ಪ್ರಸಿದ್ಧ ದೇವಿ ಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ಜಾತ್ರೆಯ ದಿನ ನಿಗದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ದೀರ್ಘಕಾಲಿನ ಒಂದು ತಿಂಗಳ ಕಾಲ ನಡೆಯುವ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜಾತ್ರೆ ಹಿನ್ನೆಲೆ ಶನಿವಾರ ರಾತ್ರಿ ಧ್ವಜಾರೋಹಣ ನಡೆದು, ಭಾನುವಾರ (ಮಾ.15) ಬೆಳಗ್ಗೆ ಕುದಿ ಕರೆಯುವ ಸಂಪ್ರದಾಯದ ಮೂಲಕ 29 ದಿನಗಳ ಜಾತ್ರೆಯನ್ನು ಘೋಷಿಸಲಾಯಿತು. ಜಾತ್ರೆಗೆ ಸಂಬಂಧಿಸಿದಂತೆ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಮತ್ತು ಅರಸು ದೈವಗಳ ಭಂಡಾರ ಆಗಮಿಸಿ ಜಾತ್ರೆ ನಿಗದಿಯಾದ ಬಳಿಕ ತೆರಳುವ ವಿಶಿಷ್ಟ ಸಂಪ್ರದಾಯವಿದೆ.
ದೋಣಿಯಲ್ಲಿ ಬರುವ ದೈವಗಳ ಭಂಡಾರ:
ಧ್ವಜಾರೋಹಣ ದಿನ ದೇವಸ್ಥಾನಕ್ಕೆ ತೀಯಾ ಸಮಾಜದವರಿಗೆ ಸೇರಿದ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರ ಆಗಮಿಸಿ, ಸಂಪ್ರದಾಯದಂತೆ ಸೋಮವಾರ ಮತ್ತೆ ನಂದ್ಯ ಕ್ಷೇತ್ರಕ್ಕೆ ತೆರಳಿತು.
ಭಂಡಾರವು ದೋಣಿ ಮೂಲಕ ಫಲ್ಗುಣಿ ನದಿಯನ್ನು ದಾಟಿ ಸಾಗುವ ದೃಶ್ಯ ವಿಶೇಷವಾಗಿದ್ದು ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಧ್ವಜಾರೋಹಣ ದಿನ ರಾತ್ರಿ ಸೂಟೆಯ ಬೆಳಕಿನಲ್ಲಿ (ದೊಂದಿ) ಶ್ರೀ ಭಗವತಿ ತೀಯಾ ಸಮಾಜ ಕೇಂದ್ರ ಸ್ಥಳವಾದ ಶ್ರೀ ನಂದ್ಯ ಕ್ಷೇತ್ರದಿಂದ ದೈವಗಳ ಭಂಡಾರ ಆಗಮಿಸುತ್ತದೆ. ನಂದ್ಯದಿಂದ ಬಂದ ಭದ್ರಕಾಳಿಯ ಬಿಂಬವನ್ನು ಧರಿಸಿದವರು ಜಾತ್ರೆಯ ದಿನಾಂಕವನ್ನು ಪ್ರಕಟಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ.
ಮುಂದೆ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಆರಾಢ ಕರೆದು, ಮರುದಿನ ತೀಯಾ ಸಮಾಜ ಬಾಂಧವರು ಭದ್ರಕಾಳಿಯನ್ನು ಆವಾಹಿಸಿಕೊಂಡವರನ್ನು ಸುಲಿಕ್ಕಿಪಡ್ಪು ಮಹಾಮ್ಮಾಯಿಕಟ್ಟೆಗೆ ಕರೆದುಕೊಂಡು ಅಲ್ಲಿ ಆರಾಢ ಕರೆಯಲಾಗುತ್ತದೆ. ಮತ್ತೆ ದೋಣಿಯ ಮೂಲಕ ಫಲ್ಗುಣಿ ನದಿಯನ್ನು ದಾಟಿ ನಂದ್ಯ ಕ್ಷೇತ್ರದಲ್ಲಿ ಆರಾಢ ಕರೆಯಲಾಯಿತು. ಬಳಿಕ ನಂದ್ಯದಲ್ಲಿ ಪರಿಚಾರಕರಿಗೆ ತಮ್ಮನ (ಗೌರವಾರ್ಪಣೆ) ಹಾಗೂ ಗೌರವಧನವನ್ನು ನೀಡುವ ಕಾರ್ಯ ನೆರವೇರಿತು.
