ಬಂಟ್ವಾಳ

ಅಕ್ಟೋಬರ್ 12ರಂದು ಸಿದ್ಧಕಟ್ಟೆ ಕೊಡಂಗೆಯಲ್ಲಿ ರೋಟರಿ ಕಂಬಳ – 150ಕ್ಕೂ ಮಿಕ್ಕಿ ಸಬ್ ಜ್ಯೂನಿಯರ್ ಕೋಣಗಳು ಭಾಗವಹಿಸುವ ನಿರೀಕ್ಷೆ

ಜಾಹೀರಾತು

ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಿದ್ಧಕಟ್ಟೆ ಕೊಡಂಗೆ ಸಹಕಾರದೊಂದಿಗೆ ಎಲಿಯಾಸ್ ಸಾಂಕ್ಟಿಸ್ ಅವರ ಸಾರಥ್ಯದಲ್ಲಿ ಎರಡನೇ ವರ್ಷದ ರೋಟರಿ ಕಂಬಳ ಭಾನುವಾರ ಅಕ್ಟೋಬರ್ 12ರಂದು ಕೊಡಂಗೆ ಸಿದ್ದಕಟ್ಟೆಯಲ್ಲಿ ನಡೆಯಲಿದೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ರೋಟರಿ ಮೊಡಂಕಾಪು ಸ್ಥಾಪಕಾಧ್ಯಕ್ಷ ಎಲಿಯಾಸ್ ಸಾಂಕ್ಟಿಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಗ್ಗಹಿರಿಯ, ನೇಗಿಲು ಕಿರಿಯ ಮತ್ತು ನೇಗಿಲು ಸಬ್ ಜ್ಯೂನಿಯರ್ ಕೋಣಗಳ ಕಂಬಳ ನಡೆಯಲಿದ್ದು, ಇದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿದ್ದು, ರೈತಾಪಿ ಜನರಿಗೆ ಸಣ್ಣ ಕೋಣಗಳನ್ನು ಸಾಕಿ, ಸ್ಪರ್ಧೆಗೆ ಅವಕಾಶ ಕೊಟ್ಟಾಗ ರೈತರಿಗೆ ಲಾಭವಾಗುತ್ತದೆ ಎಂದರು. ಈಗಾಗಲೇ ರೋಟರಿ ಸಂಸ್ಥೆ ಸಾರ್ವಜನಿಕರಿಗೆ ಉಪಯೋಗವಾಗುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕಂಬಳ ಏರ್ಪಡಿಸುವ ಮೂಲಕ ಇನ್ನಷ್ಟು ಹತ್ತಿರವಾಗುತ್ತದೆ ಎಂದು ಹೇಳಿದ ಅವರು ವಿಶ್ವದ 220 ದೇಶಗಳಲ್ಲಿರುವ 35000ಕ್ಕಿಂತಲೂ ಅಧಿಕ ಕ್ಲಬ್ ಗಳ 12 ಲಕ್ಷಕ್ಕೂ ಸದಸ್ಯತನ ಹೊಂದಿರುವ ರೋಟರಿ ಕ್ಲಬ್ ಗಳಾದ್ಯಂತ ಕಂಬಳದ ಸೊಗಡನ್ನು ಪಸರಿಸುತ್ತೇವೆ ಎಂದರು. ಬೆಳಿಗ್ಗೆ ಗಂಟೆ ೮.೩೦ಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅಧ್ಯಕ್ಷತೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಕಂಬಳ ಕರೆ ಉದ್ಘಾಟಿಸುವರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಕಂಬಳ ಕೂಟಕ್ಕೆ ಚಾಲನೆ ನೀಡುವರು’ ಎಂದರು. ಇದೇ ವೇಳೆ ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಸಹಿತ ವಿವಿಧ ನಾಯಕರು ಭಾಗವಹಿಸಲಿದ್ದು, ಸಂಜೆ ೭ ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಬಹುಮಾನ ವಿತರಿಸುವರು. ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರ ಗಣ್ಯರು ಭಾಗವಹಿಸುವರು. ಈ ಕಂಬಳ ಕೂಟದಲ್ಲಿ ಸುಮಾರು ೧೫೦ಕ್ಕೂ ಮಿಕ್ಕಿ ಜೋಡಿ ಹಗ್ಗ ಕಿರಿಯ, ನೇಗಿಲು ಕಿರಿಯ ಮತ್ತು ಸಬ್ ಜ್ಯೂನಿಯರ್ ಕೋಣಗಳು ಭಾಗವಹಿಸಲಿದೆ ಎಂದು ಅವರು ತಿಳಿಸಿದರು.

ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಮಾತನಾಡಿ, ’ಪ್ರತೀ ವರ್ಷ ಎಲ್ಲಾ ರೋಟರಿ ಕ್ಲಬ್ ತಲಾ ರೂ ೨೦ ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗೆ ವಿನಿಯೋಗಿಸುತ್ತಿದೆ’ ಎಂದರು.

ಕ್ಲಬ್ಬಿನ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ’ಸಬ್ ಜ್ಯೂನಿಯರ್ ವಿಭಾಗದಲ್ಲಿ ’ರೋಟರಿ ಕಂಬಳ’ ಆಯೋಜನೆ ಬಳಿಕ ಸಾವಯವ ಕೃಷಿ ಮತ್ತು ಕೋಣಗಳನ್ನು ಸಾಕುವ ರೈತರ ಸಂಖ್ಯೆ ಹೆಚ್ಚಳಗೊಂಡಿದೆ’ ಎಂದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ನಾಯಕ ನಾರಾಯಣ ಹೆಗ್ಡೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆನಾಂಡಿಸ್, ಲೊರೆಟ್ಟೊ ಹಿಲ್ಸ್ ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಉಪಸ್ಥಿತರಿದ್ದರು. 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.