1980ರಿಂದ 2000ರ ಅವಧಿಯಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವವರಿಗೆ ಬೆಳಗಿನ 7:30ರಿಂದ 9:00ರ ಅವಧಿಯಲ್ಲಿ ಕೇವಲ ಮೂರೇ ಎಕ್ಸ್‌ಪ್ರೆಸ್ ಬಸ್‌ಗಳಿದ್ದವು. ಬಸ್ ಬಂದರೆ ಪ್ರಯಾಣಿಕರು ಓಡಿಕೊಂಡು ಹೋಗಿ ಹತ್ತಬೇಕಿತ್ತು. ಚಾಲಕನ ಮೂಡ್ ನೋಡಿಕೊಂಡು ಬಸ್ ನಿಲ್ಲುತ್ತದೆಯೋ ಇಲ್ಲವೋ ಎಂದು ಗಮನಿಸಬೇಕಾದ ಸ್ಥಿತಿ ಇತ್ತು! ಕೆಲವು ಬಾರಿಯಂತೂ ಮಂಗಳೂರಿಗೆ ತೆರಳುವ ಟ್ಯಾಕ್ಸಿಗಳಲ್ಲಿ ಒತ್ತೊತ್ತಾಗಿ ಕುಳಿತು ಪ್ರಯಾಣಿಸಬೇಕಿತ್ತು.
“ನಮ್ಮ ಮಕ್ಕಳ ಕಾಲಕ್ಕಾದರೂ ಈ ಪರಿಸ್ಥಿತಿ ಬದಲಾಗಬಹುದು…” ಎಂದು ಅಂದು ದಿನವೂ ಪ್ರಯಾಣಿಸುತ್ತಿದ್ದವರು ಹಾರೈಸುತ್ತಿದ್ದರು.
ವರ್ಷಗಳು ಉರುಳಿದವು, ಬಸ್ ಸಂಖ್ಯೆಗಳೂ ಹೆಚ್ಚಿದವು. ಇಂದು ಬಿ.ಸಿ.ರೋಡ್‌ನಲ್ಲಿ ಬೆಳಗಿನ ವೇಳೆ ಬಸ್ ಹಿಡಿಯಲು ಹಿಂದಿನಂತೆ ಓಡಬೇಕಿಲ್ಲ ಎನ್ನುವುದೊಂದನ್ನು ಬಿಟ್ಟರೆ, ಪ್ರಯಾಣಿಕರಿಗೆ ನಿಲ್ಲಲು ಇನ್ನೂ ಬಯಲೇ ಗತಿ! ತುಂಬಿದ ಬಸ್ಸಿನೊಳಗೆ ನುಗ್ಗುವುದು ಇಂದಿಗೂ ದೊಡ್ಡ ಸವಾಲು
ಈ ಅವಧಿಯಲ್ಲಿ ಬಿ.ಸಿ.ರೋಡ್‌ನಲ್ಲಿ ಭವ್ಯ ಕಟ್ಟಡಗಳು ತಲೆಎತ್ತಿದವು. ತಳ ಅಂತಸ್ತು ಸೇರಿದಂತೆ ಎಲ್ಲೆಡೆ ಸಾಲು ಸಾಲು ಮಳಿಗೆಗಳು ಕಾರ್ಯಾಚರಿಸಲಾರಂಭಿಸಿದವು. ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚಿದವು, ಫ್ಲೈಓವರ್ ನಿರ್ಮಾಣವಾಯಿತು. ಸರ್ವೀಸ್ ರಸ್ತೆ ಆಯಿತು. ವಾಹನ ನಿಲುಗಡೆಗೆ (ಪಾರ್ಕಿಂಗ್) ಜಾಗವೇ ಇಲ್ಲದಂತಾಯಿತು. ಇದೇ ರೀತಿಯ ತೀವ್ರ ಸಮಸ್ಯೆಯನ್ನು ಇಂದಿಗೂ ಬಸ್ ಪ್ರಯಾಣಿಕರು ಎದುರಿಸುತ್ತಿದ್ದಾರೆ.
ಇಡೀ ಬಿ.ಸಿ.ರೋಡ್‌ನಲ್ಲಿ ಪ್ರಯಾಣಿಕರು ಬಸ್‌ಗಾಗಿ ನಿಲ್ಲುವ ಪ್ರಮುಖ ಜಾಗಗಳಿವು:
ಪ್ರಯಾಣಿಕರ ಬವಣೆ ನೋಡಲಾಗದೆ, ಬಿ.ಸಿ.ರೋಡ್‌ನಿಂದ ಪುತ್ತೂರಿಗೆ ತೆರಳುವ ಕಡೆಗೆ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ರೋಟರಿ ಕ್ಲಬ್ ಬಂಟ್ವಾಳ ಟೌನ್ ಘಟಕ ಸಣ್ಣ ಸೂರು ನಿರ್ಮಿಸಿಕೊಟ್ಟಿದ್ದನ್ನು ಹೊರತುಪಡಿಸಿದರೆ, ಆಡಳಿತದ್ದು ಶೂನ್ಯಕೊಡುಗೆ.
ಪ್ರಯಾಣಿಕರು ಏನಂತಾರೆ?
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಮುಂಭಾಗದ ಇಕ್ಕಟ್ಟಿನ ಜಾಗದಲ್ಲಿರುವ ಜಾಹೀರಾತು ಫಲಕವುಳ್ಳ ತಂಗುದಾಣವನ್ನು ಪ್ರಸ್ತುತ ಮಂಗಳೂರಿಗೆ ಬಸ್ ಕಾಯುವ ಜಾಗಕ್ಕೆ ಸ್ಥಳಾಂತರಿಸಿದರೆ ಆ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಜನರು ನಿಲ್ಲಲು ಸುರಕ್ಷಿತವಾದ ತಂಗುದಾಣವೊಂದು ನಿರ್ಮಾಣವಾಗಬೇಕು ಹಾಗೂ ಬಸ್ ಬೇ ರಚನೆಯಾಗಬೇಕು.