ಬಿ.ಸಿ.ರೋಡ್ ಪೇಟೆಯಲ್ಲಿ ಫ್ಲೈಓವರ್ ಬಳಿ ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭ ಸರಿಯಾಗಿ ರಸ್ತೆ ಅಗಲಗೊಳ್ಳದ ಪರಿಣಾಮ ಸಮಸ್ಯೆಯನ್ನು ಭವಿಷ್ಯದಲ್ಲಿ ಅನುಭವಿಸಬೇಕಾದೀತು ಎಂಬ ಕುರಿತ ಸರಣಿ ವರದಿಗಳು www.bantwalnews.comನಲ್ಲಿ ಪ್ರಕಟವಾಗಿದ್ದವು. ಇದೀಗ ಅದು ನಿಜ ಆಗುತ್ತಿದೆ. ಸರ್ವೀಸ್ ರಸ್ತೆಯ ಪಶ್ಚಾತ್ ಪರಿಣಾಮಗಳು ಹಾಗೂ ಒಟ್ಟಾರೆಯಾಗಿ ನಿರ್ಮಿಸಲಾದ ರಸ್ತೆಯ ಪರಿಣಾಮ, ಬಿ.ಸಿ.ರೋಡಿನ ವಿವೇಕನಗರ ಎಂಬ ಪುಟ್ಟ ಜಾಗಕ್ಕೆ ತೆರಳುವವರು ಸಂಕಟಪಡಬೇಕಾಗಿದೆ.
ಈ ರಸ್ತೆಯಲ್ಲಿ ವಾಹನಗಳನ್ನು ತಿರುಗಿಸುವುದೇ ದೊಡ್ಡ ಸವಾಲು. ಸರಕಾರಿ ನೌಕರರ ಭವನದ ಎದುರು ವಿವೇಕನಗರಕ್ಕೆ ತಿರುಗಬೇಕು. ಸರ್ವೀಸ್ ರಸ್ತೆಯಿಂದ ಅಲ್ಲಿಗೆ ತಿರುಗುವುದು ಎಂದರೆ ಅಕ್ಷರಶಃ ಯೂಟರ್ನ್ ಹೊಡೆಯುವುದು ಎಂದರ್ಥ. ಎಲ್ಲವೂ ಸರಿಯಾಗಿದ್ದರೆ, ತಿರುಗಿಸುವುದಕ್ಕೇನೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಆದರೆ ತಿರುಗುವ ಜಾಗ ಮಾತ್ರ ಅತಿ ಡೇಂಜರ್. ಅಲ್ಲೇ ವಾಹನಗಳು ಪಾರ್ಕ್ ಮಾಡಲಾಗುತ್ತದೆ. ಅಲ್ಲೇ ಮಂಗಳೂರಿಗೆ ಬಸ್ಸುಗಳಿಗೆ ಕಾಯುವ ಜನರು ಇರುತ್ತಾರೆ, ಅದೇ ಜಾಗದಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುತ್ತವೆ. ಹೀಗಿರುವ ಪರಿಸ್ಥಿತಿಯಲ್ಲಿ ವಾಹನಗಳನ್ನು ಹೇಗೆ ತಿರುಗಿಸುವುದು ಅಥವಾ ವಿವೇಕನಗರದಿಂದ ಸರ್ವೀಸ್ ರಸ್ತೆಗೆ ಹೇಗೆ ಬರುವುದು ಎಂಬ ಪ್ರಶ್ನೆಯನ್ನು ಸ್ಥಳೀಯರು ಮುಂದಿಡುತ್ತಿದ್ದಾರೆ. ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ರಸ್ತೆಯಲ್ಲಿ ಯಾರೋ ಕಾಂಕ್ರೀಟ್ ಅಗೆದುಹಾಕಿದ್ದಾರೆ.ಬಳಿಕ ಕೇವಲ ಜಲ್ಲಿಹುಡಿ ಹಾಕಲಾಗಿದೆಯೇ ವಿನಃ ಮತ್ತಷ್ಟು ರಸ್ತೆ ಕೆಟ್ಟದಾಗಿದೆ ಎಂಬುದು ಸ್ಥಳೀಯರ ದೂರು.