ಬಂಟ್ವಾಳ

ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ – ಮಾತನಾಡುವ ಮೂಲಕ ಭಾಷೆ ಬೆಳವಣಿಗೆ ಸಾಧ್ಯ: ವಿದ್ಯಾರ್ಥಿನಿ ಅಂಕಿತಾ

ಬಂಟ್ವಾಳದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಪಥಸಂಚಲನ, ಧ್ವಜವಂದನೆ ನಡೆಯಿತು.

ಜಾಹೀರಾತು

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಾಮದಪದವು ಹೈಸ್ಕೂಲ್ ವಿದ್ಯಾರ್ಥಿನಿ ಅಂಕಿತಾ, ನಮ್ಮ ಭಾಷೆ ಉಳಿಯಬೇಕಾದರೆ ಕನ್ನಡದಲ್ಲಿ ಮಾತನಾಡಬೇಕು, ಬೇರೆ ಭಾಷೆಗಳನ್ನು ಮಿಶ್ರ ಮಾಡಿ ಮಾತನಾಡುವುದಲ್ಲ. ಕನ್ನಡ ಭಾಷೆಗೆ ಸ್ವಂತ ಲಿಪಿ ಇದೆ. ಕನ್ನಡ ಭಾಷೆ ಅಭಿವೃದ್ಧಿ ನವೆಂಬರ್ ಒಂದರಂದಷ್ಟೇ ಅಲ್ಲ ಪ್ರತಿದಿನವೂ ಆಗಬೇಕಾದ ಕಾರ್ಯ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಪ್ರಭಾರ ತಹಶಿಲ್ದಾರ್ ಅರವಿಂದ ಕೆ.ಎಂ ಸಂದೇಶ ನೀಡಿ, ಕನ್ನಡ ಭಾಷೆಯಲ್ಲಿ ಇರುವ ವೈವಿಧ್ಯಗಳನ್ನು ವಿವರಿಸಿ, ಭಾಷೆಯ ಮೇಲೆ ಪ್ರೀತಿ ಹಾಗೂ ಉತ್ತೇಜನ ನೀಡಿದಾಗ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಆಂಕಿತಾ ದಿಕ್ಸೂಚಿ ಭಾಷಣ ಮಾಡಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಇಂದು ಕನ್ನಡ ಬಳಕೆಗೆ ಸರ್ವರೂ ಒತ್ತು ನೀಡಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಳವಾಗಬೇಕು. ಕನ್ನಡ ಮಾತನಾಡುವ ಸಿಬ್ಬಂದಿ ಬ್ಯಾಂಕುಗಳಲ್ಲಿ ಕಾಣಿಸುತ್ತಿಲ್ಲ ಎಂಬುದನ್ನು ಗಮನ ಸೆಳೆದರು. ಕನ್ನಡಿಗರಿಗೆ ಉತ್ತೇಜನ ನೀಡುವ ಕಾರ್ಯಗಳಾಗಬೇಕು ಎಂದ ಅವರು ವಿದ್ಯಾರ್ಥಿಗಳನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಹೆತ್ತವರ ಪಾತ್ರವೂ ಮುಖ್ಯವಾಗುತ್ತದೆ ಎಂಬ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣವೊಂದು ಅಗತ್ಯವಿದೆ. ಇದಕ್ಕೆ ಜನಪ್ರತಿನಿಗಳು, ಅಕಾರಿಗಳು ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಈ ವೇಳೆ ತಾಲೂಕು ಪಂಚಾಯಿತಿ ವತಿಯಿಂದ ಬಂಟ್ವಾಳ ತಾಲೂಕಿನ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದು, ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಕಾರಿ ಮಂಜುನಾಥನ್ ಎಂ.ಜಿ. ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಕಲಾ ಕಾರಂತ ನಿರ್ವಹಿಸಿದರು.

KANNADA RAJYOTSAVA PROGRAM HELD AT BANTWAL TALUK, DAKSHINA KANNADA

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.