ಅನಿಕತೆ

ಅಂತರಂಗದೊಂದಿಗೆ ಬಹಿರಂಗ ಶುದ್ಧಿ

ಶುದ್ಧ ಮನಸ್ಸಿನೊಂದಿಗೆ ಪರಿಸರದ ಶುದ್ಧತೆಯನ್ನು ಕಾಪಾಡಲು ಬದ್ಧರಾಗಿರಿ. ಇದನ್ನು ದೇವರ ಸೇವೆ ಎಂದುಕೊಂಡೇ ಮಾಡಿ.

ಜಾಹೀರಾತು

ಅನಿತಾ ನರೇಶ್ ಮಂಚಿ

www.bantwalnews.com ಅಂಕಣ – ಅನಿಕತೆ

ರ್ರೀ

ಜಾಹೀರಾತು

ಕನಕಾಂಗಿ  ನಂಗೆ ಸ್ವಲ್ಪ ಹೆಲ್ಪ್ ಮಾಡೋದಕ್ಕೆ ಸಾಧ್ಯನಾ?

ಅಯ್ಯೋ ಹೇಳಿ ಸರೋಜಮ್ಮಾ. ಅದಕ್ಯಾಕೆ ಅಷ್ಟೊಂದು ಸಂಕೋಚ ಪಟ್ಕೋತೀರಾ?

ಏನು ಇಲ್ಲಾರೀ.. ನಮ್ಮವರು ಶಬರಿಮಲೆಗೆ ಹೋಗೋದಿಕ್ಕೆ ಮಾಲೆ ಹಾಕಿದ್ದಾರೆ ಅಂತ ಗೊತ್ತು ತಾನೇ ನಿಮ್ಗೆ. ಅದೂ ಅವ್ರು ತುಂಬಾ ವರ್ಷದಿಂದ ಹೋಗ್ತಾ ಇರೋದ್ರಿಂದ ಈ ಸಲ ಅವ್ರ ಫ್ರೆಂಡ್ಸ್ ಕೆಲವು ಜನ  ಜೊತೆಗೆ ಹೊರಡ್ತಾರಂತೆ. ಅವ್ರಿಗೆ ಇರುಮುಡಿ ಕಟ್ಟು ಕಟ್ಟೋದಕ್ಕೆ ಬೇಕಾದ ಸಾಮಗ್ರಿ ಕೂಡಾ ನಾವೇ ತಂದು ಇಟ್ಟಿದ್ದೀವಿ. ಆದ್ರೆ ಬಟ್ಟೆಯ ಬ್ಯಾಗ್ ಮೊನ್ನೆ ಸಿಗ್ಲಿಲ್ಲ.ಸ್ವಲ್ಪ ಮಾರ್ಕೆಟ್ ಕಡೆ ಹೋಗ್ಬೇಕಿತ್ತು. ನೀವೂ ಜೊತೆಗೆ ಬಂದಿದ್ರೆ ನಂಗೆ ಸ್ವಲ್ಪ ಕಂಪೆನಿ ಆಗ್ತಿತ್ತು ಅಂತ..

ಜಾಹೀರಾತು

ಇಷ್ಟೇನಾ.. ನಂಗೂ ಸ್ವಲ್ಪ ಮನೆ ಸಾಮಾನು ತರೋದಕ್ಕೆ ಹೇಗೋ ಹೋಗೋದಿತ್ತು. ಒಟ್ಗೇ ಹೋಗೋಣ ನಡೀರಿ. ಏನೆಲ್ಲಾ ಸಾಮಗ್ರಿ ಹಾಕ್ತಾರ್ರೀ ಇರುಮುಡಿ ಕಟ್ಟು ಕಟ್ಟೋದಕ್ಕೆ?

ಎಲ್ಲಾ ಮಾಮೂಲಿ,  ತೆಂಗಿನಕಾಯಿ, ತುಪ್ಪ, ಅಕ್ಕಿ, ಬೆಲ್ಲ, ವಿಭೂತಿ, ಜೇನು, ಅರಸಿನ, ಕುಂಕುಮ ಚಂದನ, ಕಾಳುಮೆಣಸು, ಒಣದ್ರಾಕ್ಷೆ, ಅರಳು, ಅವಲಕ್ಕಿ, ಪನ್ನೀರು, ಅಗರಬತ್ತಿ, ಕರ್ಪೂರ,ವೀಳ್ಯದೆಲೆ ಅಡಿಕೆ ಹೀಗೆ.. ಇದೆಲ್ಲವನ್ನು ಹಾಕಿ ಕಟ್ಟು ಕಟ್ಟೋದು

ಓಹ್..  ಎಷ್ಟೊಂದು ಸಾಮಗ್ರಿಗಳು ಬೇಕಲ್ವಾ.. ಅದನ್ನೆಲ್ಲಾ ಅಲ್ಲೇನು ಮಾಡ್ತಾರ್ರೀ..

