ಬಂಟ್ವಾಳ: ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಗೀತವಾಹಿನಿ ಐದನೇ ವಾರ್ಷಿಕೋತ್ಸವ ನಡೆಯಿತು. “ಸಂಗೀತವಾಹಿನಿ ಯುವ ಸಾಧನಾ ಪ್ರಶಸ್ತಿ ೨೦೨೫” ಯನ್ನು ಆತ್ರೇಯೀ ಕೃಷ್ಣಾ, ಕಾರ್ಕಳ ಹಾಗೂ “ಸಂಗೀತವಾಹಿನಿ ಕಲಾ ಪೋಷಕ ಪ್ರಶಸ್ತಿ – ೨೦೨೫” ಯನ್ನು ಡಾ ಶ್ರೀಪ್ರಕಾಶ್ ಬಿ ಅವರಿಗೆ ನೀಡಿ ಗೌರವಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶುಭಾ ಅಡಿಗ, ಮಾನಸಿಕ ನೆಮ್ಮದಿ ಪಡೆಯಲು ಸಂಗೀತಾಭ್ಯಾಸ ಒಂದು ಉತ್ತಮ ಔಷಧವಾಗಿದ್ದು, ಕಲೆಯನ್ನು ಕಲಿತು ಪೋಷಿಸಿದಾಗಲಷ್ಟೇ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಹೇಳಿದರು. ಕಲೆಯನ್ನು ಕಲಿತು ಪೋಷಿಸಿದಾಗ ಮಾತ್ರ ಕಲೆಯು ಶಾಶ್ವತವಾಗಿ ಉಳಿಯಲು ಸಾಧ್ಯ.ಅದಕ್ಕಾಗಿ ಸತತ ಪರಿಶ್ರಮ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶುಭಾ ಶಿವಕುಮಾರ ಮಾತನಾಡಿ, ಸಂಗೀತದ ಬಗ್ಗೆ ಒಲವು ಇದ್ದಾಗಲೇ ಅದನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಗೋಪಾಲಕೃಷ್ಣ ಭಟ್ ದೈಗೋಳಿ, ಶಂಕರನಾರಾಯಣ ಭಟ್ ಅಸೈಗೋಳಿ ವೇದಿಕೆಯಲ್ಲಿದ್ದರು. ಇಡೀ ದಿನದ ಕಾರ್ಯಕ್ರಮವನ್ನು ಶಂಕರನಾರಾಯಣ ಭಟ್, ಅಸೈಗೋಳಿ ಉದ್ಘಾಟಿಸಿದರು. ಈ ಸಂದರ್ಭ ನಡೆದ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ತನ್ಮಯಿ ಉಪ್ಪಂಗಳ, ಪಿಟೀಲಿನಲ್ಲಿ ಧನಶ್ರೀ ಶಬರಾಯ ಮೃದಂಗದಲ್ಲಿ ಪವನ್ ಎಕ್ಕಡ್ಡ ಸಹಕರಿಸಿದರು. ಸಂಗೀತ ಗುರುಗಳಾದ ಡಾ.ಮಹೇಶ್ ಪದ್ಯಾಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಗೀತವಾಹಿನಿಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ರಮಾ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ದುರ್ಗಾಪ್ರಸಾದ್ ಹಾಗೂ ಇಡೀ ದಿನದ ಕಾರ್ಯಕ್ರಮದ ಸಮಾಪನದಲ್ಲಿ ಪ್ರವೀಣ್ ಪದ್ಯಾಣ ವಂದಿಸಿದರು. ಸುಮಂಗಲ ಮತ್ತು ಅದಿತಿ ಸಹಕರಿಸಿದರು. ಇಡೀ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಿತು.