ವಿದುಷಿ ವಿದ್ಯಾ ಮನೋಜ್ ಅವರ ನಿರ್ದೇಶನದ ಕಲಾಕೇತನ ಡ್ಯಾನ್ಸ್ ಫೌಂಡೇಶನ್ (ರಿ.), ಕಲ್ಲಡ್ಕ ಸಂಸ್ಥೆಯ 25 ವರ್ಷಗಳ ಕಲಾಸೇವೆಯ ರಜತ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ರಜತ ಕಲಾಯಾನ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅಕ್ಟೋಬರ್ 23 ಮತ್ತು 24ರಂದು ಬಿ.ಸಿ.ರೋಡ್ನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ವಿದ್ಯಾ ಮನೋಜ್ ತಿಳಿಸಿದರು.
ಸೋಮವಾರ ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಅಕ್ಟೋಬರ್ನಲ್ಲಿ ರಜತ ಕಲಾಯಾನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಎರಡು ದಿನಗಳ ನೃತ್ಯೋತ್ಸವದ ಮೂಲಕ ಸಂಸ್ಥೆಯ 25 ವರ್ಷಗಳ ಸಾರ್ಥಕ ಕಲಾಯಾನವನ್ನು ಸಂಭ್ರಮದಿಂದ ಸಮಾಪನಗೊಳಿಸಲಾಗುತ್ತಿದೆ ಎಂದರು.
ಅಕ್ಟೋಬರ್ 23ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ.) ಸಂಸ್ಥೆಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ ೫ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ಡಲಿದ್ದು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಗಣ್ಯರನ್ನು ಗೌರವಿಸಲಾಗುವುದು. ಬಳಿಕ ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 24ರಂದು ಸಂಜೆ 5.30ರಿಂದ ಕಾರ್ಯಕ್ರಮಗಳು ನಡೆಯಲಿದ್ದು, ಗೋವಾದ ಶಿರೋಡಾದ ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ನೀಲೇಶ್ ಪಿ. ಕೊರ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಮುಂಬೈನ ಭರತನಾಟ್ಯ ಕಲಾವಿದ ಹಾಗೂ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತ ಪವಿತ್ರಕೃಷ್ಣ ಭಟ್ ಅವರಿಂದ ನೃತ್ಯಾವಳಿ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ತದನಂತರ ಶಿಜಿತ್ ನಂಬಿಯಾರ್ ಅವರ ಪರಿಕಲ್ಪನೆ ಮತ್ತು ನೃತ್ಯಸಂಯೋಜನೆಯಲ್ಲಿ ಮೂಡಿಬಂದಿರುವ ಕಾವ್ಯಂ – ಅಂತರಾಳದ ಕವಿತೆ ಭರತನಾಟ್ಯ ಕಾರ್ಯಕ್ರಮವನ್ನು ಚೆನ್ನೈನ ಪಾರ್ವತಿ ಮೆನನ್ ಮತ್ತು ತಂಡ ಪ್ರಸ್ತುತಪಡಿಸಲಿದೆ.
ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಳೆದ 25 ವರ್ಷಗಳಿಂದ ಕಲ್ಲಡ್ಕ, ಬಿ.ಸಿ.ರೋಡ್ ಮತ್ತು ಬೆಳ್ತಂಗಡಿಗಳಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಾ ಬಂದಿದೆ. ದೇಶದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿರುವ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ದೂರದರ್ಶನದ ಶ್ರೇಣೀಕೃತ ಕಲಾವಿದರಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನವನ್ನೂ ಪಡೆದಿದ್ದಾರೆ. ಹಲವು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ವಿದ್ವತ್ ಪದವಿ ಗಳಿಸಿದ್ದು, ರಂಗಪ್ರವೇಶ ಕಾರ್ಯಕ್ರಮಗಳನ್ನೂ ಡಿದ್ದಾರೆ.
ರಜತ ಸಂಭ್ರಮದ ಅಂಗವಾಗಿ ಆಯೋಜಿಸಿರುವ ಈ ಎರಡು ದಿನಗಳ ನೃತ್ಯೋತ್ಸವದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಸಂಸ್ಥೆಯ ರ್ದೇಶಕಿ ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್ ವಿನಂತಿಸಿದರು.
ಈ ಸಂದರ್ಭ ಡಾ. ಮನೋಜ್, ಲಕ್ಷ್ಮಣ್ ಕುಲಾಲ್ ಅಗ್ರಬೈಲ್, ತಿರುಮಲೇಶ್ವರ ಭಟ್ ಮತ್ತು ಆಶಾ ಪಿ. ರೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.