ಕಲ್ಲಡ್ಕ

ಪತ್ರಿಕಾ ದಿನಾಚರಣೆ ಅಂಗವಾಗಿ ಆದಿವಾಸಿ ಅಭಿವೃದ್ಧಿ, ಅರಿವು ನೆರವು ಕಾರ್ಯಕ್ರಮ

ಜಾಹೀರಾತು

ಬಂಟ್ವಾಳ: 25 ವರ್ಷಗಳಾದರೂ ಜಾಗದ ರೆಕಾರ್ಡ್ ಆಗಿಲ್ಲ ಎಂದು ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಂಕೋಡಿ ಕಾಲೊನಿಯ ಮಹಿಳೆ ಮೈರೆ ಅವರು ತಹಸೀಲ್ದಾರ್ ಅವರ ಬಳಿ ಅಹವಾಲು ನೀಡಿದ್ದು, ಈ ಕುರಿತು ಗಮನಹರಿಸುವುದಾಗಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ (ರಿ) ಬಂಟ್ವಾಳ ಆಶ್ರಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಆದಿವಾಸಿ ಅಭಿವೃದ್ಧಿ ಅರಿವು ನೆರವು ಕಾರ್ಯಕ್ರಮ ಮಂಗಳವಾರ ಬೋಳಂತೂರು ನಾರಂಕೋಡಿ ಕಾಲನಿಯ ಮೈರೆ ಎಂಬವರ ಮನೆಯಲ್ಲಿ ನಡೆಯಿತು.

ಈ ಸಂದರ್ಭ ಮಹಿಳೆ ಮನವಿಗೆ ಸ್ಪಂದಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಅರ್ಚನಾ ಭಟ್, ಆದಿವಾಸಿ ಸಮುದಾಯಕ್ಕೆ ಕೃಷಿಭೂಮಿ ಮಂಜೂರಾತಿಗೆ ಅವಕಾಶಗಳ ಕುರಿತು ಪರಿಶೀಲನೆ ಮಾಡಿಕೊಂಡು ಗರಿಷ್ಠ ಪ್ರಯತ್ನ ಮಾಡುವೆ, ಎರಡು ಕುಟುಂಬಗಳಿಗೆ ಆಹಾರದ ಕಿಟ್ ಸಿಗದೇ ಇರುವ ಕುರಿತು ಪರಿಶೀಲನೆ ನಡೆಸುತ್ತೇವೆ, ಬುಟ್ಟಿ ಹೆಣೆಯುವ ಶೆಡ್ ವಿಸ್ತರಣೆಗೆ ಐಟಿಡಿಪಿಯವರ ಜೊತೆ ಮಾತುಕತೆ ನಡೆಸುವೆ ಎಂದರು.

ಇಂದು ಪತ್ರಿಕೋದ್ಯಮವು ಪ್ರಗತಿಪರವಾಗಿದ್ದರೆ ಅಭಿವೃದ್ಧಿ ಸಾಧ್ಯ. ಜವಾಬ್ದಾರಿಯುತ ಪತ್ರಿಕೋದ್ಯಮದಿಂದ ಉತ್ತಮ ಫಲಿತಾಂಶಗಳು ದೊರಕುತ್ತವೆ, ಈ ನಿಟ್ಟಿನಲ್ಲಿ ಬಂಟ್ವಾಳದ ಪತ್ರಕರ್ತರ ಸಂಘ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡಿದೆ ಎಂದರು.

