ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಮತ್ತು ರುಬೇಲ್ಲಾ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪರಿಣಾಮಕಾರಿ ಸಹಕಾರ ಅತಿ ಅಗತ್ಯ, ಖಾಸಗಿ ಆಸ್ಪತ್ರೆಗಳು ಇದಕ್ಕೆ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಹೇಳಿದರು.
ಅವರು ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದಡಾರ ಮತ್ತು ರುಬೇಲ್ಲಾ ನಿರ್ಮೂಲನೆ ಹಾಗೂ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಲೀಯೊ ನಿರ್ಮೂಲನೆಯಂತೆಯೇ ದಡಾರ ರುಬೆಲ್ಲಾ ಕೂಡ ಜಿಲ್ಲೆಯಿಂದ ನಿರ್ಮೂಲನೆ ಆಗಬೇಕು ಅದಕ್ಕಾಗಿ ವಹಿಸಬೇಕಾದ ಕ್ರಮಗಳು ಹಾಗೂ ಸೂಚಿಸಲಾದ ಜವಾಬ್ದಾರಿಗಳನ್ನು ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಾಗಿ ನಿಭಾಯಿಸಬೇಕು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳು ಇಳಿಮುಖವಾಗಿದ್ದು ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಮೀಕ್ಷೆಗಳನ್ನು ಕೈಗೊಳ್ಳಬೇಕು, ಅಲ್ಲಿ ಕಂಡುಕೊಂಡ ಮಾಹಿತಿಯ ಪ್ರಕಾರ ದಡಾರ ರುಬೆಲ್ಲಾ ತಡೆಯಲು ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಗರ್ಭಿಣಿ ಮತ್ತು ಹುಟ್ಟಿದ ಮಗುವಿನ ಮೇಲೆ ದಡಾರ ರುಬೆಲ್ಲಾದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದ ಅವರು, ಇದರ ನಿರ್ಮೂಲನೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಇದರ ನಿರ್ಮೂಲನೆಗೆ 9 ಹಾಗೂ 16 ತಿಂಗಳಲ್ಲಿ ಲಸಿಕಾರಣ ಮಾಡಲಾಗುತ್ತಿದ್ದು, ಶೇಕಡಾ ನೂರರಷ್ಟು ಲಸಿಕಾಕರಣ ಕಡ್ಡಾಯವಾಗಿ ಆಗಬೇಕು, ಎಲ್ಲಿಯೂ ಕೂಡ ಯಾವುದೇ ಅರ್ಹ ಫಲಾನುಭವಿ ಇದರಿಂದ ವಂಚಿತರಾಗಬಾರದು. ಅದಕ್ಕಾಗಿ ಕಾರ್ಮಿಕ ಇಲಾಖೆಯವರು ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳನ್ನು ಪಟ್ಟಿ ಮಾಡಿ ಆರೋಗ್ಯ ಇಲಾಖೆಯಿಂದ ಕ್ಯಾಂಪ್ ಗಳ ಆಯೋಜನೆಗೆ ಸಹಕರಿಸಬೇಕು, ಅದೇ ರೀತಿ ಅಲ್ಲದೇ ಸಮುದಾಯ ಆಧಾರಿತವಾಗಿ ಲಸಿಕಾಕರಣ ಮಾಡುವುದು ಉಪಯುಕ್ತವಾಗಲಿದೆ, ದಡಾರ ರುಬೆಲ್ಲಾ ನಿರ್ಮೂಲನೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾದದ್ದಾಗುದೆ, ಅದನ್ನು ನಿಭಾಯಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಬೀದ್ ಗಡಿಯಾಳ್, ಡಿ.ಎಂ.ಒ ಡಾ.ನಳಿನ್ ಕುಲಾಲ್,ಡಿ.ಎಲ್.ಒ ಡಾ.ಸುದರ್ಶನ್ ಹಾಗೂ ಇತರರು ವೇದಿಕೆಯಲ್ಲಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸ್ವಾಗತಿಸಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯಧಿಕಾರಿಗಳು, ಸಿ.ಡಿ.ಪಿ.ಒಗಳು ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ವೈದ್ಯರು,ಡಿಪಿಒಗಳು,ಸಮಾಜ ಕಲ್ಯಾಣ ಇಲಾಖೆ,ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಶಿಕ್ಷಣ ಇಲಾಖೆ, ಕಾರ್ಮಿಕರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.