ಬಂಟ್ವಾಳ ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ, ಸರಕಾರಿ ಪದವಿ ಪೂರ್ವ ಕಾಲೇಜು, ಬಿ.ಮೂಡ ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ಜಾಗೃತಿ ಜಾಥಾ ಕಾರ್ಯಕ್ರಮ ಬುಧವಾರ ನಡೆಯಿತು.
ಜಾಥಾ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಆರಂಭಗೊಂಡು ತಾಲೂಕು ಪಂಚಾಯಿತಿ ಕಚೇರಿವರೆಗೆ ಸಂಚರಿಸಿ ಸಮಾಪನಗೊಂಡಿತು.
ತಾಲೂಕು ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಹಾಗೂ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಕಾಲೇಜು ಪ್ರಿನ್ಸಿಪಾಲ್ ಯೂಸುಫ್ ವಿಟ್ಲ, ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾನದ ಮಹತ್ವ ಸಾರುವ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಬಂಟ್ವಾಳ ತಾಪಂ ವ್ಯವಸ್ಥಾಪಕರಾದ ಪ್ರಕಾಶ್ ಪಿ., ತಾಲೂಕು ವಿಷಯ ನಿರ್ವಾಹಕರಾದ ಪ್ರಶಾಂತ್, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ತಾಪಂ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್ ಮಾತನಾಡಿ ಜಾಥಾದ ಉದ್ದೇಶಗಳನ್ನು ತಿಳಿಸಿದರು.
ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಕಾರ್ಯಕ್ರಮದಡಿ ಮತದಾರರ ಪಟ್ಟಿಯನ್ನು ನಿಖರ ಹಾಗೂ ನವೀಕೃತಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದರು. ಪರಿಷ್ಕರಣೆ ಸಂದರ್ಭದಲ್ಲಿ 18 ವರ್ಷ ಪೂರ್ಣಗೊಂಡ ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮರಣ ಹೊಂದಿದವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು, ಹೆಸರು, ವಿಳಾಸ, ವಯಸ್ಸು, ಲಿಂಗ ಮತ್ತು ಇತರೆ ವಿವರಗಳಲ್ಲಿನ ದೋಷಗಳನ್ನು ತಿದ್ದುಪಡಿ ಮಾಡುವುದು ಸೇರಿದಂತೆ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸಲಾಗುತ್ತಿದೆ. ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸುವುದರ ಜೊತೆಗೆ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಚುನಾವಣಾ ವ್ಯವಸ್ಥೆಗೆ ಬಲ ತುಂಬುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.