ಮಹಾತ್ಮಾ ಗಾಂಧೀಜಿ ಹೆಸರಲ್ಲಿರುವ ನರೇಗಾವನ್ನು ಬದಲಾಯಿಸಿ ಗಾಂಧೀಜಿಯವರ ಹೆಸರನ್ನು ಅಳಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಹೊರಟಿದೆ. ಯುಪಿಎ ಸರಕಾರ ಜಾರಿಗೆ ತಂದ ನರೇಗಾ ಯೋಜನೆಯಿಂದ ಗ್ರಾಮಾಭಿವೃದ್ಧಿಯಾಗಿದ್ದರೆ, ಇದರ ಹೆಸರು ಬದಲಾಯಿಸಿ ಮಾರ್ಪಾಡು ಮಾಡುವುದರಿಂದ ಬಡವರಿಗೆ ಅನ್ಯಾಯವಾಗುವುದಲ್ಲದೆ, ಅಭಿವೃದ್ಧಿ ಸ್ಥಗಿತಗೊಳ್ಳುತ್ತದೆ ಎಂಬ ಆತಂಕವನ್ನು ಮಾಜಿ ಸಚಿವ ಬಿ.ರಮಾನಾಥ ರೈ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ವತಿಯಿಂದ ನರೇಗಾ ಬಚಾವೋ ಸಂಗ್ರಾಮ ಹಿನ್ನೆಲೆ ಬುಧವಾರ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳದ ಮಣಿಹಳ್ಳದಿಂದ ಕೈಕಂಬದವರೆಗೆ ನಾಯಕರು, ಕಾರ್ಯಕರ್ತರ ಪಾದಯಾತ್ರೆ ನಡೆದು, ಬಳಿಕ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ನಡೆದ ಸಭೆಯಲ್ಲಿ ರಮಾನಾಥ ರೈ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಟಾನಕ್ಕೆ ಬಂದಾಗ ಜಗತ್ತಿನಲ್ಲೇ ಉತ್ತಮ ಯೋಜನೆ ಎಂದು ಪ್ರಶಂಸೆ ದೊರಕಿತು. ಅದಕ್ಕೆಗ್ರಾಮ ಸ್ವರಾಜ್ಯ ಬಯಸಿದ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧಿಯವರ ಹೆಸರು ಇಡಲಾಗಿತ್ತು. ಆದರೆ ಈಗ ಗಾಂಧಿ ಅವರ ಹೆಸರು ಅಳಿಸುವ ಕೆಲಸ ನಡೆಯುತ್ತಿದೆ. ಇದರ ಮಾರ್ಪಾಡುಗಳಿಂದ ಬಡವರಿಗೆ ಸಾಕಷ್ಟು ಅನ್ಯಾಯ ಆಗುತ್ತಿದೆ. ಶೇ. ೬೦ : ೪೦ ಅನುಪಾತ ಮಾಡಿದ್ದು ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈಗಾಗಲೇ ಕೇಂದ್ರ ಕಾಂಗ್ರೆಸ್ ಇರುವ ರಾಜ್ಯ ಸರಕಾರಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಯೋಜನೆ ಅನುಷ್ಠಾನವಾದರೆ, ರಾಜ್ಯದ ಶೇ.40 ಪಾಲು ನೀಡಲು ತೊಂದರೆ ಆಗುವುದು ಖಚಿತ. ಇದರಿಂದ ಯೋಜನೆ ಸಂಪೂರ್ಣ ಸ್ಥಗಿತವಾಗುವ ಭೀತಿ ಇದೆ. ಅಲ್ಲದೆ, ಇನ್ನು ಬದಲಾದ ಯೋಜನೆಯಂತೆ ಯಾವುದೇ ನಿರ್ಧಾರವನ್ನು ಪಂಚಾಯಿತಿ ತೀರ್ಮಾನ ಮಾಡಲೂ ಸಾಧ್ಯವಿಲ್ಲ. ಇದರಿಂದ ಪಂಚಾಯಿತಿ ಹಾಗೂ ರಾಜ್ಯ ಸರಕಾರದ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತಿದೆ. ಜಾಬ್ ಕಾರ್ಡ್ ಮಾಡಿ ಉದ್ಯೋಗ ಮಾಡುವವರಿಗೆ ಅನುದಾನ ಕೊರತೆಯಿಂದ ತೊಂದರೆ ಆಗುತ್ತದೆ. ಅಭಿವೃದ್ಧಿಗೆ ಕೊಡಲಿಯೇಟು ಬಿದ್ದಿದೆ ಎಂದರು.
ಕಾಂಗ್ರೆಸ್ ತಂದ ಕಾಯ್ದೆಗಳು ಜನರಿಗೆ ಉಪಯೋಗವಾಗಿದೆ. ಪ್ರತಿಯೊಂದು ಕಾರ್ಯಕ್ರಮವೂ ಬಡವರಿಗೆ ಅನ್ನ ಕೊಡುವ ಕಾರ್ಯಕ್ರಮಗಳಾಗಿದ್ದವು ಆದರೆ, ಬಿಜೆಪಿ ಸರಕಾರ ತಂದ ಕಾಯ್ದೆಗಳು ಜನರಿಗೆ ತೊಂದರೆ ಆಗಿದೆ ಎಂದ ರೈ, ಹೀಗಾಗಿ ಪಾದಯಾತ್ರೆ ಆಯೋಜಿಸಿದ್ದೇವೆ. ನೈಜ ಕಾಂಗ್ರೆಸಿಗರೆಲ್ಲರೂ ಇದರಲ್ಲಿ ಭಾಗವಹಿಸಿದ್ದಾರೆ, ಮಹಿಳಾ, ಯುವ ಕಾಂಗ್ರೆಸ್ ಸಹಿತ ಕಾಂಗ್ರೆಸ್ ಪಕ್ಷದ ಎಲ್ಲರೂ ಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿದ್ದಾರೆ ಎಂದರು.
ಈ ಸಂದರ್ಭ ಉಭಯ ಬ್ಲಾಕ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪಕ್ಷ ಪ್ರಮುಖರಾದ ಪದ್ಮಶೇಖರ ಜೈನ್, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬೇಬಿ ಕುಂದರ್, ಸಂಜೀವ ಪೂಜಾರಿ ಬಿರ್ವ, ಅಶ್ವನಿ ಕುಮಾರ್ ರೈ, ಪದ್ಮನಾಭ ರೈ, ಶಬೀರ್ ಸಿದ್ದಕಟ್ಟೆ, ಬಿ.ಎಂ. ಅಬ್ಬಾಸ್ ಆಲಿ, ಇಬ್ರಾಹಿಂ ನವಾಝ್ ಬಡಕಬೈಲ್, ಸುದರ್ಶನ ಜೈನ್, ಗಣೇಶ್ ಪೂಜಾರಿ, ಲವೀನಾ ಮೊರಾಸ್, ಮಮತಾ ಗಟ್ಟಿ, ಜಯಂತಿ ಪೂಜಾರಿ, ಜೋಸ್ಫಿನ್ ಡಿಸೋಜ, ಸುದೀಪ್ ಕುಮಾರ್ ಶೆಟ್ಟಿ, ಮಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಮಲ್ಲಿಕಾ ಶೆಟ್ಟಿ, ಸದಾಶಿವ ಬಂಗೇರ, ಸಿದ್ದೀಕ್ ಗುಡ್ಡೆಯಂಗಡಿ, ಲೋಲಾಕ್ಷ ಶೆಟ್ಟಿ, ಸಹಿತ ಮಹಿಳಾ, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ಹಲವು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
(more…)