ಹಿಂದು ಜಾಗರಣಾ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಜಿಲ್ಲೆಯ ಕಲ್ಲಡ್ಕ, ತಲಪಾಡಿ ದೇವಿಪುರ, ವಾಮದಪದವು, ಮೂಡುಬಿದಿರೆ ಹಾಗೂ ಬಿ.ಸಿ.ರೋಡ್ ಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಿಮಿತ್ತ ಜಾಥಾ ಹಾಗೂ ಸಭೆ ಆಯೋಜಿಸಲಾಗಿದೆ.
ಶನಿವಾರ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮಗಳಲ್ಲಿ ಪ್ರಮುಖ ನಾಯಕರು ಭಾಗವಹಿಸಿ ದಿಕ್ಸೂಚಿ ಮಾರ್ಗದರ್ಶನ ನೀಡುವರು.
ಆಗಸ್ಟ್ 9ರಂದು ವಿಟ್ಲ ತಾಲೂಕು ವ್ಯಾಪ್ತಿಯಲ್ಲಿ ಸಂಜೆ 3 ಗಂಟೆಗೆ ಮಾಣಿ ಜಂಕ್ಷನ್, ವೀರಕಂಬ ಗಣೇಶ ಮಂದಿರ ಹಾಗೂ ಪಾಣೆಮಂಗಳೂರು ಸತ್ಯದೇವತೆ ದೈವಸ್ಥಾನದಿಂದ ಏಕಕಾಲದಲ್ಲಿ ವಾಹನ ಜಾಥಾಗಳು ಆರಂಭವಾಗಲಿವೆ. ಮೂರು ಜಾಥಾಗಳು ಕಲ್ಲಡ್ಕಕ್ಕೆ ಆಗಮಿಸಲಿದ್ದು, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ಸಂಜೆ 3 ಗಂಟೆಗೆ ತಲಪಾಡಿ ಮಹಾದ್ವಾರದ ಬಳಿಯಿಂದ ವಾಹನ ಜಾಥಾ ಆರಂಭವಾಗಲಿದೆ. ಬಳಿಕ ತಲಪಾಡಿ ದೇವಿಪುರ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ 6.30ಕ್ಕೆ ವಾಮದಪದವಿನಲ್ಲಿ ಗಣೇಶ ಮಂದಿರದ ವಠಾರದಿಂದ ಪಂಜಿನ ಮೆರವಣಿಗೆ ನಡೆಯಲಿದ್ದು, ಪೇಟೆ ಸಂಚರಿಸಿ ಬಳಿಕ ಗಣೇಶ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಮೂಡುಬಿದಿರೆ ಸಾವಿರ ಕಂಬ ಬಸದಿ ಬಳಿಯಿಂದ ಪಂಜಿನ ಮೆರವಣಿಗೆ ಆರಂಭವಾಗಿ ಪೇಟೆಯ ಮೂಲಕ ಸಮಾಜ ಮಂದಿರಕ್ಕೆ ತೆರಳಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾರೋಪ ಕಾರ್ಯಕ್ರಮ ಆಗಸ್ಟ್ 14ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದ್ದು, ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಪಂಜಿನ ಮೆರವಣಿಗೆ ಆರಂಭಗೊಂಡು ಸ್ಪರ್ಶ ಕಲಾ ಮಂದಿರವರೆಗೆ ಸಾಗಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯ ಜಾಗರಣಾ ಜಿಲ್ಲಾ ಸಂಯೋಜಕ ರಾಜೇಶ್ ಬೊಳ್ಳುಕಲ್ಲು, ಜಿಲ್ಲಾ ಸಹ ಸಂಯೋಜಕ ಪುಷ್ಪರಾಜ ಕಮ್ಮಾಜೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅನೂಪ್ ಮಯ್ಯ, ಸಂತೋಷ ಕುರಿಯಾಳ ಹಾಗೂ ಪ್ರಶಾಂತ್ ಕೆಂಪುಗುಡ್ಡೆ ಉಪಸ್ಥಿತರಿದ್ದರು.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)