ಸಜಿಪ ಪೇಟೆಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣವೊಂದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, ಲಾರಿ ಸಹಿತ ಲಾರಿ ಚಾಲಕ ಹಾಗೂ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಲಾರಿ ಚಾಲಕರ ಕಾಸರಗೋಡು ಕುಂಜತ್ತೂರು ಮಹಮ್ಮದ್ ಶಾಫಿ (28) ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ಸಜಿಪ ಪೇಟೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಸರಕಾರದ ಸೊತ್ತಾದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು, ಪತ್ತೆಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿ, ಲಾರಿಯನ್ನು ತಡೆದು ವಿಚಾರಿಸಿದ ಸಂದರ್ಭ ಸಾಗಾಟ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.