಮ್ಮೆ ಟೈಟ್ ಆಗುತ್ತಾರೆ ಎಂಬ ಮಾತು ಕೇಳಿಬರುವುದು ಆತಂಕಕಾರಿ. ಮನೆಯೆ ಬಾರ್ ಅಂಡ್ ರೆಸ್ಟೋರೆಂಟ್ ಆದಾಗ ಮಕ್ಕಳು ಚಟ ದಾಸರಾಗದೆ ಏನು ಮಾಡುತ್ತಾರೆ?

ಆದ್ದರಿಂದ ನಾವು ಈ ವರ್ಷ ಹೊಸ ಪ್ರತಿಜ್ಞೆ ಮಾಡೋಣ. ನಾವಂತೂ ಮಾದಕ ವ್ಯಸನಿಗಳಲ್ಲ. ಮಾದಕ ವ್ಯಸನಿಗಳನ್ನು ಕಂಡರೆ ಅವರ ಮನಪರಿವರ್ತನೆ ಮಾಡುವ ಸಂಸ್ಥೆಗಳಿಗೆ ಮಾಹಿತಿ ನೀಡೋಣ. ಬೇರೆ ಬೇರೆ ವಿಚಾರಗಳಿಗೆ ಹೋರಾಟ ಮಾಡುವ ಜಾತಿ, ಧಾರ್ಮಿಕ ಸಂಘಟನೆಗಳು, ಉತ್ಸವ ಸಮಿತಿಗಳು ಇಂಥದ್ದಕ್ಕೆ ವರ್ಷದ ಒಂದು ದಿನ ಮೀಸಲಿಟ್ಟರೆ ಭಾರತ ಬದಲಾದೀತು.

ಏನಂತೀರಿ?

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.