ಬಂಟ್ವಾಳ

ಅಡ್ಡೂರು ಸೇತುವೆ ರಿಪೇರಿ ಕಾಮಗಾರಿಗೆ ಚಾಲನೆ: ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಪೊಳಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಮಗಾರಿ ಆರಂಭ

ಬೆಂಗಳೂರಲ್ಲಿ ನಡೆದಿದ್ದ ಸಭೆ

ಪೊಳಲಿ ಸಮೀಪದ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದುರಸ್ಥಿಗೆ ಈಗಾಗಲೇ ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇಂದು ದುರಸ್ತಿ ಕಾಮಗಾರಿಗೆ ಚಾಲನೆ ದೊರೆತಿದೆ.

ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಾಗೂ ಗುತ್ತಿಗೆ ವಹಿಸಿಕೊಂಡ ಮೊಗರೊಡಿ ಕನ್ಸರ್ಟ್ ಕ್ಸನ್ ಮಾಲಕ ಸುಧಾಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಪೊಳಲಿ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಮೊದಲು ದುರಸ್ತಿ ಕಾರ್ಯವನ್ನು ಮುಗಿಸಿ ಭಕ್ತರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಗುತ್ತಿಗೆ ದಾರರಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು.

ಸೇತುವೆಯ ದುರಸ್ತಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವುದರಿಂದ ಕೆಲವೊಂದು ನಿಯಮಗಳನ್ನು ಅನುಸರಿಸಿಯೇ ಕಾಮಗಾರಿ ಮಾಡಬೇಕಾಗುತ್ತದೆ. ಕಾಮಗಾರಿಯ ವೇಳೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು,ಆದಷ್ಟು ಬೇಗ ದುರಸ್ತಿ ಕಾರ್ಯವನ್ನು ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮಾತಿನಂತೆ ಕಾಮಗಾರಿ ಆರಂಭ

ಪೊಳಲಿ ಅಡ್ಡೂರು ಸೇತುವೆ ದುರಸ್ತಿ ಕಾರ್ಯಕ್ಕಾಗಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದರು ಈವರೆಗೆ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ  ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಸಮಿತಿ ಸಭೆಯಲ್ಲಿ ತಿಳಿಸಿದ ಶಾಸಕ ರಾಜೇಶ್‌ ನಾಯ್ಕ್ ಅವರು ಪ್ರಶ್ನಿಸಿದ್ದರು.ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಅವರು ಸಭೆಯಲ್ಲಿ ತಿಳಿಸಿದ್ದರು.

ಅಡ್ಡೂರು ಸೇತವೆ ಶಿಥಿಲಗೊಂಡಿರುವುದರಿಂದ ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಈ ಸೇತುವೆಯಲ್ಲಿ ಬಸ್ಸು ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ನಿರ್ಭಂದ ಹೇರಿರುತ್ತಾರೆ. ಬಸ್ಸು ಸಂಚಾರ ಇಲ್ಲದೆ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಹಾಗೂ ಪ್ರಸಿದ್ದ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿರುತ್ತದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 50.00 ಕೋಟಿ ಬೇಕಾಗಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ಥಿಗೊಳಿಸಲು ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಮುಗಿದರು ಕಾಮಗಾರಿ ಆರಂಭಕ್ಕೆ ವಿಳಂಭಗೊಳಿಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದರು.

ಶಾಸಕ ರಾಜೇಶ್‌ ನಾಯ್ಕ್‌ ಅವರು ಸಭೆಯಲ್ಲಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ ಅವರು ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯನ್ನು ಮುಂದಿನ ಮೂರು ದಿನಗಳೊಳಗೆ ಆರಂಭಿಸಲಾಗುವುದು. ಹಾಗೂ ಈ ಸೇತುವೆಯ ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂ. 50.00 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದರು. ಅದರಂತೆ  ಇಂದು ದುರಸ್ತಿ ಕಾಮಗಾರಿಗೆ ಚಾಲನೆ ದೊರೆತಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts