ಕವರ್ ಸ್ಟೋರಿ

ಹೆದ್ದಾರಿ ಕೆಲಸವಾಯಿತು, ಒಳರಸ್ತೆ ಹಾಗೆಯೇ ಉಳಿಯಿತು!!

ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆ ಅದ್ಭುತವಾಗಿ ಪ್ರಗತಿ ಕಂಡಿದ್ದರೆ, ಒಳರಸ್ತೆಗಳಲ್ಲಿ ಸಾಗುವವರ ಬವಣೆ ದೀಪದ ಕೆಳಗಿನ ಕತ್ತಲು ಎಂಬಂತಾಗಿದೆ.

ಹೊರಗೆ ಥಳಕು ರಸ್ತೆ ಎದ್ದು ಕಂಡರೆ, ಒಳಗಿನ ರಸ್ತೆಗಳ ಸಂಪರ್ಕವೇ ಕಡಿತವಾಗಿದೆ. ಇದಕ್ಕೆ ಉದಾಹರಣೆ ಮೆಲ್ಕಾರ್ ನಿಂದ ಕಲ್ಲಡ್ಕಕ್ಕೆ ಸಾಗುವ ಸಂದರ್ಭ ಕಂಡುಬರುವ ನರಹರಿನಗರ ಸಂಪರ್ಕ ರಸ್ತೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಹರಿನಗರ ಭಾಗದಲ್ಲಿ ಹೆದ್ದಾರಿ ಅಗಲ ಮಾಡುವ ಸಂದರ್ಭ, ಒಳರಸ್ತೆ ಸಂಪರ್ಕ ದುರಸ್ತಿ ಹಾಗೆಯೇ ಉಳಿದಿದೆ. ಕಳೆದ ಮೂರು ವರ್ಷಗಳಿಂದ ಈ ಭಾಗದ ಸಾರ್ವಜನಿಕರು ಸಂಚರಿಸಲು ತೊಂದರೆಪಡುತ್ತಿದ್ದರು. ಕೇವಲ ಮೂವತ್ತರಿಂದ ನಲವತ್ತು ಮೀಟರ್ ವರೆಗೆ ಕಾಂಕ್ರೀಟ್ ಮಾಡಿದರೆ ರಸ್ತೆ ದುರಸ್ತಿಯಾಗಿ ಸಂಚಾರ ಸುಗಮವಾಗಿ ಸಾಗುತ್ತದೆ.

ಜಾಹೀರಾತು

ಹೆದ್ದಾರಿ ಅಗಲಗೊಳಿಸುವ ವೇಳೆ ಸಂಪರ್ಕ ರಸ್ತೆ ಭಾಗವನ್ನೂ ತುಂಡರಿಸಲಾಗಿತ್ತು. ಅದಾದ ನಂತರ, ಹೆದ್ದಾರಿ ಕೆಲಸವಾಯಿತಾದರೂ, ಸಂಪರ್ಕ ರಸ್ತೆ ಹಾಗೆಯೇ ಬಿಡಲಾಯಿತು. ಈ ಕಾರಣದಿಂದ ಒಳರಸ್ತೆಯಿಂದ ಆಗಮಿಸುವ ಜನರು, ಹೆದ್ದಾರಿ ಸೇರುವ ಭಾಗದಲ್ಲಿ ಜಲ್ಲಿಕಲ್ಲು ರಸ್ತೆಯಲ್ಲಿ ಕಷ್ಟಪಟ್ಟು ಅಪಾಯಕಾರಿಯಾಗಿ ಹೆದ್ದಾರಿಗೆ ಬರುವ ಸನ್ನಿವೇಶ ಸೃಷ್ಟಿಯಾಯಿತು.

ಬಸ್ ಪ್ರಯಾಣಿಕರಿಗೂ ಸೂರಿಲ್ಲ!!

ಹೆದ್ದಾರಿ ಅಗಲಗೊಳ್ಳುವ ವೇಳೆ ನರಹರಿನಗರದಲ್ಲಿ ಬಸ್ ಪ್ರಯಾಣಿಕ ತಂಗುದಾಣ ಇತ್ತು. ಆದರೆ, ಹೆದ್ದಾರಿ ಕಾಮಗಾರಿ ವೇಳೆ ಅದನ್ನು ತೆಗೆಯಲಾಯಿತು. ಅದಿನ್ನೂ ಸ್ಥಾಪನೆ ಆಗಿಲ್ಲ. ಹೀಗಾಗಿ ಬಸ್ ನವರೂ ಇಲ್ಲಿ ಸ್ಟಾಪ್ ಕೊಡುತ್ತಿಲ್ಲ. ಬಸ್ಸುಗಳ ಹಳೇ ಸ್ಟಾಪುಗಳೆಲ್ಲವೂ ಹೆದ್ದಾರಿ ಅಗಲವಾಗುವ ವೇಳೆ ಮಾಯವಾಗಿದೆ.