ಜಾಹೀರಾತು

ಶಬರಿಮಲೆ ಅಂದ್ರೆ ಒಂದೇ ದೇವಾಲಯ ಅನ್ನೋದಕ್ಕಿಂತ ದೇವಾಲಯಗಳ ಸಮುಚ್ಚಯ ಅನ್ನೋದು ಸರಿಯೇನೋ.. ಹದಿನೆಂಟು ಮೆಟ್ಟಿಲಿನ ಆ ಕಡೆ ಈ ಕಡೆ ಕರ್ಪ ಸ್ವಾಮಿ ಮತ್ತು ಕರ್ಪಾಯಮ್ಮ. ಒಳಗಡೆ ಅಯ್ಯಪ್ಪನ ಗುಡಿಯ ಪಕ್ಕದಲ್ಲಿ ಕನ್ನಿಮೂಲ ಗಣಪತಿ ಭಗವಾನ್, ನಾಗ, ಮಾಳಿಗೆ ಪುರತ್ತಮ್ಮ,ಬಾಬರ್ ಸ್ವಾಮಿ… ತುಂಬಾ ಗುಡಿಗಳು. ಬಾಬರ್ ಸ್ವಾಮಿಗೆ ಒಳ್ಳೇಮೆಣಸು, ಮಾಳಿಗೆ ಪುರತ್ತಮ್ಮನಿಗೆ ಅರಸಿನ, ನಾಗನಿಗೆ ಅರಸಿನ, ವಿಭೂತಿ ಮಂಟಪದಲ್ಲಿ ವಿಭೂತಿ, ಹೀಗೆ ಒಂದೊಂದು ಕಡೆ ಒಂದೊಂದನ್ನು ಹಾಕೋದು. ಅಕ್ಕಿ ಬೆಲ್ಲ ತುಪ್ಪ ಅನ್ನದಾನಕ್ಕೋ, ಅರವಣ ಪಾಯಸಕ್ಕೋ ಬಳಕೆಯಾಗುತ್ತದೆ.

ಇದನ್ನೆಲ್ಲಾ ಯಾವುದರಲ್ಲಿ ಕಟ್ಟಿ ತೆಗೊಂಡು ಹೋಗ್ತಾರೆ ಸರೋಜಮ್ಮ

ಎಲ್ಲಾ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಯೇ ತೆಗೊಂಡು ಹೋಗೋದು. ಪನ್ನೀರು ಪ್ಲಾಸ್ಟಿಕ್ ಬಾಟಲಿಯಲ್ಲಿ .

ಜಾಹೀರಾತು

ಮತ್ತೆ ಆ ಪ್ಲಾಸ್ಟಿಕ್ಕುಗಳನ್ನು ಅಲ್ಲೇನು ಮಾಡ್ತಾರಂತೆ?

ಅಲ್ಲೇ ಎಸೀತಾರೆ. ನಿಜ ಹೇಳಿದ್ರೆ ಬೇಸರ ಆಗುತ್ತೆ. ನಮ್ಮ ಜನ ಶಬರಿಮಲೆಗೆ ಹೋಗುವಾಗ ತುಂಬಾ ನೇಮ ನಿಷ್ಟೆಯಿಂದ ಅಂತರಂಗ ಮತ್ತು ಬಾಹ್ಯ ಶುದ್ಧಿ ಎರಡಕ್ಕು ಮಹತ್ವ ಕೊಡ್ತಾರೆ. ನಲ್ವತ್ತೆಂಟು ದಿನಗಳ ವ್ರತವನ್ನು ಎಷ್ಟೇ ಕಷ್ಟ ಆದ್ರೂ ಮಾಡ್ತಾರೆ. ಡಿಸೆಂಬರಿನ ಚಳಿಯ ದಿನಗಳಲ್ಲೂ ಕತ್ತಲು ಹರಿಯುವ ಮೊದಲು ಎದ್ದು ಸ್ನಾನ ಮುಗಿಸಿ ಸ್ತ್ರೋತ್ರ ಪಠಿಸುತ್ತಾರೆ. ಊಟ ಉಡುಗೆಗಳಲ್ಲೂ ಶಿಸ್ತನ್ನು ಪಾಲಿಸುತ್ತಾರೆ. ಇಂತಹ ನಿಯಮಗಳನ್ನು ನಮ್ಮ ಪರಿಸರದೊಂದಿಗೆ ಪಾಲಿಸಲು ಮರೆತು ಬಿಡುತ್ತಾರೆ.  ಪ್ರತಿಯೊಂದನ್ನು ಪ್ಲಾಸ್ಟಿಕ್ಕಿನಲ್ಲಿ ಸುತ್ತಿ ತೆಗೆದುಕೊಂಡು ಹೋದವರು ಅದನ್ನು ಸಿಕ್ಕಿದಲ್ಲಿ ಎಸೆದು ಪರಿಸರ ಹಾಳು ಮಾಡ್ತಾರಂತೆ. ಇದೆಲ್ಲಾನಮ್ಮವರು ಕಣ್ಣಾರೆ ನೋಡಿದ್ದನ್ನು ಹೇಳಿದ್ದು. ಇಷ್ಟು ಸಾಲದು ಅಂತ ಪಂಪೆಯಲ್ಲಿ ಸ್ನಾನಕ್ಕೆ ಬಳಸುವ ಸ್ಯಾಂಪು, ಎಣ್ಣೆಎಲ್ಲವೂ ಪ್ಲಾಸ್ಟಿಕ್ ಸ್ಯಾಶೆಗಳೇ, ಶಬರಿಮಲೆಗೆ ಹೋಗುವ ಹಾದಿಯಲ್ಲಿ ಬಾಯಾರಿಕೆಗೆಂದು ತೆಗೆದುಕೊಳ್ಳುವ ನೀರಿನ ಬಾಟಲ್ಲುಗಳು ಹಣ್ಣಿನ ರಸಗಳ ಸ್ಯಾಶೆಗಳು ಎಲ್ಲವೂ ಪ್ಲಾಸ್ಟಿಕ್ ಮಯ. ಸಿಕ್ಕ ಸಿಕ್ಕಲ್ಲಿ ಅದನ್ನೆಸೆದು ನರಕ ಮಾಡುತ್ತಾರಂತೆ. ಅತ್ಯದ್ಭುತವಾದ ಕಾಡ ದಾರಿಯಲ್ಲಿ ಈಗ ತರಗೆಲೆಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ಈ ಪ್ಲಾಸ್ಟಿಕ್ಕಿನ ಕಸಗಳೇ ಅಂತೆ

