| ಹೋರಾಟ ಸಮಿತಿ ಸಭೆಯಲ್ಲಿ ನಿರ್ಧಾರ | ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆ
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ ಸಭೆ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬಂಟ್ವಾಳದಲ್ಲಿ ನಡೆಯಿತು. ತಾಲೂಕಿನ ನಾನಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಭಾಗಿಗಳಾಗಿದ್ದರು.
ಸಂಚಾಲಕರಾದ ಬಿ ಶೇಖರ್ ಮತ್ತು ಮೋಹನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಹೋರಾಟದ ಉದ್ದೇಶಗಳನ್ನು ವಿವರಿಸಿದರು. ಟೋಲ್ ಗೇಟ್ ತೆರವಿಗಾಗಿ ಈ ಹಿಂದಿನ ಎರಡು ಹಂತಗಳಲ್ಲಿ ನಡೆದ ಕಾರ್ಯಕ್ರಮಗಳು ಬೀರಿರುವ ಪರಿಣಾಮಗಳನ್ನು ಸಭೆ ಚರ್ಚಿಸಿತು.
ಎಪ್ರಿಲ್ 28 ರಂದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ವರಗೆ ಜನಾಂದೋಲನ ನಡಿಗೆ ಮೆರವಣಿಗೆ ನಡೆಸುವುದು ಎಂದು ತೀರ್ಮಾನಿಸಲಾಯಿತು.
ಬಿ ರಮಾನಾಥ ರೈ ಹಾಗು ಟೋಲ್ ಗೇಟ್ ವಿರೋಧಿ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಜನಾಂದೋಲನ ಮೆರವಣಿಗೆಯ ರೂಪುರೇಷೆಗಳ ಕುರಿತು ಸಭೆಗೆ ವಿವರಿಸಿದರು. ಹಲವು ಪ್ರಮುಖರು ತಮ್ಮ ಸಲಹೆಗಳನ್ನು ನೀಡಿದರು.
ನಡಿಗೆಯ ವಿವರ: ಏಪ್ರಿಲ್ 28ರ ಸಂಜೆ ನಾಲ್ಕು ಗಂಟೆಗೆ ಜನಾಂದೋಲನ ನಡಿಗೆಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಚಾಲನೆ ನೀಡಲಾಗುತ್ತದೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಸಂಜೆ 5.30 ಕ್ಕೆ ಸಮಾರೋಪ ನಡೆಯುವುದು.ಇದಕ್ಕೂ ಪೂರ್ವಭಾವಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಿದ್ದತಾ ಸಭೆ ನಡೆಸುವುದು. ಬಂಟ್ವಾಳದ ಪ್ರಮುಖ ಪೇಟೆಗಳಲ್ಲಿ ಹೋರಾಟ ಸಮಿತಿ ವತಿಯಿಂದ ಜನರನ್ನು ನೇರವಾಗಿ ಸಂಪರ್ಕಿಸುವ ಮೂಲಕ ಪ್ರಚಾರ ನಡೆಸುವುದು. ತಾಲೂಕಿನ ಎಲ್ಲಾ ಜನಪರ ಸಂಘ ಸಂಸ್ಥೆಗಳು, ಸಾರಿಗೆ ಯೂನಿಯನ್ ಗಳು, ಸಾಮಾಜಿಕ ಸಂಘ ಸಂಸ್ಥೆಗಳ ಬೆಂಬಲ ಪಡೆಯುವುದು ಎಂದು ತೀರ್ಮಾನಿಸಲಾಯಿತು. ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.