ಜಾತ್ರೆ ಹೇಗೆ ನಿಗದಿಯಾಗುತ್ತದೆ:
ಪೊಳಲಿ ದೇವಸ್ಥಾನದ ಜಾತ್ರೆಯ ದಿನ ನಿಗದಿಗಾಗಿ ನಟ್ಟೋಜ ವಂಶದ ಮನೆತನದವರು, ಪುತ್ತಿಗೆಯ ಸೋಮನಾಥ ದೇವಸ್ಥಾನದ ಜೋಯಿಷರಲ್ಲಿಗೆ ತೆರಳಿ, ಅಲ್ಲಿ ದಿನ ನಿಗದಿ ಮಾಡಿ, ಪೊಳಲಿಗೆ ಆಗಮಿಸುವುದು ಸಂಪ್ರದಾಯ. ಧ್ವಜಾರೋಹಣದ ಮರುದಿನ ಕಂಚಿಲ್ (ಕಂಚು ಬೆಳಕು) ಸೇವೆ ನಡೆದ ಬಳಿಕ ಕುದಿ ಲೆಪ್ಪುನಿ (ಕುದಿ ಕರೆಯುವುದು) ಎಂಬ ಸಂಪ್ರದಾಯದ ಮೂಲಕ ತುಳುವಿನಲ್ಲಿ ಮೂರು ಬಾರಿ ಜೋರಾಗಿ ಜಾತ್ರೆಯ ವಿಶಿಷ್ಠ ಪ್ರಕ್ರಿಯೆಯಾದ ಧ್ವಜಾವರೋಹಣ ನಡೆಯುವ ಆರಡದ ದಿನವನ್ನು ಘೋಷಿಸಲಾಗುತ್ತದೆ. ಈ ಬಾರಿ 29 ಪೋಪಿನಾನಿ ಐತಾರ ದಿನತಾನಿ ಆರಡ (ಮಾರ್ಚ್ 15ರಿಂದ 29 ದಿನಕ್ಕೆ ಅಂದರೆ ಏಪ್ರಿಲ್ 12ರಂದು ಆರಡ) ಎಂದು ಜೋರಾಗಿ ಗಂಟೆ ಬಡಿಯುತ್ತಾ ಮೂರು ಬಾರಿ ಘೋಷಣೆ ಮಾಡಲಾಯಿತು. ಈ ವೇಳೆ ಸೇರಿದ್ದ ಸಾವಿರಾರು ಭಕ್ತರು ಜಾತ್ರೆಯ ದಿನವನ್ನು ಖಚಿತಪಡಿಸಿಕೊಂಡರು.
ಆರಡದ ಮುನ್ನಾದಿನ ಅಂದರೆ ಏ.11ರಂದು ಮಹಾರಥೋತ್ಸವ, ಅದರ ಹಿಂದಿನ 5 ದಿನಗಳ ಕಾಲ ಪುರಾಲ್ದ ಚೆಂಡ್ ಖ್ಯಾತಿಯ ಚೆಂಡು ಉತ್ಸವ ಏ.6ಕ್ಕೆ ಆರಂಭವಾಗುತ್ತದೆ. ಇದರ ಎಲ್ಲ ದಿನಗಳೂ ಆರಡದ ದಿನ ಮೂಲಕ ನಿರ್ಧಾರವಾಗುತ್ತದೆ.
ಮುಂದಿನ ಸುಮಾರು 22 ದಿನ ನಿತ್ಯಬಲಿ ನಡೆದು, ಐದು ದಿನ ಚೆಂಡಿನ ಉತ್ಸವ, ರಥೋತ್ಸವ ನಡೆಯುತ್ತದೆ. ಜಾತ್ರೆ ಆರಂಭಗೊಂಡ ಬಳಿಕ ಪ್ರತಿ ದಿನಕ್ಕೊಮ್ಮೆ ದಂಡಮಾಲೆ ಉತ್ಸವ ನಡೆಯುತ್ತದೆ.
ಜಾತ್ರೆ ವಿವರ ಹೀಗಿದೆ:
ಏ.6 ಕೊಡಿ ಚೆಂಡು, ಕುಮಾರ ರಥ. ಏ7: ಎರಡನೇ ಚೆಂಡು, ಹೂವಿನತೇರು, ಏ.8 ಮೂರನೇ ಚೆಂಡು, ಸೂರ್ಯಮಂಡಲ. ಏ.9: ನಾಲ್ಕನೇ ಚೆಂಡು, ಚಂದ್ರಮಂಡಲ, ಏ.10. ಕಡೇಚೆಂಡು, ಬೆಳ್ಳಿರಥ, ಆಳುಪಲ್ಲಕ್ಕಿ ರಥ. ಏ.11: ಮಹಾರಥೋತ್ಸವ. ಏ.12: ಆರಾಡ, ಅವಭೃತ ಸ್ನಾನ, ಉಳ್ಳಾಕುಲು, ಮೃಗಂತಾಯ ನೇಮ. ಏ.13ರಂದು ಪ್ರಧಾನ ದೈವ ಕೊಡಮಣಿತ್ತಾಯ ನೇಮ