?
ಜನಪ್ರತಿನಿಧಿಗಳ ಅಧಿಕಾರದ ಅವಧಿ ಯಾವಾಗ ಮುಗಿಯುತ್ತದೆ ಎಂಬುದು ಇನ್ನೂ ನಿರ್ಧರಿತವಾಗಿಲ್ಲ, ಅಧಿಕಾರಿಗಳೂ ಇಲ್ಲ.. ಇದು ಬಂಟ್ವಾಳ ಪುರಸಭೆಯ ಸದ್ಯದ ಸ್ಥಿತಿ.
ಆರೋಗ್ಯ ನಿರೀಕ್ಷಕ ಹುದ್ದೆಯಲ್ಲಿದ್ದವರು ಪದೋನ್ನತಿಗೊಂಡು ಬೇರೆಡೆ ವರ್ಗಾವಣೆ ಹೊಂದಿದ್ದರೆ, ಮುಖ್ಯಾಧಿಕಾರಿ ಇಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಪರಿಸರ ಇಂಜಿನಿಯರ್ ಸಹಿತ ಹಲವು ಹುದ್ದೆಗಳು ಖಾಲಿ ಇವೆ. ಮಾಡಲಿಕ್ಕೆ ಬೆಟ್ಟದಷ್ಟು ಕೆಲಸಗಳಿವೆ. ಆದರೆ ಯಾವುದೂ ಸಮರ್ಪಕವಾಗಿ ಕೈಗೂಡುತ್ತಿಲ್ಲ.
ಪಾಣೆಮಂಗಳೂರು, ಮೆಲ್ಕಾರ್, ಬಂಟ್ವಾಳ, ಬಿ.ಸಿ.ರೋಡ್, ಕೈಕಂಬ ಒಳಗೊಂಡಿರುವ ಬಿ.ಮೂಡ, ಬಿ.ಕಸ್ಬಾ ಮತ್ತು ಪಾಣೆಮಂಗಳೂರು ಗ್ರಾಮಗಳನ್ನು ಒಳಗೊಂಡ ಬಂಟ್ವಾಳ ಪುರಸಭೆಯ ವ್ಯಾಪ್ತಿಯ ಪರಿಸರ ಹಾಗೂ ಆರೋಗ್ಯ ನಿರ್ವಹಣೆ ದೊಡ್ಡ ಸವಾಲು. ಇಲ್ಲಿನ ತ್ಯಾಜ್ಯ ವಿಲೇವಾರಿಯಿಂದ ತೊಡಗಿ, ಶುಚಿತ್ವ ಕಾಪಾಡುವುದರವರೆಗೆ, ಆರೋಗ್ಯ ನಿರೀಕ್ಷಕರು ಹಾಗು ಪರಿಸರ ಎಂಜಿನಿಯರ್ ಗೆ ಜವಾಬ್ದಾರಿಗಳಿವೆ. ಇತಿಹಾಸದಲ್ಲಿ ಒಂದು ಬಾರಿ ಪರಿಸರ ಎಂಜಿನಿಯರ್ ಬಂದು ಕೆಲ ಕಾಲ ಕರ್ತವ್ಯ ಸಲ್ಲಿಸಿ ಹೋದದ್ದು ಹೊರತುಪಡಿಸಿದರೆ, ಪುರಸಭೆಯಲ್ಲಿ ಆರೋಗ್ಯ ನಿರೀಕ್ಷಕರೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಇದೀಗ ಆ ಹುದ್ದೆಯೂ ಖಾಲಿ.
BANTWAL TOWN MUNCIPALITY
ಜಿಲ್ಲೆಯಲ್ಲೇ ಆರೋಗ್ಯ ನಿರೀಕ್ಷಕರ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪೌರಾಡಳಿತ ವ್ಯವಸ್ಥೆಗಳಲ್ಲಿ ಆರೋಗ್ಯ ನಿರೀಕ್ಷಕರ ಕೊರತೆ ಕಾಡುತ್ತಿದೆ. ಉಳ್ಳಾಲ, ಸೋಮೇಶ್ವರ, ಮೂಡುಬಿದಿರೆ, ಪುತ್ತೂರು ಹೊರತುಪಡಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಾದ ಬಂಟ್ವಾಳ, ಸುಳ್ಯ, ಕಡಬ, ಮೂಲ್ಕಿ, ಬಜಪೆ, ಕಿನ್ನಿಗೋಳಿ, ಬೆಳ್ತಂಗಡಿ, ಕೋಟೆಕಾರ್ ಆರೋಗ್ಯ ನಿರೀಕ್ಷಕರ ಕಾಯಂ ಹುದ್ದೆ ಖಾಲಿ ಇದೆ.
ಕಾಯಂ ಹುದ್ದೆ ಭರ್ತಿಯೇ ಆಗಿಲ್ಲ:
ಹಾಗೆ ನೋಡಿದರೆ, ಪುರಸಭೆಯಲ್ಲಿ ಇಂಜಿನಿಯರ್ ಹುದ್ದೆ ಒಂದು ಖಾಲಿ ಇದೆ. ಅದಕ್ಕೆ ಯಾರೂ ಬಂದಿಲ್ಲ. ಮೆನೇಜರ್ ಹುದ್ದೆ ಭರ್ತಿಯಾಗಿಲ್ಲ. ಎಫ್.ಡಿ.ಸಿ. ಹುದ್ದೆಯೂ ಖಾಲಿ ಇದೆ. ಖಾಯಂ ಅಕೌಂಟೆಂಟ್ ಇಲ್ಲ. ಹೀಗೆ ಇಲ್ಲಗಳ ಸರಮಾಲೆಯೇ ಪುರಸಭೆಯಲ್ಲಿದೆ.
ಆಡಳಿತಾವಧಿ ಕೊನೆಗೊಳ್ಳುವುದು ನಿರ್ಧಾರವಾಗಿಲ್ಲ: ಆಡಳಿತಾವಧಿ ಕೊನೆಗೊಳ್ಳುವ ಕುರಿತು ಇನ್ನೂ ಅಧಿಕೃತ ಮಾಹಿತಿ ಬರಲಿಲ್ಲ. ಹೀಗಾಗಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿರುತ್ತದೆ. ಕೆಲವೇ ದಿನಗಳಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಅಂತ್ಯಗೊಳ್ಳಲಿದೆ ಎನ್ನಲಾಗುತ್ತಿದೆಯಾದರೂ ಇದುವರೆಗೂ ಅಧಿಕೃತ ಸೂಚನೆ ಯಾರಿಗೂ ಬಂದಿಲ್ಲ. ಪುರಸಭಾ ಮೀಟಿಂಗ್ ಗಳಲ್ಲಿ ವ್ಯವಸ್ಥೆಯ ಲೋಪದೋಷಗಳನ್ನು ಸದಸ್ಯರು ಗಮನಸೆಳೆಯುತ್ತಿದ್ದರು. ಸಾರ್ವಜನಿಕರು ಹಾಗೂ ಪುರಸಭೆಯ ಮಧ್ಯೆ ಸಂವಹನವಾಗಿದ್ದ ಜನಪ್ರತಿನಿಧಿಗಳು ಇಲ್ಲದೆ, ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಪುರಸಭೆಯ ಕಚೇರಿ ಬಾಗಿಲು ತಟ್ಟುವುದು ಪುರವಾಸಿಗಳಿಗೆ ಅನಿವಾರ್ಯವಾಗುವ ಸಾಧ್ಯತೆಯೂ ಇದೆ.
ಸವಾಲುಗಳೇನು?