ಬಂಟ್ವಾಳ: ಜೀವನಪೂರ್ತಿ ಬಡವರ, ಶ್ರಮಿಕರ ಪರ ಹಾಗೂ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ತನ್ನ ಶಕ್ತಿಮೀರಿ ಪ್ರಯತ್ನಿಸಿದವರನ್ನು ಗುರುತಿಸಿ ಗೌರವಾರ್ಪಣೆ ಮಾಡುವ ಕಾರ್ಯ ಅರ್ಥಪೂರ್ಣವಾದ ಆಚರಣೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಪರ ಹೋರಾಟ ಸಮಿತಿಯ ಸ್ಥಾಪಕರೂ, ಸಮಾನ ಮನಸ್ಕ ಸಂಘಟನೆಯ ಸಮನ್ವಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರೂ, ಜನಪರ ಹೋರಾಟಗಾರ ಬಿ.ಎಂ.ಪ್ರಭಾಕರ ದೈವಗುಡ್ಡೆ ಅವರಿಗೆ ಸಮಾನ ಮನಸ್ಕ ಸಮನ್ವಯ ಸಂಘಟನೆಗಳ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.
ಪ್ರಭಾಕರ ದೈವಗುಡ್ಡೆ ಅವರು ತನ್ನೊಂದಿಗೆ ಹಲವು ಸಾಮಾಜಿಕ ಸಮಸ್ಯೆಗಳ ವಿಚಾರಗಳ ಕುರಿತು ಗಮನ ಸೆಳೆಯುತ್ತಿರುತ್ತಾರೆ, ಜನರಿಗಾಗಿ ಹಾಗೂ ಅವರ ಸಮಸ್ಯೆಗಳನ್ನು ನೀಗಿಸಲು ಮಿಡಿಯುವ ಅವರ ಕಾಳಜಿ ಸ್ತುತ್ಯರ್ಹ ಎಂದು ರೈ ಹೇಳಿದರು.
ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ಮಾತನಾಡಿ, ಇಂದು ಮಾಧ್ಯಮಗಳು ಪಾಸಿಟಿವ್ ವಿಚಾರಗಳ ಕುರಿತು ಗಮನಹರಿಸಬೇಕಾದ ಅವಶ್ಯಕತೆ ಇದ್ದು, ಪ್ರಭಾಕರ ದೈವಗುಡ್ಡೆ ಅವರಂಥ ತೆರೆಮರೆಯಲ್ಲಿರುವವರ ಬೆಳಕು ಚೆಲ್ಲಬೇಕಾಗಿದೆ, ಯುವ ಜನತೆ ಇಂಥವರ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದರು.
ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಮಾತನಾಡಿ, ಪ್ರಭಾಕರ ದೈವಗುಡ್ಡೆ ಅವರು ಶೋಷಿತರ ಪರ ಕೆಲಸ ಮಾಡುವ ಪರಿಯನ್ನು ಶ್ಲಾಘಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳದ ಮಾಜಿ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಪತ್ರಕರ್ತರೊಂದಿಗೆ ಪ್ರಭಾಕರ ದೈವಗುಡ್ಡೆ ಅವರ ಒಡನಾಟಗಳನ್ನು ವಿವರಿಸಿದರು. ಪತ್ರಕರ್ತ ಹರೀಶ ಮಾಂಬಾಡಿ ಹಾಗೂ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿಯ ಕೃಷ್ಣ ಅಲ್ಲಿಪಾದೆ ಮಾತನಾಡಿದರು. ಸಮಾನ ಮನಸ್ಕ ಸಮನ್ವಯ ಸಮಿತಿ ಗೌರವಾಧ್ಯಕ್ಷ ರಾಜ ಚಂಡ್ತಿಮಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು ವಹಿಸಿದ್ದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಕಾರ್ಮಿಕ ಮುಖಂಡ ಬಿ.ಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಸಲೀಂ ಬೋಳಂಗಡಿ ಸನ್ಮಾನಪತ್ರ ವಾಚಿಸಿದರು. ಎಂ.ಎಚ್.ಮುಸ್ತಫಾ ಬೋಳಂಗಡಿ ವಂದಿಸಿದರು. ರಂಗಕರ್ಮಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು.