ಬಂಟ್ವಾಳ: ಕೆಎಸ್ಆರ್ ಟಿಸಿ ಬಸ್ ಗಳ ಬೇಡಿಕೆ ಹಾಗೂ ನಿಲುಗಡೆ ಸಮಸ್ಯೆ ಸಹಿತ ಪ್ರಯಾಣಿಕರ ಅಹವಾಲುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಅಧಿಕಾರಿಗಳಾದ ಪುತ್ತೂರು ವಿಭಾಗೀಯ ಸಂಚಾರ ಅಧಿಕಾರಿ ಮುರಳೀಧರ ಆಚಾರ್ಯ, ಮಂಗಳೂರು ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್, ಬಂಟ್ವಾಳ ಡಿಪೊ ಮೆನೇಜರ್ ಶ್ರೀಷ ಭಟ್, ಮಂಗಳೂರು ಮೂರನೇ ಡಿಪೊ ಮೆಜೇಜರ್ ಮಂಜುನಾಥ್ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ಕೆಲ ಸಮಸ್ಯೆಗಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಶಾಸಕರು ಕರೆ ಮಾಡಿ ಸೂಚನೆಗಳನ್ನು ನೀಡಿದರು.
ಮಡಿಕೇರಿಗೆ ತೆರಳುವ ಬಸ್ ಗಳು ಮಾಣಿಯಲ್ಲಿ ಈಗಾಗಲೇ ಸ್ಟಾಪ್ ನೀಡುತ್ತಿದ್ದು, ಕಲ್ಲಡ್ಕದಲ್ಲೂ ನೀಡುವಂತೆ ಶಾಸಕರು ಸೂಚಿಸಿದ್ದು, ಅಧಿಕಾರಿಗಳು ಸ್ಪಂದಿಸಿದರು.
ಆಗಸ್ಟ್ ತಿಂಗಳಾಂತ್ಯದಲ್ಲಿ ಸಿಬಂದಿ ನೇಮಕವಾಗಲಿದ್ದು, ಈ ಸಂದರ್ಭ ಹೆಚ್ಚುವರಿ ಬಸ್ ಗಳನ್ನು ಅವಶ್ಯಕತೆ ಇದ್ದಲ್ಲಿ ಹಾಕುವ ಕುರಿತು ಸೂಚನೆ ನೀಡಲಾಯಿತು. ಬಾಳ್ತಿಲ, ಶಂಭೂರು, ಸರಪಾಡಿ ಸಹಿತ ಬಿ.ಸಿ.ರೋಡ್ ಪೇಟೆಯಲ್ಲಿ ಬಸ್ ನಿಲುಗಡೆ, ಪ್ರಯಾಣಿಕರ ಬವಣೆಯ ಕುರಿತು ಸ್ಥಳೀಯರು ಶಾಸಕರ ಮೂಲಕ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕೊರೊನಾ ಕಾಲದಲ್ಲಿ ನಿಂತಿದ್ದ ಕೆಲ ರೂಟ್ ಗಳ ಬಸ್ ಸೇವೆಗಳನ್ನು ಮರುಸ್ಥಾಪಿಸುವುದಾಗಿ ತಿಳಿಸಿದರು. ಸರಪಾಡಿ ಕಡೆಗೆ ಸಂಚಾರ ಆರಂಭಗೊಂಡ ಬಸ್ ಕೆಲವೇ ದಿನಗಳಲ್ಲಿ ತಿರುಗಾಟ ನಿಲ್ಲಿಸಿದ್ದು, ಅದನ್ನು ಮತ್ತೆ ಆರಂಭಿಸುವಂತೆ ಸೂಚಿಸಲಾಯಿತು. ಖಾಸಗಿ ವಾಹನಗಳು ಕೆಎಸ್ಸಾರ್ಟಿಸಿ ಬಸ್ ಗೆ ಸ್ಪರ್ಧೆ ಎನ್ನುವಂತೆ ಅದೇ ಹೊತ್ತಿನಲ್ಲಿ ಆಗಮಿಸುವುದು, ಖಾಲಿ ಬಸ್ ಗಳಿದ್ದರೂ ಬಸ್ ಗೆ ಹತ್ತದೇ ಇರುವುದೇ ಮೊದಲಾದ ವಿಚಾರದ ಕುರಿತು ಚರ್ಚಿಸಲಾಯಿತು. ಬಸ್ ಪಾಸ್ ವ್ಯವಸ್ಥೆಯ ಕುರಿತು ಕೆಲವೊಂದು ಗೊಂದಲಗಳನ್ನು ಪರಿಹರಿಸಲಾಯಿತು. ಈ ಸಂದರ್ಭ ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ದೇವದಾಸ ಶೆಟ್ಟಿ, ವಜ್ರನಾಥ ಕಲ್ಲಡ್ಕ, ದಿನೇಶ್ ಅಮ್ಟೂರು, ಆನಂದ ಶಂಭೂರು, ಜಯರಾಮ ರೈ, ಸದಾನಂದ ನಾವೂರು ಮತ್ತಿತರರು ಉಪಸ್ಥಿತರಿದ್ದರು.
ಬೆಳಗಿನ ಅವಧಿಯಲ್ಲಿ ಬಿ.ಸಿ.ರೋಡಿನಲ್ಲಿ 141 ಬಸ್ಗಳು ಓಡಾಡುತ್ತಿದ್ದು, ಹೆಚ್ಚುವರಿ ಬಸ್ ಗಳ ಬೇಡಿಕೆಯನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಈಗಾಗಲೇ 46 ಬಸ್ ಗಳು ಧರ್ಮಸ್ಥಳ ಮಂಗಳೂರು ರೂಟ್ ನಲ್ಲಿ ಸಂಚರಿಸುತ್ತಿದ್ದು, ನಾಲ್ಕು ಸೂಪರ್ ಫಾಸ್ಟ್ ಬಸ್ ಗಳು ಓಡಾಡುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಿಬಂದಿ ಕೊರತೆ ಆಗಸ್ಟ್ ನಲ್ಲಿ ನೀಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮಂಗಳೂರಿನಿಂದ ಶಂಭೂರಿಗೆ ಹೋಗುವ ಹಾಲ್ಟ್ ಬಸ್ ಕೊರೊನಾ ಸಂದರ್ಭ ನಿಂತಿತ್ತು. ಅದನ್ನು ಮರುಆರಂಭಿಸುವಂತೆ ಬೇಡಿಕೆಗೆ ಸ್ಪಂದನೆ ದೊರಕಿತು. ಪುತ್ತೂರು – ಮಂಗಳೂರು ಬಸ್ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಜಾಸ್ತಿ ಬೇಕು ಎಂಬ ಬೇಡಿಕೆ ಬಂತು.