ತಥ್.. ನಮ್ಮ ಜನ ಯಾವಾಗ ಬುದ್ಧಿ ಕಲೀತಾರೆ? ಶುದ್ಧಿ ಅಂದರೆ ನಮ್ಮ ಸುತ್ತಮುತ್ತಿನ ಪರಿಸರದ ನೈರ್ಮಲ್ಯವೂ, ಅದಕ್ಕೆ ನಾವು ಕೊಡುವ ಕೊಡುಗೆಗಳೂ ಸೇರಬೇಕು ಅಲ್ವಾ.. ಅದು ಬಿಟ್ಟು ಸುಂದರವಾದ ವನವನ್ನು ಹೊಲಸಿನ ರಾಶಿ ಮಾಡಿ ನಾವೇನನ್ನು ಕೊಡ್ತೀವಿ ನಮ್ಮ ಮುಂದಿನವ್ರಿಗೆ? ಪರಿಸರ ನಿರ್ಮಲವಾಗಿದ್ರೆ ಭಕ್ತಿ ತಾನಾಗೇ ಉಕ್ಕಿ ಬರುತ್ತೆ. ಅದು ಬಿಟ್ಟು ಕೊಳಚೆಯ ನಡುವೆ ನಾವು ಪೂಜಿಸುವ ದೇವರನ್ನು ಇಟ್ಟುಕೊಳ್ಟೀವಲ್ಲ ಏನೆನ್ನಬೇಕು ನಮ್ಮ ಬುದ್ಧಿಗೆ ?

ಜಾಹೀರಾತು

ಹೌದು ಕನಕಾಂಗಿ, ’ನೈಯಭಿಷೇಕಂ ಸ್ವಾಮಿಕ್ಕು’ ಅಂತ ದಿನಾ ಭಜನೆ ಮಾಡಿ ಅಲ್ಲಿ ಹೋಗಿ ಯಾಕೆ ಕಸ ಅಭಿಷೇಕ ಮಾಡೋದಲ್ವಾ.. ಅದೂ ಶಬರಿಮಲೆ ರಕ್ಶಿತಾರಣ್ಯ. ಅಲ್ಲಿನ ಪರಿಸರ ಕೂಡಾ ಅತಿ ಸೂಕ್ಷ್ಮ ತರದ್ದು. ಎಷ್ಟೊಂದು ಜೀವ ವೈವಿದ್ಯಗಳು ನಮ್ಮಿಂದಾಗಿ ನಾಶ ಆಗುತ್ತೋ ಏನೋ? ಅದಕ್ಕೆ ನಾನಂತು ಈ ಸಲ ಎಲ್ಲವನ್ನು ಪೇಪರಿನ ಪೊಟ್ಟಣದಲ್ಲಿ ಕಟ್ಟಿ ಕೊಡ್ತಾ ಇದ್ದೀನಿ. ಜೊತೆಗೆ ಅಲ್ಲಿಲ್ಲಿ ಎಸೆಯಬೇಡಿ ಎಂಬ ಎಚ್ಚರಿಕೆಯನ್ನೂ..

ನಮ್ಮೂರಿನಿಂದಲೂ ತುಂಬಾ ಜನ ಹೋಗ್ತೀರಲ್ಲ… ಶುದ್ಧ ಮನಸ್ಸಿನೊಂದಿಗೆ ಪರಿಸರದ ಶುದ್ಧತೆಯನ್ನು ಕಾಪಾಡಲು ಬದ್ಧರಾಗಿರಿ. ಇದನ್ನು ದೇವರ ಸೇವೆ ಎಂದುಕೊಂಡೇ ಮಾಡಿ. ಒಪ್ತೀರಲ್ವಾ ನನ್ನ ಮಾತನ್ನು..

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Anitha Naresh Manchi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Share
Published by
Anitha Naresh Manchi