ಕವರ್ ಸ್ಟೋರಿ

ಕಾಮಗಾರಿ ನಡೆಯುತ್ತಿದೆ!!!! — ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಸಾಗುವ ವೇಳೆ ಎಚ್ಚರವಿರಲಿ!!

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದು ಗೊತ್ತೇ ಇದೆ. ಇದರ ಆರಂಭಿಕ ಜಾಗ ಬಿ.ಸಿ.ರೋಡ್ ನ ಸೇತುವೆ ಸಮೀಪ ರಸ್ತೆ ಅಗಲಗೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ಸ್ಥಳೀಯರಾದರೆ ರಸ್ತೆ ಸಂಚರಿಸುವ ಸಂದರ್ಭ ಜಾಗ್ರತೆ ವಹಿಸುತ್ತಾರೆ. ಆದರೆ ನೇರವಾಗಿ ಇದೇ ರಸ್ತೆಯಲ್ಲಿ ಸಾಗುವ ಸಂದರ್ಭ ಸಾಕಷ್ಟು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಬಿ.ಸಿ.ರೋಡ್ ಜಂಕ್ಷನ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಸುತ್ತುಹಾಕುವ ಸಂದರ್ಭ ವಾಹನ ಸವಾರರು ಮುಂಜಾಗರೂಕತೆ ವಹಿಸುವುದು ಅವಶ್ಯ.

ಬಿ.ಸಿ.ರೋಡ್ ನಿಂದ ಹಲವು ದಾರಿಗಳಿಗೆ ಕವಲೊಡೆಯುವ ಈ ಜಂಕ್ಷನ್ ಗೆ ಬಿ.ಸಿ.ರೋಡಿನಿಂದ ಮುಂದೆ ಹೋಗುವ ಸಂದರ್ಭ ಎಡಕ್ಕೆ ಚಲಿಸಿದರೆ, ಪುಂಜಾಲಕಟ್ಟೆ, ಸಿದ್ಧಕಟ್ಟೆ ಕಡೆಗೆ ಹೋಗುವ ರಸ್ತೆ ಸಿಗುತ್ತದೆ. ಅಲ್ಲೇ ಪಕ್ಕದಲ್ಲಿ ಬಂಟ್ವಾಳ ಪೇಟೆಯೊಳಗೆ ಸಾಗುವ ರಸ್ತೆ ಕವಲೊಡೆಯುತ್ತದೆ. ನೇರವಾಗಿ ಸಾಗಿದರೆ ಬೆಂಗಳೂರು ಹೆದ್ದಾರಿ. ಮಾಣಿಯಿಂದ ಬಲಕ್ಕೆ ತಿರುಗಿದರೆ, ಮೈಸೂರಿಗೆ ದಾರಿ. ಇದೇ ಸರ್ಕಲ್ ನಲ್ಲಿ ಪೂರ್ತಿಯಾಗಿ ಬಲಕ್ಕೆ ತಿರುಗಿದರೆ, ಪಾಣೆಮಂಗಳೂರು ಪೇಟೆಗೆ ಹೋಗುವ ರಸ್ತೆ. ಇದು ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ಸುತ್ತಮುತ್ತಲಿನ ಭೌಗೋಳಿಕ ಸನ್ನಿವೇಶ.

