ಬಂಟ್ವಾಳ

ಗಮಕ ಭಾರತದ ಪ್ರಾಚೀನ ಕಲೆ : ಪ್ರೊ. ಮಧೂರು ಮೋಹನ ಕಲ್ಲೂರಾಯ

ತಲಪಾಡಿ: ಗಮಕವು ಪ್ರಾಚೀನ ಕಲಾಪ್ರಕಾರವಾಗಿದ್ದು, ವಾಲ್ಮೀಕಿ ರಾಮಾಯಣದ ಮೂಲಕ ಆರಂಭಗೊಂಡು ಲವಕುಶರಿಂದ ಮೊದಲ ಬಾರಿಗೆ ಪ್ರಸ್ತುತಗೊಂಡ ಕಲೆಯಾಗಿದೆ. ಪುರಾಣ ಮತ್ತು ಕಾವ್ಯಗಳನ್ನು ಹಾಡಿ, ಅವುಗಳ ಆಶಯಗಳನ್ನು ಜನರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಆನಂದ ಮತ್ತು ಸಂಸ್ಕಾರಗಳನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಗಮಕ ಕಲೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ, ಕರ್ನಾಟಕ ಕಲಾಶ್ರೀ ಪ್ರೊ. ಮಧೂರು ಮೋಹನ ಕಲ್ಲೂರಾಯ ಹೇಳಿದರು.

ತಲಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಕರ್ನಾಟಕ ಗಮಕ ಕಲಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಉಳ್ಳಾಲ ತಾಲೂಕು ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ, ಕಾವ್ಯ ಮತ್ತು ಗಮಕ ಒಂದಕ್ಕೊಂದು ಪೂರಕವಾಗಿವೆ. ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗಮಕ ಕಲೆ ಮಹತ್ವದ ಪಾತ್ರ ವಹಿಸಿದೆ. ಗಮಕ, ಹರಿಕಥೆ ಮತ್ತು ಯಕ್ಷಗಾನದಂತಹ ಕಲೆಗಳು ಪುರಾಣ ಹಾಗೂ ಕಾವ್ಯಗಳ ಸಾರವನ್ನು ವಿವಿಧ ನೆಲೆಗಳಲ್ಲಿ ಜನರಿಗೆ ಪರಿಚಯಿಸಿವೆ. ಈ ಕಲಾಪ್ರಕಾರಗಳ ಮಹತ್ವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕಾರ್ಯವನ್ನು ಗಮಕ ಕಲಾ ಪರಿಷತ್ತು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.

ಜಾಹೀರಾತು

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಟಿ. ಗಣೇಶ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ. ವಿಶ್ವನಾಥ ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.

ಉಳ್ಳಾಲ ತಾಲೂಕು ಘಟಕದ ಪದಗ್ರಹಣ

ಸಮಾರಂಭದಲ್ಲಿ ಗಮಕ ಕಲಾ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷರಾಗಿ ತೋನ್ಸೆ ಪುಷ್ಕಳ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪ್ರವೀಣ ಪದ್ಯಾಣ, ಉಪಾಧ್ಯಕ್ಷರಾಗಿ ರಾಮಚಂದ್ರ ಭಟ್ ಗುಣಾಜೆ ಮತ್ತು ಡಾ. ಅರುಣ್ ಉಳ್ಳಾಲ, ಖಜಾಂಚಿಯಾಗಿ ಲೋಕನಾಥ ರೈ, ಜಂಟಿ ಕಾರ್ಯದರ್ಶಿಗಳಾಗಿ ವಿಜಯಲಕ್ಷ್ಮಿ ಕಟೀಲು ಮತ್ತು ಮಂಜುಳಾ ರಾವ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಾರಾಮ್ ಹೊಳ್ಳ, ಸದಾಶಿವ ಆಳ್ವ, ಟಿ. ನಾರಾಯಣ ಕಜೆ, ದೀವಿತ್ ಕೆ.ಎಸ್., ಎಡ್ವರ್ಡ್ ಲೋಬೋ, ದೇವಿ ಪ್ರಸಾದ್ ಆಳ್ವ, ಯಶಸ್ ಭಟ್ ಮತ್ತು ವೇದಾವತಿ ಪ್ರಮಾಣವಚನ ಸ್ವೀಕರಿಸಿದರು.

ಡಾ. ಪ್ರವೀಣ ಪದ್ಯಾಣ ಸ್ವಾಗತಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಕಟೀಲು ವಂದಿಸಿದರು. ಸುಮನಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.

ಗಮಕ ವಾಚನ–ಪ್ರವಚನ

ಸಭಾ ಕಾರ್ಯಕ್ರಮದ ಬಳಿಕ ಮಂಜುಳಾ ರಾವ್ ಇರಾ ಮತ್ತು ವಿಜಯಲಕ್ಷ್ಮಿ ಕಟೀಲು ಅವರು ಶ್ರೀದೇವಿ ಭಾಗವತದ ‘ಮೇದಿನಿ ನಿರ್ಮಾಣ’ ಆಖ್ಯಾನವನ್ನು ಗಮಕ ವಾಚನ–ಪ್ರವಚನದ ಮೂಲಕ ಪ್ರಸ್ತುತಪಡಿಸಿದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.