ಈ ಸಂದರ್ಭ ಕಾಲೊನಿ ನಿವಾಸಿಗಳ ಪರವಾಗಿ ಮಾತನಾಡಿದ ಮನೆಯೊಡತಿ ಮೈರೆ, ಈ ಕಾಲೊನಿಯಲ್ಲಿ ಐದು ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿಗೆ ಬಂದು 25 ವರ್ಷಗಳಾದರೂ ಜಾಗದ ರೆಕಾರ್ಡ್ ಆಗಿಲ್ಲ. ಮಾರ್ಗ ಅರ್ಧ ಆಗಿದೆ. ಬೇಸಗೆಯಲ್ಲಿ ಕುಡಿಯುವ ನೀರು ದೊರಕುತ್ತಿಲ್ಲ. ಬೋರ್ ವೆಲ್ ಮಾಡಿದ್ದರೂ ಅದು ಸುಸ್ಥಿತಿಯಲ್ಲಿಲ್ಲ. ಎರಡು ಕುಟುಂಬಗಳಿಗೆ ಸರಿಯಾಗಿ ಫುಡ್ ವಿತರಣೆ ಆಗುತ್ತಿಲ್ಲ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಹೈಸ್ಕೂಲಿಗೆ ಹೋಗುವ ಓರ್ವ ವಿದ್ಯಾರ್ಥಿನಿ ಈ ಕಾಲೊನಿಯಲ್ಲಿದ್ದಾರೆ. ತನ್ನ ಮನೆ ಹೊಸದಾಗಿ ನಿರ್ಮಾಣಗೊಂಡಿದ್ದು, ಇದಕ್ಕೆ ಸಿಟೌಟ್ ನಿರ್ಮಾಣಕ್ಕೆ ಶಾಸಕರು ನೆರವು ನೀಡಿದ್ದಾರೆ. ತಾವು ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು, ಕಾಡಿಗೆ ಪೂರಕ ವಸ್ತು ಸಂಗ್ರಹಕ್ಕೆ ಹೋಗುತ್ತೇವೆ. ಕರಕುಶಲ ವಸ್ತುಗಳನ್ನು ಸುರಕ್ಷಿತವಾಗಿಡಲು ಸಂಜೀವಿನಿ ಸಂಘದಿಂದ ಶೆಡ್ ಆಗಿದ್ದು, ಅದಿನ್ನೂ ವಿಸ್ತಾರವಾಗಬೇಕು ಎಂದು ಬೇಡಿಕೆಗಳ ಪಟ್ಟಿ ಹಾಗೂ ಜೀವನದ ಸ್ಥಿತಿಗತಿಯ ಮಾಹಿತಿ ನೀಡಿದರು. ಇದೇ ಕಾಲೊನಿಯ ಮಹಿಳೆ ಈಗ ಆಶಾ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ, ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಕೆಲವರು ಕರಕುಶಲ ವಸ್ತು ನಿರ್ಮಾಣ ಮಾಡುತ್ತಿದ್ದಾರೆ ಎಂದು ಸ್ಥಿತಿಗತಿ ಕುರಿತು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಮಾತನಾಡಿ, ಬಂಟ್ವಾಳ ತಾಲೂಕಿನ ಕಾಲೊನಿ ಜನರ ಬದುಕನ್ನು ಹೊರಜಗತ್ತಿಗೆ ತೆರೆಯುವ ಈ ಕಾರ್ಯ ಮಹತ್ವದ್ದಾಗಿದ್ದು, ಇಲಾಖೆ ವತಿಯಿಂದ ಸಹಕಾರ ನೀಡುವುದಾಗಿ ಹೇಳಿದರು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಂದಾಯ, ಆರೋಗ್ಯ ಇಲಾಖೆಗಳ ಸಿಬಂದಿ ಸಹಿತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ನಡೆಯಿತು. ಇದೇ ವೇಳೆ ಕಾಲೊನಿ ನಿವಾಸಿಗಳಿಗೆ ಅಕ್ಕಿ ವಿತರಣೆ ನಡೆಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ಪತ್ರಕರ್ತ ಕಿರಣ್ ಸರಪಾಡಿ ವಂದಿಸಿದರು. ಪತ್ರಕರ್ತರ ಸಂಘದ ಸದಸ್ಯರಾದ ವೆಂಕಟೇಶ ಬಂಟ್ವಾಳ, ರತ್ನದೇವ ಪುಂಜಾಲಕಟ್ಟೆ, ಗಣೇಶ ಪ್ರಸಾದ ಪಾಂಡೇಲು, ಹರೀಶ ಮಾಂಬಾಡಿ, ರಮೇಶ್ ಕೆ. ಪುಣಚ, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.