ಸರಿಸುಮಾರು ಮಂಗಳೂರಿನ ನಂತೂರು ಜಂಕ್ಷನ್ ರೀತಿಯಲ್ಲೇ ಈ ಜಂಕ್ಷನ್ ಇದೆ.  ಐದು ರಸ್ತೆಗಳಿಂದ ಇಲ್ಲಿ ವಾಹನಗಳು ಒಂದೇ ಕಡೆ ಜಮಾಯಿಸುತ್ತವೆ. ವಿಶೇಷವಾಗಿ ಬಂಟ್ವಾಳ, ಪುಂಜಾಲಕಟ್ಟೆ ಭಾಗದಿಂದ ಬಿ.ಸಿ.ರೋಡ್ ಕಡೆ ತಿರುಗುವ ಸಂದರ್ಭ ಎಡಬದಿಯಿಂದ ನೇರವಾಗಿ ಹೆದ್ದಾರಿಯಿಂದ ಮಂಗಳೂರು ಕಡೆಗೆ ಆಗಮಿಸುವ ವಾಹನಗಳು, ರೈಲ್ವೆ ಮೇಲ್ಸೇತುವೆಯತ್ತ ಸಾಗುವ ಸಂದರ್ಭ ಕೊಂಚ ಎಡಕ್ಕೆ ಚಲಿಸಬೇಕು. ಈ ಸಂದರ್ಭ ಬಿ.ಸಿ.ರೋಡ್ ನಿಂದ ಬೆಂಗಳೂರು ರಸ್ತೆಗೆ ಸೇರುವ ವಾಹನಗಳೂ ಬಂದರೆ, ಗೊಂದಲ ಕಟ್ಟಿಟ್ಟ ಬುತ್ತಿ. ಈ ವೇಳೆ ವಾಹನಗಳು ಪಥ ಮರೆತು, ಜಾಗ ಸಿಕ್ಕಲ್ಲಿ ನುಗ್ಗುತ್ತವೆ.

ರಸ್ತೆ ಬದಿ ವ್ಯಾಪಾರಕ್ಕೆ ಬಿದ್ದಿಲ್ಲ ಕಡಿವಾಣ

ಈ ಸರ್ಕಲ್ ಆಸುಪಾಸಿನ ರಸ್ತೆ ಬದಿಯಲ್ಲಿ ಕೊಡೆ ಮಾರಾಟ, ಈರೋಳ್, ಹಣ್ಣು ಹಂಪಲು ಮಾರಾಟ, ಹೆಲ್ಮೆಟ್ ಮಾರುವವರು ಹೀಗೆ ರಸ್ತೆ ಬದಿ ಮಾರಾಟ ಮಾಡುವವರು ಜನರನ್ನು ಆಕರ್ಷಿಸಲು ಕುಳಿತುಕೊಳ್ಳುತ್ತಾರೆ. ಅವರು ಸುರಕ್ಷಿತವಾದ ಜಾಗದಲ್ಲಿ ಮಾರಾಟ ಮಾಡಿದರೆ ಅಡ್ಡಿ ಇಲ್ಲ. ಆದರೆ ಕೊಂಡುಕೊಳ್ಳಲೆಂದು ರಸ್ತೆಯಲ್ಲೇ ವಾಹನ ನಿಲ್ಲಿಸಿ, ವ್ಯಾಪಾರಕ್ಕಿಳಿಯುವವರು ಇರುವ ಕಾರಣ ಮತ್ತೆ ಗೊಂದಲ ಸೃಷ್ಟಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ. ಹೆದ್ದಾರಿ ನಿರ್ಮಾಣ ಆ ಭಾಗದಲ್ಲಿ ಸಂಪೂರ್ಣವಾದರೆ, ಸುವ್ಯವಸ್ಥಿತವಾದ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಆಗಬೇಕು. ಬಂಟ್ವಾಳದಿಂದ ಬಿ.ಸಿ.ರೋಡಿಗೆ ಬರುವ ವಾಹನಗಳು ಹಾಗೂ ಬಿ.ಸಿ.ರೋಡಿನಿಂದ ಪಾಣೆಮಂಗಳೂರಿಗೆ ಹೋಗುವ ವಾಹನಗಳ ಸಹಿತ ಯಾವುದೇ ವಾಹನಕ್ಕೂ ಎಲ್ಲಿ ಚಲಿಸಬೇಕು ಎಂಬ ಸರಿಯಾದ ಮಾರ್ಗದರ್ಶನ ನೀಡುವ ವ್ಯವಸ್ಥೆ ಆಗಬೇಕು. ಇಲ್ಲದಿದ್ದರೆ, ರಾತ್ರಿ ವೇಳೆಯಂತೂ ಅಪಾಯ ಕಾದು ಕುಳಿತಿರುತ್ತದೆ.

 

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.