ಪುನಶ್ಚೇತನ ಮಾಡಿದರೆ ನೀರಿನ ಸಮಸ್ಯೆ ನಿವಾರಣೆಯಾಗಬಹುದು
ಕಾಲ ಬದಲಾದಂತೆ ಜನರಿಗೆ ಉಪಯೋಗವಾಗುತ್ತಿದ್ದ ವಸ್ತುಗಳು ತೆರೆಮರೆಗೆ ಸರಿಯುವುದು ಇದ್ದದ್ದೇ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಲ್ಲೂ ಹಾಗೆ ಆಗಿದೆ. ಒಂದು ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ಮೆರೆದಿದ್ದ ಪೇಟೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಾವಿ ಇತ್ತು ಎನ್ನುವುದೇ ಈಗ ಮರೆತುಹೋದಂತಿದೆ.
ಪಾಣೆಮಂಗಳೂರು ಸರಕಾರಿ ಶಾಲೆಯ ಪಕ್ಕದಲ್ಲಿ ಗಿಡಗಂಟಿಗಳಿಂದ ಕೂಡಿದ ಪೊದೆಗಳಿಂದ ಆವೃತವಾಗಿರುವ ಕಸಕಡ್ಡಿಗಳು ತುಂಬಿದ ಬಾವಿಯ ಕತೆ ಇದು.
ರಸ್ತೆಯ ಒಂದು ಬದಿಯಲ್ಲಿ ದೇವಸ್ಥಾನ, ಮತ್ತೊಂದು ಬದಿಯಲ್ಲಿ ಶಾಲೆ. ಮಧ್ಯೆ ಶಾಲೆಯ ಆವರಣದ ಪಕ್ಕದಲ್ಲೇ ಗಿಡಗಂಟಿಗಳಿಂದ ಬಾವಿ ಮುಚ್ಚಿಹೋಗಿ, ಕಸಕಡ್ಡಿಗಳಿಂದ ಕೂಡಿದೆ. ಇದರ ಸಮೀಪ ಸುಳಿಯಲೂ ಅಸಾಧ್ಯವಾಗುವಂತೆ ಇರುವ ಚರಂಡಿಯಲ್ಲಿ ಕಸ ಎಸೆಯುತ್ತಾರೆ, ಪೊದೆಗಳು ಇರುವ ಜಾಗದಲ್ಲೇ ಮೂತ್ರವಿಸರ್ಜನೆಯನ್ನೂ ಮಾಡುತ್ತಾರೆ. ಆದರೆ ಬಾವಿ ತಿಪ್ಪೆಗುಂಡಿಯಂತಾಗಿದೆ.
ಎಲ್ಲರಿಗೂ ಬೇಕಾದ ಬಾವಿ ಈಗ ನಿರ್ಲಕ್ಷ್ಯಕ್ಕೆ:
ಪಕ್ಕದಲ್ಲೇ ಇರುವ ಸರಕಾರಿ ಶಾಲೆಗೂ ಇದೇ ಬಾವಿಯ ನೀರನ್ನು ಉಪಯೋಗಿಸಲಾಗುತ್ತಿತ್ತು. ಹಿಂದೆಲ್ಲಾ ಕೊಡಪಾನದಿಂದ ಬಾವಿಯ ನೀರನ್ನು ಸೇದುತ್ತಿದ್ದ ಕಾಲದಲ್ಲಿ ಇದೇ ನೀರನ್ನು ಉಪಯೋಗಿಸಿ ಕಾರು ತೊಳೆಯಲಾಗುತ್ತಿತ್ತು. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಪಾಣೆಮಂಗಳೂರು ಪೇಟೆಯಿಂದ ಮಂಗಳೂರಿಗೆ ನಿತ್ಯ ಸರ್ವೀಸ್ ಕಾರುಗಳು ಓಡಾಡುತ್ತಿದ್ದವು. ಅವೆಲ್ಲವೂ ಅಂಬಾಸಿಡರ್ ಕಾರುಗಳು. ಇವುಗಳನ್ನು ಈಗಿನಂತೆ ಸರ್ವೀಸ್ ಸ್ಟೇಶನ್ ಗೆ ಹೋಗಿ ತೊಳೆಯುತ್ತಿರಲಿಲ್ಲ. ಈ ಬಾವಿಯ ನೀರನ್ನೇ ಚಾಲಕರು ಸೇದಿ ಕಾರು ತೊಳೆಯುತ್ತಿದ್ದರು.
