ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀದೇವರ ಪ್ರತಿಷ್ಠಾ ಬ್ರಹ್ಮಕಲಶದ ಹದಿಮೂರನೇ ವರ್ಧಂತ್ಯುತ್ಸವ ಶುಕ್ರವಾರ ನೆರವೇರಿತು.
ಬೆಳಗ್ಗೆ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಬಳಿಕ ಶತರುದ್ರ ಜಪ, ನಾಗ, ರಕ್ತೇಶ್ವರಿ ಗುಳಿಗ ತಂಬಿಲ, ಸಾಮೂಹಿಕ ಕುಂಕುಮಾರ್ಚನೆ, ನವಕ ಕಲಶಾಭಿಷೇಕ, ಶತರುದ್ರ ಕಲಶಾಭಿಷೇಕ ನಡೆದ ಬಳಿಕ ಧಾರ್ಮಿಕ ಸಭೆ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಇಂದು ಭೂಮಿಯನ್ನು ಉಳಿಸುವ ಕಾರ್ಯವಾಗಬೇಕಾಗಿದ್ದು, ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ. ಭಗವಂತನನ್ನು ಮುಂದಿಟ್ಟುಕೊಂಡು ನಮ್ಮ ಕೆಲಸ ಕಾರ್ಯಗಳನ್ನು ನಡೆಸಬೇಕು, ನಮಗೆ ಭಗವಂತ ಗಾಳಿ, ನೀರು, ಆಹಾರ ಸಹಿತ ಎಲ್ಲವನ್ನೂ ಕೊಟ್ಟ ಮೇಲೆ ದೇವರನ್ನು ನಾವು ಮರೆಯಬಾರದು. ಫಲಾಪೇಕ್ಷೆ ಇಲ್ಲದ ಕರ್ಮವನ್ನು ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ. ಇಂದು ಮನುಷ್ಯನಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಪ್ಲಾಸ್ಟಿಕ್ ಸಹಿತ ಪ್ರಕೃತಿಗೆ ಮಾರಕವಾದದ್ದನ್ನು ನಾವು ತ್ಯಜಿಸಬೇಕು. ಈಗಾಗಲೇ ನಾವು ಅನ್ನ, ನೀರು ಮಾರಾಟ ಮಾಡುತ್ತಿದ್ದೇವೆ. ಇನ್ನು ಆಮ್ಲಜನಕವನ್ನೂ ಖರೀದಿ ಮಾಡುವ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಉಮಾಶಿವ ಕ್ಷೇತ್ರದಲ್ಲಿ ಪ್ರಕೃತಿ ಉಳಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಇಲ್ಲಿನ ಪುಷ್ಕರಿಣಿ ಜಲಸಂರಕ್ಷಣೆಗೆ ಉದಾಹರಣೆಯಾದರೆ, ಸಸ್ಯಸಂಪತ್ತು ಬೆಳೆಸುವುದು ಉತ್ತಮ ಕಾರ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಶಿವನ ಧ್ಯಾನದಿಂದ ಪ್ರತಿಯೊಂದು ಕೆಲಸವೂ ಈಡೇರುತ್ತದೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ದಿವ್ಯಾನುಗ್ರಹ, ಮಾರ್ಗದರ್ಶನದೊಂದಿಗೆ ಶ್ರೀ ಉಮಾಶಿವ ಕ್ಷೇತ್ರ ಇಂದು ವಿಸ್ತಾರವಾಗಿ ಬೆಳಗುತ್ತಿದ್ದು., ಕ್ಷೇತ್ರಕ್ಕೂ ಶ್ರೀಮಠಕ್ಕೂ ಇರುವ ನಂಟನ್ನು ವಿವರಿಸಿದರು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸರವು ರಮೇಶ್ ಭಟ್ ಶುಭ ಹಾರೈಸಿದರು.
ಇದೇ ಸಂದರ್ಭ ಸಮಾಜಸೇವಕ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಹಾಗೂ 68 ಬಾರಿ ರಕ್ತದಾನ ಮಾಡಿ ಮಾದರಿಯಾದ ಮನೋಹರ್ ಕುಲಾಲ್ ನೇರಂಬೋಳು ಅವರನ್ನು ಸನ್ಮಾನಿಸಲಾಯಿತು. ಹರೀಶ ಮಾಂಬಾಡಿ ಸನ್ಮಾನಿತರ ಪರಿಚಯ ಮಾಡಿದರು. ವೈಭವಿ ಮತ್ತು ವೈಷ್ಣವಿ ಇವರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಸೇವಾ ಸಮಿತಿ ಕಾರ್ಯದರ್ಶಿ ಪಿ.ಶ್ಯಾಮ ಭಟ್ ಅವರು ವರದಿ ವಾಚಿಸಿದರು. ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರ ಬೆಳೆದುಬಂದ ದಾರಿಯನ್ನು ವಿವರಿಸಿದರು. ಕೆ.ಟಿ.ಗಣೇಶ ಮಲಾರು ವಂದಿಸಿದರು. ಮುರಳೀಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಜೇನು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪಿ.ಎಸ್. ಮೋಹನ್, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಲ್ಲಡ್ಕ ಹವ್ಯಕ ವಲಯ ಅಧ್ಯಕ್ಷ ಎಂ.ರಮೇಶ ಭಟ್ಟ ಮಾವೆ, ಕೋಶಾಧಿಕಾರಿ ಎಸ್.ಎನ್. ಶ್ರೀಕಾಂತ, ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಕ್ಷೇತ್ರದ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸುಮಾ ರಮೇಶ್ ಪ್ರಾರ್ಥಿಸಿದರು