ಪುತ್ತೂರಿನ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ.) ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ‘ನೃತ್ಯ ಧಾರಾ’ ವಿಂಶತಿ ಸಂಭ್ರಮ ಹಾಗೂ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನ ಕುಮಾರ್ ಅವರ ಸ್ಮರಣಾರ್ಥ ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಸಂಜೆ ದೀಪ ಪ್ರಜ್ವಲನದೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಲಾಪಗಳಿಗೆ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಲಾಕೇಂದ್ರವನ್ನು ನಡೆಸುವುದು ಸವಾಲಿನ ಕೆಲಸ. ನಯನ ಕುಮಾರ್ ಅವರ ಕನಸನ್ನು ಸಾಕಾರಗೊಳಿಸುವ ಕಾರ್ಯವನ್ನು ಅವರ ಪುತ್ರ ಮತ್ತು ಸೊಸೆ ಮಾಡುತ್ತಿದ್ದು, ಇಂತಹ ಪ್ರಯತ್ನಗಳು ಶ್ಲಾಘನೀಯ. ಭರತನಾಟ್ಯದ ಜ್ಞಾನ ಹೊಂದಿದವರಿಗೆ ಯಕ್ಷಗಾನ ಕ್ಷೇತ್ರದಲ್ಲಿಯೂ ಉತ್ತಮ ಭವಿಷ್ಯವಿದೆ,” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಎಂ. ಅರುಣಶ್ಯಾಮ್ ಮಾತನಾಡಿ, “ಕಲೆಗೆ ಜಾತಿ, ಧರ್ಮದ ಹಂಗಿಲ್ಲ. ಅದು ಮಾನಸಿಕ ಹಾಗೂ ದೈಹಿಕ ನೆಮ್ಮದಿಯನ್ನು ನೀಡುವ ಮೂಲಕ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ,” ಎಂದರು.
ಸಾಧಕರಿಗೆ ಗೌರವ ಸನ್ಮಾನ:
ಸಮಾರಂಭದಲ್ಲಿ ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನೃತ್ಯಗುರು, ‘ಕರ್ನಾಟಕ ಕಲಾಶ್ರೀ’ ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಪ್ರತಿಷ್ಠಿತ ‘ಕಲಾನಯನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ನಾವಡ ಅವರು, ತಮಗೆ ಬಾಲ್ಯದಲ್ಲಿ ಯಕ್ಷಗಾನದ ಮೂಲಕ ಕಲೆ ಸೆಳೆದ ವಿಚಾರವನ್ನು ಪ್ರಸ್ತಾಪಿಸಿದರು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಸ್ಥಾಪಕರು ಹಾಗೂ ನೃತ್ಯ ನಿರ್ದೇಶಕರಾದ ವಿದುಷಿ ರೋಹಿಣಿ ಉದಯ್ ಮತ್ತು ಸಂಚಾಲಕರಾದ ಉದಯ ವೆಂಕಟೇಶ್ ಭಟ್ ಕಾರ್ಯಕ್ರಮ ಸಂಘಟಿಸಿದ್ದರು. ಮಾನಸ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಶಿಷ್ಯೆಯರಿಂದ ರೋಹಿಣಿ ಉದಯ್ ಅವರಿಗೆ ಗೌರವಾರ್ಪಣೆ ನಡೆಯಿತು. ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಹಾಡುಗಾರಿಕೆಯಲ್ಲಿ ವಿನೀತ್ ಪೂರ್ವಾಂಕರ, ಶರತ್ ಮಂಗಳೂರು, ಡಾ. ಗಾನ ಪಿಲಿಂಜ, ಮೃದಂಗದಲ್ಲಿ ಗೀತೇಶ್ ಕಾಞಂಗಾಡ್, ಕೊಳಲಿನಲ್ಲಿ ಕೃಷ್ಣಗೋಪಾಲ ಆಚಾರ್ಯ ಪುಂಜಾಲಕಟ್ಟೆ, ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ಸಹಕರಿಸಿದರು,