ಬಾಡಿಗೆ ಮುಗಿಸಿ ಸಂಜೆ ವೇಳೆ ಬರುವ ಕಾರುಗಳು ಮತ್ತು ಬೆಳಿಗ್ಗೆ ಎದ್ದು ರೆಡಿಯಾಗುವ ಕಾರುಗಳನ್ನು ಇದೇ ಬಾವಿಯಿಂದ ನೀರು ತೆಗೆದು ತೊಳೆಯುತ್ತಿರುವ ದೃಶ್ಯಗಳು ಮೂರು ದಶಕದ ಹಿಂದೆ ಸರ್ವೇಸಾಮಾನ್ಯವಾಗಿತ್ತು. ಪುರಸಭಾ ವ್ಯಾಪ್ತಿಯಲ್ಲಿ ಇಲಾಖೆ ಪೈಪ್ ಮೂಲಕ ಶುಧ್ದ ಕುಡಿಯುವ ನೀರನ್ನು ಮನೆಬಾಗಿಲಿಗೆ ಪೂರೈಕೆ ಮಾಡತೊಡಗಿದಾಗ ಬಾವಿ ತನ್ನಿಂದ ತಾನೆ ತನ್ನ ಸೌಂದರ್ಯ ಕಳಚುತ್ತಾ ಬಂತು. ಇದೀಗ ಪಾಣೆಮಂಗಳೂರಿನಲ್ಲಿ ಸರಕಾರಿ ಬಾವಿಯೊಂದತ್ತಾ? ಅದು ಎಲ್ಲಿತ್ತು ಎಂದು ಹುಡುಕುವ ಪರಿಸ್ಥಿತಿ ಇದೆ.
ಪುರಸಭಾ ಇಲಾಖೆಯಲ್ಲಿ ಕೆರೆಗಳ ಪುನಶ್ಚೇತನಕ್ಕೆ ಅವಕಾಶಗಳಿವೆ, ಆದೇ ರೀತಿ ಅಲ್ಲೊಂದು ಇಲ್ಲೊಂದು ಅಳಿದುಳಿದ ಅಳಿವಿನಂಚಿನಲ್ಲಿರುವ ಸರಕಾರಿ ಬಾವಿಗಳ ಉಳಿಸಲು ಇಲಾಖೆಯ ಜೊತೆಗೆ ಸಂಘಸಂಸ್ಥೆಗಳು ನೆರವಾಗುವ ಅವಶ್ಯಕತೆ ಇದೆ. ನದಿಯಲ್ಲೇ ನೀರು ಕಡಿಮೆಯಾಗುತ್ತಿರುವ ಕಾಲದಲ್ಲಿ ಜಲಮರುಪೂರಣ, ಜಲಸಂರಕ್ಷಣೆಗೆ ಬಾವಿಗಳು ಅವಶ್ಯವೂ ಹೌದು. ಮೊದಲೇ ಮಳೆ ಇಲ್ಲ, ಇರುವ ನೀರಿನ ಸೆಲೆಗಳನ್ನು ಹೀಗೆ ನಿರುಪಯುಕ್ತವನ್ನಾಗಿಸಿದ್ದಕ್ಕೇ ಪ್ರಕೃತಿ ಬಿಸಿಲಿನ ಶಾಪ ನೀಡುತ್ತಿದೆ ಎಂದು ಆಡಿಕೊಳ್ಳುವಂತೆ ಆಗಿದೆ.