ಹವಾಮಾನ ಆಧಾರಿತ ಬೆಳೆ ವಿಮೆ ಪಹಣಿ ಪತ್ರಿಕೆಯಲ್ಲಿ ಬೆಳೆ ನಮೂದಿಸಲು ಅವಧಿ ವಿಸ್ತರಣೆಗೆ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
ಈ ಕುರಿತು ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗೆ ಅವರು ಪತ್ರ ಬರೆದಿದ್ದಾರೆ.
ಹವಾಮಾನ ಆಧಾರಿತ ಬೆಳೆ ಯೋಜನೆ ಅಡಿಯಲ್ಲಿ ದ.ಕ ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದಿರುವ ಲಕ್ಷಾಂತರ ಅಡಿಕೆ ಬೆಳೆಗಾರರು ಯೋಜನೆ ಪ್ರಯೋಜನ ಪಡೆಯಲು ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಿಕೆ ಬೆಳೆ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮೆ ಪ್ರೀಮಿಯಂ ಪಾವತಿಸಿರುತ್ತಾರೆ.ಆದರೆ ಅಡಿಕೆ ಬೆಳೆಯುತ್ತಿರುವ ಜಮೀನಿಗೆ ಸಂಬಂಧಿಸಿದಂತೆ ಪಹಣಿ ಪತ್ರಿಕೆಯಲ್ಲಿ ಅಡಿಕೆ ಬೆಳೆ ನಮೂದಾಗಿರದೇ ಬೆಳೆ ವಿಮೆ ಅರ್ಜಿಗಳು ತಿರಸ್ಕಾರವಾಗುವ ಸಂಭವವಿರುತ್ತದೆ. ಸಪ್ಟೆಂಬರ್ 15ರ ಒಳಗೆ ಪಹಣಿ ಪತ್ರಿಕೆಯಲ್ಲಿ ಅಡಿಕೆ ಬೆಳೆ ನಮೂದು ಮಾಡಿಸಲು ರೈತರಿಗೆ ಗಡುವು ನೀಡಿದ್ದು, ತದನಂತರ ಅರ್ಜಿಗಳು ತಿರಸ್ಕಾರವಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದವರು ಹೇಳಿದ್ದಾರೆ.
ಈಗಾಗಲೇ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ ಪೈಕಿ ಶೇ 50ರಷ್ಟು ರೈತರ ಪಹಣಿಯಲ್ಲಿ ಅಡಿಕೆ ಬೆಳೆ ನಮೂದು ಆಗಿರುವುದಿಲ್ಲ. ಸಂಬಂಧ ಪಟ್ಟ ಇಲಾಖೆಯವರು ಮಂದಗತಿಯಲ್ಲಿ ಕಾರ್ಯಪ್ರವೃತ್ತರಾಗಿರುವುದರಿಂದ ಪಹಣಿಯಲ್ಲಿ ಬೆಳೆ ನಮೂದು ಪ್ರಕ್ರಿಯೆ ಪ್ರಗತಿ ಕಂಡಿಲ್ಲ. ಈ ನಿಟ್ಟಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ ಪಹಣಿಯಲ್ಲಿ ಬೆಳೆ ನಮೂದು ಪ್ರಕ್ರಿಯೆಯನ್ನು ಬೆಳೆ ಸಮೀಕ್ಷೆ ಅವಧಿ ಸೆ.30ರವರೆಗೆ ವಿಸ್ತರಣೆ ಮಾಡಬೇಕು ಅಥವಾ ಹಿಂದಿನ ವರ್ಷಗಳಲ್ಲಿ ಇದ್ದ ಮಾನದಂಡಗಳ ಅನುಸಾರ ಅನುಷ್ಠಾನಗೊಳಸಿಬೇಕು ಎಂದು ವಿನಂತಿಸಿದ್ದಾರೆ.