ರಾಜ್ಯ ಸರ್ಕಾರದ ನಿರ್ದೇಶನದನ್ವಯ ಬಂಟ್ವಾಳ ತಾಲೂಕಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಸೆ.15ರಂದು ಫರಂಗಿಪೇಟೆಯಿಂದ ಮಿತ್ತೂರು, ಕಬಕದ ವರೆಗೆ ಮಾನವ ಸರಪಳಿಯನ್ನು ರೂಪಿಸಲಾಗುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಸುಮಾರು 20,000 ಮಂದಿ ಭಾಗವಹಿಸಲಿದ್ದಾರೆ ಎಂದು ತಹಸೀಲ್ದಾರ್ ಅರ್ಚನಾ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರ್ವಾಹ್ನ 9 ಗಂಟೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ನಿಗದಿತ ಸ್ಥಳದಲ್ಲಿ ಹಾಜರಿರುವುದು. ಪೂರ್ವಾಹ್ನ 9.30 ಕ್ಕೆ ಸಾಲಿನಲ್ಲಿ ನಿಲ್ಲಬೇಕಾಗಿದ್ದು, 9.37ರಿಂದ ನಾಡಗೀತೆಯನ್ನು ಹಾಡುವುದು ಮತ್ತು 9.55ರಿಂದ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು 20000 ನಾಗರಿಕರು ಭಾಗವಹಿಸುವ ಕಾರ್ಯಕ್ರಮವಾಗಿರುವುದರಿಂದ ನಿಗದಿತ ಸ್ಥಳಗಳಲ್ಲಿಯೇ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡುವುದು. ರಸ್ತೆಯಲ್ಲಿ ವಾಹನ ದಟ್ಟಣೆಯಾಗದಂತೆ ತಡೆಯುವ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎಲ್ಲ ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ಎಲ್ಲರೂ ಕಡ್ಡಾಯವಾಗಿ ಕೊಡೆಗಳನ್ನು ಕೊಂಡೊಯ್ಯಬೇಕು. ಸರಪಳಿ ಸಾಲಲ್ಲಿ ನಿಲ್ಲುವ ಸಂದರ್ಭ ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳಿಗೆ ವಾಹನ ನಿಲುಗಡೆ ಸ್ಥಳದಿಂದ ಕಾಲ್ನಡಿಗೆ ದೂರದಲ್ಲಿ ನಿಲ್ಲಲು ಅನುವುಮಾಡಿಕೊಡುವುದು. ಕಾರ್ಯಕ್ರಮವು ಎಲ್ಲ ಇಲಾಖೆಗಳ ಸಹಕಾರದೊಂದಿಗೆ ನಡೆಯಲಿದ್ದು, ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದೆ. ಮಾನವ ಸರಪಳಿಯಲ್ಲಿ ಭಾಗವಹಿಸುವವರು ತಮ್ಮ ಮಾಹಿತಿಯನ್ನು https://democracydaykarnataka.in/ ವೆಬ್ ಸೈಟ್ ಗೆ ಸಲ್ಲಿಸಬಹುದು. ಮಾಹಿತಿ ಅಪ್ ಲೋಡ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಿಟ್ಲ ಪಟ್ಟಣ ಪಂಚಾಯತ್ ಮತ್ತು ಬಂಟ್ವಾಳ ಪುರಸಭಾ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದವರು ಸೂಚಿಸಿದ್ದಾರೆ.