ಮಳೆ ಬಂದ ಮೇಲೆ ಕಾರ್ಯಪ್ರವೃತ್ತರಾಗುವ ಬದಲು ಸಮಸ್ಯೆಗಳೇ ಬಾರದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ಎಚ್ಚರಿಕೆ ನೀಡಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮುಂಗಾರು ಮುನ್ನೆಚ್ಚರಿಕೆ ಕುರಿತು ಪಿಡಿಓಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಅಧಿಕಾರಿಗಳು ಮಳೆಗಾಲ ಎದುರಿಸಲು ಸನ್ನದ್ಧರಾಗಬೇಕು, ಮೇ.2ರೊಳಗೆ ಅಪಾಯಕಾರಿ ಜಾಗ ಗುರುತಿಸಿ ವರದಿ ನೀಡಬೇಕು, ಅನಾಹುತಗಳು ಆಗದೇ ಇರುವಂತೆ ಮುಂಜಾಗರೂಕತೆ ವಹಿಸಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ ಸೂಚನೆನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಪಾಲಿಸಬೇಕು ಮಳೆಗಾಲದ ಸಂದರ್ಭ ಸಮಸ್ಯೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನದಿ ತೀರದಲ್ಲಿ ಕಟ್ಟುನಿಟ್ಟು, ಪ್ರವಾಹ ಬಂದಾಗ ಎಚ್ಚರ:
ನೇತ್ರಾವತಿ ನದಿ ಸಹಿತ ತಾಲೂಕಿನ ನದಿ, ಹಳ್ಳಗಳ ಸಮೀಪ ಸಾರ್ವಜನಿಕರು ಅಪಾಯಕಾರಿ ಜಾಗಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯಾಡಳಿತಗಳು ಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಓಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ವಿಶೇಷವಾಗಿ ಪುರಸಭೆಯ ಜಾಗಗಳು, ಗ್ರಾಮಗಳಾದ ನಾವೂರು, ಅಜಿಲಮೊಗರವೇ ಮೊದಲಾದ ಜಾಗಗಳಲ್ಲಿ ಎಚ್ಚರಿಕೆ ವಹಿಸಬೇಕು, ಸೂಚನಾ ಫಲಕಗಳನ್ನು ಹಾಕಬೇಕು ಎಂದರು.
ಕಳೆದ ಮಳೆಗಾಲದ ಸಂದರ್ಭ, ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳಲ್ಲಿ ನಿರ್ಮಾಣ ಕಾರ್ಯದ ಅವ್ಯವಸ್ಥೆಗಳಿಂದ ತೊಂದರೆಗಳು ಉಂಟಾಗಿತ್ತು. ಈ ಬಾರಿ ಅದು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಹೈವೇ ಕಾಮಗಾರಿ ಸಂಬಂಧಿಸಿದ ಗುತ್ತಿಗೆದಾರರ ಪ್ರತಿನಿಧಿಯನ್ನು ಸ್ಥಳಕ್ಕೆ ಕರೆಸಿ ಸೂಚನೆಗಳನ್ನು ನೀಡಲಾಯಿತು. ಈ ವೇಳೆ ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ತಮ್ಮ ಭಾಗದ ಸಮಸ್ಯೆಗಳನ್ನು ವಿವರಿಸಿದರು. ಗೋಳ್ತಮಜಲು ಗ್ರಾಪಂ ಕಟ್ಟಡವಿರುವ ಭಾಗ ಕುಸಿತದ ಸ್ಥಿತಿಯಲ್ಲಿದ್ದು, ಅದಕ್ಕೆ ತಡೆಗೋಡೆಯನ್ನು ಹೈವೇ ಕಂಪನಿ ನಿರ್ಮಿಸಿಕೊಡಬೇಕು ಎಂದು ಪಿಡಿಓ ವಿಜಯಶಂಕರ ಆಳ್ವ ಹೇಳಿದರು. ಫ್ಲೈಓವರ್ ನಲ್ಲಿ ನೀರು ಹೊರಚೆಲ್ಲದಂತೆ ಗಮನಹರಿಸಬೇಕು. ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲದ ಮಾಡಬೇಕು ಎಂದು ತಹಸೀಲ್ದಾರ್ ಸೂಚಿಸಿದರು. ಆರು ತಿಂಗಳೊಳಗೆ ಹೆದ್ದಾರಿ ಕೆಲಸಗಳು ಮುಗಿಯುತ್ತದೆ, ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ಸಂಚಾರಕ್ಕೆ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಣ ಕಂಪನಿ ಪ್ರತಿನಿಧಿ ಸಭೆಗೆ ತಿಳಿಸಿದರು. ಹೆದ್ದಾರಿ ಕಾಮಗಾರಿ ನಡೆಯುವ ಪೆರಾಜೆಯಲ್ಲಿ ಈಗಾಗಲೇ ಕಂಪೆನಿ ಚರಂಡಿಗಳನ್ನು ನಿರ್ಮಿಸಿದೆಯಾದರೂ ಅದರಲ್ಲಿನ ಹೂಳು ತುಂಬಿ, ಮಳೆಗಾಲದ ಆರಂಭದ ದಿನಗಳಲ್ಲಿ ನೀರು ಹರಿಯಲು ಸಾಧ್ಯಾಗದೆ ಹೆದ್ದಾರಿಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡುದರಿಂದ ಹೂಳೆತ್ತುವಂತೆ ಅವರು ತಿಳಿಸಿದರು.
ಮಳೆ, ಗಾಳಿ ಸಂದರ್ಭ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿ ಬದಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗುವಂಥ ಸನ್ನಿವೇಶದಲ್ಲಿ ಇರುವುದು ಗಮನಕ್ಕೆ ಬಂದಿದ್ದು, ಡಿಸಿ ಈಗಾಗಲೇ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇವುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಹೆದ್ದಾರಿ ಬದಿಯ ಪಂಚಾಯತ್ ಪಿಡಿಒಗಳು ಹಾಗು ಪುರಸಭಾಧಿಕಾರಿಗಳಿಗೆ ಸೂಚಿಸಿದರು.
ಬ್ರಿಟಿಷ್ ಸರ್ಕಾರದ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆಗಾಗಿ ಪುರಸಭೆಯ ಇಂಜಿನಿಯರ್ ಗೆ ಸೂಚಿಸಲಾಗಿತ್ತು. ಇನ್ನೂ ವರದಿ ನೀಡಿಲ್ಲವೇಕೆ, ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಸಸ್ಪೆಂಡ್ ಮಾಡಿ ಎಂದು ಮುಖ್ಯಾಧಿಕಾರಿ ನಝೀರ್ ಅವರ ಬಳಿ ತಹಸೀಲ್ದಾರ್ ಸೂಚಿಸಿದರು. ತಾಲೂಕಿನ ಹಲವೆಡೆ ತೆರೆದ ಕ್ವಾರಿಗಳು ಹಾಗೂ ಕಾಮಗಾರಿ ನಿಲ್ಲಿಸಿದ ಕ್ವಾರಿಗಳು ಅಪಾಯದ ಸ್ಥಿತಿಯಲ್ಲಿದ್ದರೆ, ಅವುಗಳನ್ನು ಗುರುತಿಸಿ, ಗುಂಡಿ ಮುಚ್ಚಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ತಹಸೀಲ್ದಾರ್ ನೀಡಿದ್ದಾರೆ.