50ರಷ್ಟು ಮನೆಗಳ ಸಂಪರ್ಕಕ್ಕೆ ಸಮಸ್ಯೆ:

ಗೋಳ್ತಮಜಲು ಗ್ರಾಮದ ನರಹರಿನಗರ ಕೋದಂಡರಾಮ ಮಂದಿರ ರಸ್ತೆಯಲ್ಲಿ ಸುಮಾರು 40ರಿಂದ 50ರಷ್ಟು ಮನೆಗಳು ಇವೆ. ನರಹರಿ ನಗರ ರಸ್ತೆಯಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ಈ ರಸ್ತೆಯನ್ನು ಅವಲಂಬಿಸಿವೆ. ಕೃಷ್ಣಕೋಡಿ ಹಾಗೂ ಬಿ.ಕೆ.ನಗರ ಎಂಬಲ್ಲಿನ ರಸ್ತೆಯಲ್ಲಿ ಸುಮಾರು 60ಕ್ಕೂ ಅಧಿಕ ಮನೆಗಳಿವೆ.

ಮನವಿ ಮಾಡಿದರೂ ಆಗಿಲ್ಲ:

ರಸ್ತೆಯನ್ನು ದುರಸ್ತಿ ಮಾಡಿ ಎಂದು ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಸ್ಥಳೀಯ ಪಂಚಾಯಿತಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಬಂದ್ ಆಗಿರುವ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಮಾಡುವಂತೆ ಹಾಗೂ ಕೆಡವಿ ಹಾಕಲಾದ ಬಸ್ ನಿಲ್ದಾಣವನ್ನು ಮರುಸ್ಥಾಪಿಸಿಕೊಡುವಂತೆ ಸದ್ಯ ಸ್ಥಳೀಯರು ಒತ್ತಾಯಿಸಿದ್ದಾರೆ.

VNR GOLD

ಶಾಲಾರಂಭಕ್ಕೆ ಕೆಲವೇ ದಿನಗಳು ಉಳಿದಿದ್ದು, ಇಲ್ಲಿ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಬಸ್ ನಿಲ್ದಾಣವನ್ನೂ ತೆಗೆದುಹಾಕಿದ ಕಾರಣ, ಬಸ್ಸುಗಳು ಇಲ್ಲಿ ನಿಲ್ಲುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಹೆದ್ದಾರಿ ಬದಿಯಲ್ಲಿ ನರಹರಿನಗರಕ್ಕೆ ತೆರಳುವ ಭಾಗದಲ್ಲಿ ಟ್ರಾನ್ಸ್ ಫಾರ್ಮರ್ ಒಂದು ಅಪಾಯಕರ ಸನ್ನಿವೇಶದಲ್ಲಿದ್ದು ಈ ಕುರಿತು ಸ್ಥಳೀಯರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಸೂಕ್ತ ಪರಿಹಾರ ದೊರಕುವ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ನರಹರಿನಗರ ಮೊದಲನೇ ಮತ್ತು ಎರಡನೇ ಅಡ್ಡರಸ್ತೆಗೆ ಸಂಬಂಧಿಸಿದಂತೆ ಹಲವಾರು ಮನೆಗಳಿದ್ದು, ರಸ್ತೆ ಅಗಲಗೊಳ್ಳುವ ಹೊತ್ತಿನಲ್ಲಿ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರೇ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಿದ್ದು ಬಿಟ್ಟರೆ, ಹೆದ್ದಾರಿ ಮಾಡುವವರು ಸಮರ್ಪಕವಾದ ವ್ಯವಸ್ಥೆ ಕಲ್ಪಿಸಿಲ್ಲ. ಮಳೆಗಾಲದಲ್ಲಂತೂ ಇದು ಕಷ್ಟಕರವಾಗಲಿದೆ ಎನ್ನುತ್ತಾರೆ ಸ್ಥಳೀಯರಾದ ಮೋಹನದಾಸ ಸಾಲ್ಯಾನ್.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.