ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಹಾಗೂ ಹೋಮ್ ಮೇಡ್ ವೈನ್ ಶೇಖರಿಸಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಬಂಟ್ವಾಳ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ಅಬಕಾರಿ ವಲಯ ವ್ಯಾಪ್ತಿಯ ಮಂಚಿ ಗ್ರಾಮದ ನಿವಾಸಿ ಅರುಣ್ ನರೋನ್ಹ ಎಂಬವರ ಮನೆಯ ಮೇಲೆ ಉಪವಿಭಾಗ ಹಾಗೂ ವಲಯಗಳ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಜಂಟಿ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯ ಮನೆಯಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 750ಎಂಎಲ್ ನ 1 ಬಕಾರ್ಡಿ ಲೇಮನ್ ರಮ್ ಬಾಟಲ್,ಅಮೃತ್ ಅಮಲ್ಗಮ್ 750 ಎಂಎಲ್ ಅಳತೆಯ ಬಾಟಲಿಯಲ್ಲಿ ಸೈನಿಕರಿಗೆ ಮಾತ್ರ ನಮೂದಿಸಿರುವ 500 ಎಂಎಲ್ ವಿಸ್ಕಿ, ವೈಟ್ ಡಿಮಿಸಿಖ್ ಗ್ಯಾಕೋಬಾಜಿ ಎಂದು ನಮೂದಿಸಲಾದ 750ಎಂಎಲ್ ನ 1 ವಿದೇಶಿ ವೈನ್ ಬಾಟಲ್, ಖಾಲಿ ಎಂ ಸಿ ಮ್ಯಾಕ್ಡೊವೆಲ್ಸ್ ವಿಸ್ಕಿ ಬಾಟಲಿಗಳಲ್ಲಿ ತುಂಬಿಸಿದ ವಿವಿಧ ಹೋಮ್ ಮೇಡ್ ವೈನ್ ಒಟ್ಟು 13 ಬಾಟಲಿಗಳಲ್ಲಿ 4.250 ಲೀಟರ್ ನಷ್ಟು ಹಾಗೂ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ವಿವಿಧ ಬ್ರಾಂಡ್ ನ 8 ಖಾಲಿ ಬಾಟಲಿಗಳು ಪತ್ತೆಯಾಗಿದ್ದು, ಒಟ್ಟು 6.25 ಲೀಟರ್ ನಷ್ಟು ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಪ್ರಕರಣದ ಆರೋಪಿ ತಲೆಮೆರೆಸಿಕೊಂಡಿದ್ದಾನೆ. ಆರೋಪಿ ಹಾಗೂ ಮನೆ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.