ಕಳೆದ ನಾಲ್ಕು ಮಳೆಗೆ ಕಾಸಿನಗಲ ಇದ್ದ ಡಾಂಬರು ರಸ್ತೆಯ ಹೊಂಡ ಕೆರೆಯಂತಾಗಿದೆ. ನೀರು ತುಂಬಿ ವಾಹನ ಸವಾರರ ದಿಕ್ಕು ತಪ್ಪಿಸುತ್ತಿದೆ. ಹೆದ್ದಾರಿ ಅದೃಶ್ಯವಾಗಿದೆ. ಅದರ ಬದಲಾಗಿ ಕೆಸರು, ಮಣ್ಣು ರಸ್ತೆಗೇ ಬಂದಿದೆ. ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡುತ್ತೇವೆ ಎಂದು ಜನಪ್ರನಿಧಿಗಳ ಮುಂದೆ ಭರವಸೆ ನೀಡಿದ ಅಧಿಕಾರಿಗಳ ಮಾತು ‘ಬೊಳ್ಳ’ದಲ್ಲಿ ಹೋಗಿದೆ.
ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುವ ಜಾಗದ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ರಸ್ತೆಗಳು ಅಕ್ಷರಶಃ ನಾಶವಾಗಿದೆ. ಬಿ.ಸಿ.ರೋಡ್ ಅಡ್ಡಹೊಳೆ ಮಾರ್ಗದಲ್ಲಿ ಬಿ.ಸಿ.ರೋಡ್ ನಿಂದ ಪಾಣೆಮಂಗಳೂರು ಸರ್ವೀಸ್ ರೋಡ್ ಆರಂಭದಲ್ಲೇ ಹೊಂಡ ಕಾಣಿಸುತ್ತದೆ. ಮೆಲ್ಕಾರ್ ತಲುಪುವ ಹೊತ್ತಿಗೆ ಅಲ್ಲಲ್ಲಿ ಹೊಂಡಗಳು ಗೋಚರಿಸುತ್ತವೆ. ಮೆಲ್ಕಾರ್ ನಿಂದ ಮುಂದಕ್ಕೆ ಹೋದಾಗ, ಕಲ್ಲಡ್ಕ ಪೇಟೆಯಲ್ಲಿ ಇಡೀ ರಸ್ತೆಯೇ ನಾಶವಾಗಿದೆ. ಅಲ್ಲಿಂದ ಪೂರ್ಲಿಪ್ಪಾಡಿ ತಲುಪುವ ವೇಳೆ ಹೊಂಡಗಳ ಸಾಮ್ರಾಜ್ಯ. ಮಾಣಿ ಜಂಕ್ಷನ್ ತಲುಪುವ ಹೊತ್ತಿಗೇ ಮತ್ತೆ ಸಮಸ್ಯೆಗಳು. ಇನ್ನು ಮೆಲ್ಕಾರ್, ಪಾಣೆಮಂಗಳೂರು, ಮಾಣಿಯ ಅಂಡರ್ ಪಾಸ್ ಗಳು ನರಕದ ಇನ್ನೊಂದು ರೂಪಗಳಾಗಿವೆ.