ಬಂಟ್ವಾಳ

ಜನವರಿ ಬಳಿಕ ನೇತ್ರಾವತಿ ನೀರು ಕೃಷಿಗೆ ಬಳಸಿದರೆ ಕ್ರಿಮಿನಲ್ ಕೇಸ್

ಬಂಟ್ವಾಳ: ಜನವರಿ ಬಳಿಕ ನೇತ್ರಾವತಿ ತಟದಲ್ಲಿ ನದಿ ನೀರು ಬಳಸಿ ಕೃಷಿ ಮಾಡುವುದನ್ನು ನಿಷೇಧಿಸಿ ಶೀರ್ಘದಲ್ಲೇ ಆದೇಶ ಹೊರಡಿಸಲಾಗುವುದು. ಆದೇಶ ಮೀರಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗಲಿರುವ ಪ್ರದೇಶಗಳಿಗೆ ಹಾಗೂ ತುಂಬೆ ಡ್ಯಾಂಗೆ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ಉದ್ದೇಶದಿಂದ ಜನವರಿಯಿಂದ ಡ್ಯಾಂ ಮೇಲ್ಭಾಗದ ನದಿ ತಟದ ರೈತರು ನದಿ ನೀರನ್ನು ಬಳಿಸಿ ಕೃಷಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಸಲಾಗುವುದು ಎಂದರು.

5 ಮೀಟರ್ ನೀರು: ಕಳೆದ ಬೇಸಿಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರು ಶೇಖರಿಸಲಾಗುವುದು. ಈ ಹಂತದಲ್ಲಿ ಮುಳುಗಡೆಯಾಗಲಿರುವ ಪ್ರದೇಶಗಳ ಸರ್ವೇ ಕಾರ್ಯವು ಬಹುತೇಕ ಮುಕ್ತಾಯಗೊಂಡಿದೆ. ಸಂತ್ರಸ್ತರ ಪಟ್ಟಿ ಅಂತಿಮಗೊಳಿಸಿದ ಬಳಿಕ ಪರಿಹಾರ ನೀಡಲಾಗುವುದು ಎಂದರು.

ಪರಿಶೀಲನೆ: ಹೊಸ ಡ್ಯಾಂನಿಂದ ಮುಳುಗಡೆಯಾಗಲಿರುವ ಪಾಣೆಮಂಗಳೂರು, ಸಜೀಪ ಮುನ್ನೂರು, ನಂದಾವರ ಪ್ರದೇಶಗಳು ಹಾಗೂ ತುಂಬೆ ಹೊಸ ವೆಂಟೆಡ್ ಡ್ಯಾಂಗೆ ಭೇಟಿ ನೀಡಿದ ಬಳಿಕ ಮನಪಾ, ಬಂಟ್ವಾಳ ಕಂದಾಯ, ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಮುಂದಿನ ಬುಧವಾರದೊಳಗೆ 5 ಮೀಟರ್ ನೀರು ಶೇಖರಣೆಯಿಂದ ಮುಳುಗಡೆಯಾಗಲಿರುವ ಜಮೀನಿನ ವಿವರ ಹಾಗೂ ಸಂತ್ರಸ್ತರ ಪಟ್ಟಿಯನ್ನು ಅಂತಿಮಗೊಳಿಸಬೇಕು. ಶನಿವಾರದ ಒಳಗಾಗಿ ೮ ಮೀಟರ್ ಶೇಖರಣೆಯಿಂದ ಮುಳುಗಡೆಯಾಗುವ ಜಮೀನು ಹಾಗೂ ಸಂತ್ರಸ್ತರ ಸಂಪೂರ್ಣ ವಿವರ ಒದಗಿಸುವಂತೆ ಸರ್ವೇ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈಗಾಗಲೇ ಸರ್ವೇ ಕಾರ್ಯ ವಿಳಂಬವಾಗಿದ್ದು ಇನ್ನು ಯಾವುದೇ ಕಾರಣ ನೀಡದೆ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ಇತರ ತಾಲೂಕುಗಳ ಸರ್ವೇಯರ್‌ಗಳನ್ನು ಬಳಸಿಕೊಳ್ಳಿ ಎಂದ ಅವರು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಸೂಚನೆ ನೀಡಿದರು. ಸರ್ವೇ ಸಂದರ್ಭದಲ್ಲಿ ಮುಳುಗಡೆ ಪ್ರದೇಶವನ್ನು ಒಂದಷ್ಟು ಹೆಚ್ಚುವರಿಯಾಗಿ ಸರ್ವೇಯನ್ನು ನಡೆಸುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿ, ಮುಳುಗಡೆಗೆ ಜಮೀನಿಗೆ ಸಂಬಂಧಿಸಿ ರೈತರಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮನಪಾ  ಅಧಿಕಾರಿಗಳಾದ ಗೋಕುಲ್ ದಾಸ್ ನಾಯಕ್, ನರೇಶ್ ಶೆಣೈ, ಕೆಯುಡಬ್ಲ್ಯೂಎಸ್  ಕಾರ್ಯನಿರ್ವಾಹಕ ಇಂಜಿನಿಯರ್ ಮಹದೇವಯ್ಯ ಮೊದಲಾದವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts