ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ವತಿಯಿಂದ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಗುರುವಾರ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಉದ್ಘಾಟಿಸಿ, ತೆಂಗು ಬೆಳೆಗಾರರ ಹಿತರಕ್ಷಣೆಗೆ ಇಂಥ ಕಾರ್ಯಕ್ರಮಗಳು ಪ್ರಯೋಜನಕಾರಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಸರಕಾರ ರೈತರ ಕಂಪನಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅತಿ ಸಣ್ಣ ರೈತರಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದಲೂ ಕಂಪನಿ ಸ್ಥಾಪನೆ ನಿರ್ಮಾಣ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ತೆಂಗು ಬೆಳೆಸಲಾಗುತ್ತಿದೆ. ಉತ್ತಮ ಫಸಲು ಗಿಡದ ಆಯ್ಕೆಯಿಂದ ಆರಂಭವಾಗುತ್ತದೆ. ಉತ್ತಮ ತಳಿಯ ಆಯ್ಕೆ ನಮಗೆ ಯಾವ ಉದ್ದೇಶಕ್ಕೆ ಬೇಕು ಎಂಬುದಕ್ಕೆ ನಿರ್ಧರಿತವಾಗುತ್ತದೆ ಎಂದರು. ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವಾಗ ಅದರ ಮೂಲ ಶೋಧನೆ ಅಗತ್ಯ. ನೀರು ಕಡಿಮೆ ಇದ್ದರೂ ಉತ್ತಮ ಫಸಲು ನೀಡುವ ತಳಿಗಳನ್ನು ಆಯ್ಕೆ ಮಾಡಿ. ತೆಂಗಿನ ಗಿಡಗಳನ್ನು ನಾಟಿ ಮಾಡುವುದೂ ಮುಖ್ಯ. ಪ್ರತಿಯೊಂದು ಗಿಡಕ್ಕೂ ಎಂಟು ಮೀಟರ್ ಅಂತರ ಇರಲಿ. ಬುಡ ಬಿಡಿಸುವಾಗ ಬೇರು ಕೆತ್ತಬೇಡಿ ಎಂದು ತೆಂಗು ಬೆಳೆಯ ಕುರಿತು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ. ವಹಿಸಿದ್ದರು. ನಿರ್ದೇಶಕಿ ಲತಾ ಈ ಸಂದರ್ಭ ವೇದಿಕೆಯಲ್ಲಿದ್ದರು. ಸಂಸ್ಥೆಯ ಸಿಇಒ ಚೇತನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು.ನವ್ಯಶ್ರೀ ಸ್ವಾಗತಿಸಿದರು.