ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ದೇವರಾದ ಅರಸು ಅವರ 108ನೇ ಜನ್ಮದಿನಾಚರಣೆ ಭಾನುವಾರ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಬಂಟ್ವಾಳ ಪುರಸಭೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬಳಿಕ ಉಪನ್ಯಾಸ ನೀಡಿದ ತುಂಬೆ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಕೆ.ಗಂಗಾಧರ ಆಳ್ವ, ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪರ, ಶೋಷಿತರ, ದಮನಿತರ ಪರ ಕ್ರಾಂತಿಕಾರಿ ಕಾನೂನು ತರುವ ಮೂಲಕ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದರು. ಭೂಮಸೂದೆ, ಭೂನ್ಯಾಯಮಂಡಳಿ ಸಹಿತ ಹಲವು ವಿಚಾರಗಳಲ್ಲಿ ಅರಸು ಕೈಗೊಂಡ ನಿರ್ಧಾರಗಳು ಸಾರ್ವತ್ರಿಕವಾಗಿ ಪ್ರಶಂಸೆಗೊಳಗಾದವು. ಕೇಂದ್ರ ಸರಕಾರಗಳೂ ತಮ್ಮ ನೀತಿಗಳಲ್ಲಿ ಅರಸು ಕೈಗೊಂಡ ನಿರ್ಧಾರಗಳನ್ನು ಅಳವಡಿಸಿಕೊಂಡದ್ದು, ಗಮನಾರ್ಹ. ಭೂಸುಧಾರಣೆ ಮೂಲಕ ಬಡವರಿಗೆ ನೆರವಾದ ಅವರು, ಹಿಂದುಳಿದ ವರ್ಗಗಳ ಏಳಿಗೆಗಾಗಿ ಸವಾಲುಗಳನ್ನು ಎದುರಿಸಿ ಕಾಯಿದೆ ಜಾರಿಗೊಳಿಸಿದರು. ಅರಣ್ಯ ಕಾಯಿದೆ ಜಾರಿಗೊಳಿಸುವ ಮೂಲಕ ಹಸಿರು ಉಳಿಸಿದರು ಎಂದರು.
ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಶುಭ ಹಾರೈಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ, ಅಕ್ಷರ ದಾಸೋಹದ ಅಧಿಕಾರಿ ನೋಣಯ್ಯ, ತಾಪಂ ಮ್ಯಾನೇಜರ್ ಶಾಂಭವಿ ರಾವ್, ಶಿಕ್ಷಣ ಇಲಾಖೆ ಅಧಿಕಾರಿ ಪ್ರತಿಮಾ, ಹಾಸ್ಟೆಲ್ ಗಳ ಸುಪರಿಂಟೆಂಡೆಟ್ ಗಳಾದ ಪುಷ್ಪಾ, ಸೀತಾ, ಅನುಪಮಾ, ಧರ್ಮ, ಅಂಬುಜಾಕ್ಷಿ, ಕಚೇರಿ ಸಿಬ್ಬಂದಿ ರೇಖಾ, ಗೌತಮ್, ಅರ್ಪಿತಾ ಮತ್ತು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ ಸ್ವಾಗತಿಸಿದರು. ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. ಸುಪ್ರಿಯಾ ವಂದಿಸಿದರು.